ಆಧುನಿಕತೆಯ ಭರಾಟೆಯಲ್ಲಿ ಕುಂಬಾರಿಕೆ ಕಣ್ಮರೆ: ಸಚಿವ ಎಚ್.ಡಿ.ರೇವಣ್ಣ

Update: 2018-10-02 15:13 GMT

ಬೆಂಗಳೂರು, ಅ. 2: ಆಧುನಿಕತೆಯ ಭರಾಟೆಯಲ್ಲಿ ಕುಂಬಾರಿಕೆ ಕಣ್ಮರೆಯಾಗಿದ್ದು, ಕುಂಬಾರ ಜನಾಂಗ ಜೀವನ ನಿರ್ವಹಣೆಗೆ ಪರದಾಡುತ್ತಿರುವುದನ್ನು ಸರಕಾರ ಮನಗಂಡಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ನಗರದ ಕೆಆರ್ ವೃತ್ತದ ಕರ್ನಾಟಕ ಸರಕಾರಿ ನೌಕರರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕುಂಬಾರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಸರ್ವ ಸದಸ್ಯರ ಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾಗತೀಕರಣದ ಹೊಡೆತಕ್ಕೆ ಸಿಕ್ಕಿ ಸಂಕಷ್ಟದಲ್ಲಿರುವ ಕುಂಬಾರಿಕೆ ಕಣ್ಮರೆಯಾಗಿದ್ದು, ಕುಂಬಾರ ಸಮುದಾಯದ ಶ್ರೇಯೋಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಹೇಳಿದರು.

ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಣ್ಣ ಸಮುದಾಯಗಳ ಏಳಿಗೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಅದೇ ನಿಟ್ಟಿನಲ್ಲಿ ಸರಕಾರವು ಹಿಂದುಳಿದ ಸಮುದಾಯಗಳ ಪರವಾಗಿ ಕೆಲಸ ಮಾಡಲಿದೆ. ಅಲ್ಲದೆ, ಕರ್ನಾಟಕ ರಾಜ್ಯ ಕುಂಬಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಈಗಾಗಲೇ ಮಂಜೂರಾಗಿರುವ ಬಿಡಿಎ ನಿವೇಶನವನ್ನು ಶೀಘ್ರದಲ್ಲೇ ಹಸ್ತಾಂತರಿಸಲಾಗುವುದು. ಅಲ್ಲದೆ ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ಸರಕಾರದಿಂದ ಹಣಕಾಸಿನ ನೆರವು ನೀಡಲಾಗುವುದು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿ, ಸರಕಾರ ಕುಂಭಕಲಾ ಅಭಿವೃದ್ಧಿ ಮಂಡಳಿಯನ್ನು ದೇವರಾಜ ಅರಸು ನಿಗಮದಿಂದ ಪ್ರತ್ಯೇಕಿಸಿ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು ಹಾಗೂ ಕುಂಬಾರ ಜನಾಂಗವನ್ನು ಪ್ರವರ್ಗ-1ಕ್ಕೆ ಸೇರಿಸಬೇಕೆಂದು ಮನವಿ ಮಾಡಿದರು.

ಐತಿಹಾಸಿಕ ಬೆಂಗಳೂರು ಕರಗಕ್ಕೆ ಮಡಕೆ ಇನ್ನಿತರೆ ಸಾಮಗ್ರಿ ಪೂರೈಕೆ ಮಾಡುತ್ತಿರುವ ಮನೆತನವನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಬಾಬು ಎಸ್.ಕುಂಬಾರ, ಉಪಾಧ್ಯಕ್ಷ ನಾಗರಾಜ್, ಸಂಘಟನಾ ಕಾರ್ಯದರ್ಶಿ ಗುರುರಾಜ್, ಜಂಟಿ ಕಾರ್ಯದರ್ಶಿ ಪಂಕಜ, ನಿರ್ದೇಶಕ ಚಿಕ್ಕವೀರಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News