ಬೆಂಗಳೂರು: ಜಗಳ ಬಿಡಿಸಲು ಬಂದ ಚಿಕ್ಕಪ್ಪನನ್ನೇ ಕೊಲೆಗೈದ ಯುವಕ
ಬೆಂಗಳೂರು, ಅ.2: ಜಗಳ ಬಿಡಿಸಲು ಬಂದ ಚಿಕ್ಕಪ್ಪನನ್ನೇ ವ್ಯಕ್ತಿಯೊಬ್ಬ ಕೊಲೆಗೈದಿರುವ ಪ್ರಕರಣ ನಗರದ ಹೊರವಲಯದ ವಿಶ್ವನಾಥಪುರದ ಕಗ್ಗನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ ಎನ್ನಲಾಗಿದೆ.
ಕಗ್ಗನಹಳ್ಳಿಯ ಧರ್ಮಪಾಲ್ (42) ಹತ್ಯೆಯಾದವರು ಎಂದು ತಿಳಿದುಬಂದಿದ್ದು, ಕೃತ್ಯವೆಸಗಿದ ಅವರ ಅಣ್ಣನ ಮಗ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ಇತ್ತೀಚೆಗಷ್ಟೇ ವಿವಾಹವಾಗಿದ್ದ. ದಂಪತಿ ನಡುವೆ ಆಗಾಗ್ಗೆ ಕೌಟುಂಬಿಕ ವಿಚಾರಗಳಿಗಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ರಾಘವೇಂದ್ರ ಸೋಮವಾರ ರಾತ್ರಿ ಕೂಡ ಪತ್ನಿಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ ಮನೆಯಲ್ಲೇ ಇದ್ದ ಆತನ ಚಿಕ್ಕಪ್ಪ ಧರ್ಮಪಾಲ್ ಜಗಳವನ್ನು ಬಿಡಿಸಲು ಹೋಗಿದ್ದಾರೆ. ಈ ವೇಳೆ ರಾಘವೇಂದ್ರ, ಧರ್ಮಪಾಲ್ ಅವರ ಕಪಾಳಕ್ಕೆ ಬಲವಾಗಿ ಹೊಡೆದಿದ್ದು, ಕುಸಿದು ಬಿದ್ದ ಧರ್ಮಪಾಲ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಂಬಂಧ ವಿಶ್ವನಾಥಪುರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.