×
Ad

ವಾರಕ್ಕೆ 5 ದಿನ ಮಾತ್ರ ಸರಕಾರಿ ಕೆಲಸ: ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಮನವಿ ಪತ್ರ

Update: 2018-10-02 20:02 IST

ಬೆಂಗಳೂರು, ಅ.2: ರಾಜ್ಯ ಸರಕಾರಿ ನೌಕರರ ದಕ್ಷತೆ ಮತ್ತು ಕೆಲಸದ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ವಾರಕ್ಕೆ ಆರು ದಿನಗಳ ಬದಲಾಗಿ ಐದು ದಿನ ಮಾತ್ರ ಕಚೇರಿ ಅವಧಿಯನ್ನು ನಿಗದಿ ಪಡಿಸುವಂತೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

ವಾರಕ್ಕೆ ಐದು ದಿನಗಳ ಕಾಲ ಕೆಲಸದ ಪದ್ಧತಿಯನ್ನು ಜಾರಿಗೆ ತರುವುದರಿಂದ ಸರಕಾರಿ ನೌಕರರಿಂದ ಫಲಿತಾಂಶ ಆಧಾರಿತ ಕಾರ್ಯ ನಿರ್ವಹಿಸಲು ಸುಗಮವಾಗುವುದಲ್ಲದೆ, ಕೆಲಸದ ಗುಣಮಟ್ಟ ಮತ್ತು ಉತ್ಪಾದನೆಯಲ್ಲಿ ಹೆಚ್ಚಳವಾಗಲಿದೆ. ಹಾಗೂ ಕಚೇರಿಗೆ ಗೈರು ಹಾಜರಾತಿ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯ ಸರಕಾರ ಈಗಾಗಲೆ ಹಬ್ಬ, ಜಯಂತಿ ಆಚರಣೆಗಳಿಗೆ ಸಾರ್ವಜನಿಕ ರಜೆ ಘೋಷಿಸಿದೆ. ಹೀಗಾಗಿ ವಾರ್ಷಿಕ ರಜಾ ದಿನಗಳ ಸಂಖ್ಯೆ ಹೆಚ್ಚುತ್ತಲೆ ಹೋಗುತ್ತಿದೆ. ಆದರೆ, ಸಮಾಜ ಸುಧಾರಕರು ಕಾಯಕವೆ ಕೈಲಾಸ ಎಂದು ನಂಬಿ ಬದುಕಿದವರು. ಹೀಗಾಗಿ ಸಾರ್ವಜನಿಕರ ರಜೆಗಳನ್ನು ಮಿತಿಗೊಳಿಸಿ ಅವಶ್ಯವಿರುವ ದಿನಗಳಂದು ರಜೆ ತೆಗೆದುಕೊಳ್ಳುವಂತೆ ನಿರ್ಬಂಧಿತ ರಜೆಯನ್ನು ಹೆಚ್ಚಳ ಮಾಡುವ ಮೂಲಕ ಐದು ದಿನಗಳ ಕೆಲಸದ ಅವಧಿಯನ್ನು ಜಾರಿಗೆ ತರಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News