ನಾವು ಪೂಜಿಸುವ ರಾಮ, ಕೃಷ್ಣ, ಗಣೇಶ ಬ್ರಾಹ್ಮಣರಲ್ಲ: ಅನಂತ್ ಕುಮಾರ್ ಹೆಗಡೆ
ಬೆಂಗಳೂರು, ಅ.2: ನಾವು ಪೂಜಿಸುವ ರಾಮ, ಕೃಷ್ಣ, ಗಣಪತಿ ಯಾರೂ ಕೂಡ ಬ್ರಾಹ್ಮಣರಲ್ಲ. ಆದರೆ, ರಾವಣ ಬ್ರಾಹ್ಮಣ ಸಮುದಾಯದವನು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಇಂದಿಲ್ಲಿ ಹೇಳಿದ್ದಾರೆ.
ಮಂಗಳವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಮೈತ್ರೀ-ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್ ವತಿಯಿಂದ ಆಯೋಜಿಸಿದ್ದ, ಮೇಧಾನಮನಮ್ ಸಾಮರಸ್ಯಮ್ ತಥಾ ಸಂಸ್ಕೃತೋತ್ಸವಃ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಮ, ಕೃಷ್ಣ, ಗಣಪತಿ ಯಾರೂ ಕೂಡ ಬ್ರಾಹ್ಮಣರಲ್ಲ. ಆದರೆ, ರಾವಣ ಬ್ರಾಹ್ಮಣ ಸಮುದಾಯದವನು. ಆದರೆ, ರಾವಣನಿಗೆ ನಾವು ಗುಡಿ ಕಟ್ಟಿಲ್ಲ. ರಾಮ, ಕೃಷ್ಣ, ಗಣಪತಿಗೆ ದೇವಸ್ಥಾನ ನಿರ್ಮಿಸಿ ಪೂಜೆ ಮಾಡುತ್ತೇವೆ ಎಂದು ಹೇಳಿದರು.
ಸಂಸ್ಕತ ಕೇವಲ ಭಾಷೆಯಲ್ಲ. ಅದು ಶಕ್ತಿ. ಸುಸಂಸ್ಕೃತ ಜೀವನ ನಡೆಸಲು ಸಂಸ್ಕೃತ ಅತ್ಯಗತ್ಯ. ಕಂಪ್ಯೂಟರ್ ಒಪ್ಪುವ ಭಾಷೆ ಸಂಸ್ಕೃತ ಮಾತ್ರ. ಯೂರೋಪ್ ಸೇರಿ ಇತರ ದೇಶಗಳು ಸಂಸ್ಕೃತದ ಬಗ್ಗೆ ಆಸಕ್ತಿ ಹೊಂದಿವೆ. ಆದರೆ, ನಮ್ಮ ದೇಶದಲ್ಲಿ ಮಾತ್ರ ಸಂಸ್ಕೃತಕ್ಕೆ ಬೆಲೆ ಸಿಗುತ್ತಿಲ್ಲ ಎಂದು ತಿಳಿಸಿದರು.
ಸಂಸ್ಕೃತ ವಿಶ್ವದ ಬಹುತೇಕ ಭಾಷೆಗಳಲ್ಲಿ ಹಾಸುಹೊಕ್ಕಿದೆ. ಜಗತ್ತಿನ ಅನೈತಿಕತೆಗೆ ಸಂಸ್ಕೃತ ಮದ್ದಾಗಿದೆ. ಆದರೆ, ಸಂಸ್ಕೃತವನ್ನು ಬ್ರಾಹ್ಮಣರ ಭಾಷೆ ಎಂದು ಬಿಂಬಿಸುವ ಕೆಲಸ ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆಯುತ್ತಿದೆ. ಹೀಗಾಗಿಯೇ, ದೇಶಕ್ಕೆ ಏನೂ ಕಲಿಯದೆ ಇದ್ದವರಿಂದ ಯಾವುದೇ ತೊಂದರೆಯಿಲ್ಲ. ಆದರೆ, ಸಾಕ್ಷರ ರಾಕ್ಷಕರಿಂದ ದೇಶವನ್ನು ರಕ್ಷಿಸಬೇಕಿದೆ ಎಂದು ನುಡಿದರು.
ಕೆಂಪು, ಹಳದಿ ಕನ್ನಡಕ ಧರಿಸಿದ ಜನರು ಆರ್ಯರು ಮಧ್ಯ ಏಷ್ಯಾದಿಂದ ಬಂದವರು ಎಂದು ಹೇಳುತ್ತಾರೆ. ಅಲ್ಲದೆ, ಆರ್ಯ ಎಂಬುದು ಜಾತಿ, ಅವರು ವಲಸಿಗರು ಎಂದು ಬಿಂಬಿಸುತ್ತಿದ್ದಾರೆ. ಆದರೆ, ಆರ್ಯ ಎಂಬುದು ಆರ್ಯನ್ ಎಂಬ ಪದದಿಂದ ಬಂದಿದೆ. ಆರ್ಯನ್ ಎಂದರೆ ಶ್ರೇಷ್ಠ ಮಾನವ ಎಂದರ್ಥ. ಅದನ್ನು ತಿಳಿಯದ ಕೆಂಪಂಗಿ ದಳ ಸುಳ್ಳನ್ನು ಹೇಳುವುದೇ ಜೀವನವನ್ನಾಗಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಸಿನೆಮಾ ಕಲಾವಿದರಾದ ಲಕ್ಷ್ಮೀ ಗೋಪಾಲಸ್ವಾಮಿ, ಸುಚೇಂದ್ರಪ್ರಸಾದ್, ಉದ್ಯಮಿ ಎಸ್.ಷಡಕ್ಷರಿ, ಹಾಸ್ಯ ಬರಹಗಾರ ಎಂ.ಎಸ್.ನರಸಿಂಹಮೂರ್ತಿ ಉಪಸ್ಥಿತರಿದ್ದರು.