ಗಾಂಧೀಜಿ, ಆರೆಸ್ಸೆಸ್ ಚಿಂತನೆ ಒಂದೇ: ವಿ.ನಾಗರಾಜ್

Update: 2018-10-02 14:51 GMT

ಬೆಂಗಳೂರು, ಅ.2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹಿಂದು ಧರ್ಮದ ಚಿಂತನೆಗಳನ್ನೇ ಪ್ರತಿಪಾದಿಸಿದ್ದರು, ಹೀಗಾಗಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಗಾಂಧೀಜಿ ಅವರ ಚಿಂತನೆಗಳು ಒಂದೇ ಆಗಿವೆ ಎಂದು ಆರೆಸ್ಸೆಸ್ ಕ್ಷೇತ್ರೀಯ ಸಂಚಾಲಕ ವಿ.ನಾಗರಾಜ್ ಹೇಳಿದ್ದಾರೆ.

ಮಂಗಳವಾರ ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿಯಲ್ಲಿ ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಫೌಂಡೇಷನ್ ಫಾರ್ ಇಂಡಿಕ್ ರಿಸರ್ಚ್ ಸ್ಟಡೀಸ್(ಸ್ಟ್)ನಿಂದ ಏರ್ಪಡಿಸಿದ್ದ ‘ಸಮಯಾತೀತ ಮಹಾತ್ಮ ಗಾಂಧಿ’ ವಿಷಯವಾಗಿ ಅವರು ಉಪನ್ಯಾಸ ನೀಡಿದರು. ದೀನದಯಾಳ್ ಉಪಾಧ್ಯಾಯರು ಪ್ರತಿಪಾದಿಸಿದ ಚಿಂತನೆಗಳು ಮತ್ತು ಗಾಂಧೀಜಿ ಅವರ ಚಿಂತನೆಗಳು ಒಂದೇ ಆಗಿವೆ. ಗಾಂಧೀಜಿ ಅವರು ಶ್ರದ್ಧೆ, ಅಹಿಂಸೆ, ಸತ್ಯ, ಭಗವಂತನ ಕುರಿತಾದ ಚಿಂತನೆಗಳನ್ನು ಪ್ರತಿಪಾದಿಸುತ್ತಿದ್ದರು, ಅವೆಲ್ಲವೂ ಸನಾತನ ಧರ್ಮದ ಚಿಂತನೆಗಳಾಗಿವೆ ಎಂದು ಹೇಳಿದರು. ಗೋಪಾಲಕೃಷ್ಣ ಗೋಖಲೆ ಅವರನ್ನು ಗುರುವಾಗಿ ಸ್ವೀಕರಿಸಿದ್ದ ಗಾಂಧೀಜಿ ರಾಜಕೀಯ ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ ಅವರಿಂದ ಮಾರ್ಗದರ್ಶನ ಕೋರಿದ್ದರು. ಆಗ ರಾಜಕೀಯವನ್ನು ಅಧ್ಯಾತ್ಮವನ್ನಾಗಿಸುವಂತೆ ಗಾಂಧೀಜಿಗೆ ಸಲಹೆ ನೀಡಿದ್ದರು. ಗಾಂಧೀಜಿ ಅವರ ಸರ್ವೊದಯ ಕಲ್ಪನೆಯು ಸಹ ಸಮಾನತೆಯನ್ನು ಪ್ರತಿಪಾದಿಸಿತ್ತು ಎಂದು ನುಡಿದರು.

ಗ್ರಾಮಗಳ ಮೂಲಕ ದೇಶವನ್ನು ಬಲಪಡಿಸುವ ಆರ್ಥಿಕ ನೀತಿಯನ್ನು ಅವರು ಪ್ರತಿಪಾದಿಸಿದ್ದರು. ಅವರು ಚರಕ ಹೊತ್ತು ಬಂದಾಗ ದೇಶ ಹೇಗೆ ಅಭಿವೃದ್ಧಿ ಆಗುತ್ತದೆ ಎಂದು ಹಲವರು ಟೀಕಿಸಿದ್ದರು. ಆದರೆ ಅದೇ ಚರಕದ ಮೂಲಕ ಅವರು ಸ್ವದೇಶಿ ವಸ್ತುಗಳ ಬಳಕೆಯನ್ನು ಪ್ರೋತ್ಸಾಹಿಸಿದರು. ಅವರ ಚಿಂತನೆಗಳು ಸಂಪೂರ್ಣ ಸ್ವದೇಶದಾಗಿದ್ದವು ಎಂದು ಹೇಳಿದರು. ಉಪನ್ಯಾಸದಲ್ಲಿ ಆರೆಸ್ಸೆಸ್ ಕ್ಷೇತ್ರೀಯ ಸಹಕಾರ್ಯವಾಹ ಎನ್. ತಿಪ್ಪೇಸ್ವಾಮಿ, ಪ್ರಾಂತ ಕಾರ್ಯವಾಹ ಡಾ.ಜಯಪ್ರಕಾಶ್, ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎನ್. ದಿನೇಶ್ ಹೆಗ್ಡೆ ಸೇರಿ ಪ್ರಮುಖರಿದ್ದರು.

‘ಮಿಥಿಕ್ ಸೊಸೈಟಿಯಲ್ಲಿ ಗಾಂಧಿ’

ಗಾಂಧೀಜಿ ಅವರು 1927ರಲ್ಲಿ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಭಾಷಣ ಮಾಡಿದ್ದರು. ಮಿಥಿಕ್ ಸೊಸೈಟಿ ಕಾರ್ಯಕ್ರಮಗಳಲ್ಲಿ ವಿದ್ವಾಂಸರೆ ಹೆಚ್ಚಾಗಿ ಭಾಗವಹಿಸುತ್ತಿದ್ದರು. ಅವರ ಮೂಲಕವೇ ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಸಾರುವ ಉದ್ದೇಶವನ್ನು ಗಾಂಧೀಜಿ ಹೊಂದಿದ್ದು ಎಂದು ವಿ. ನಾಗರಾಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News