ಬೆಂಗಳೂರು: ನಗರದಲ್ಲಿ ಹೆಚ್ಚಿದ ಸೆಕೆ

Update: 2018-10-02 15:22 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.2: ನಗರದಲ್ಲಿ ಮಳೆ ಮಾಯವಾಗಿರುವುದರಿಂದ ಮತ್ತೆ ತಾಪಮಾನ ಹೆಚ್ಚಿ ಸೆಕೆಯ ಕಿರಿಕಿರಿ ಶುರುವಾಗಿದೆ. ಸದ್ಯ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಗೆ ದಾಖಲಾಗುತ್ತಿದೆ.

ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕಾಗಿದ್ದರೂ ಮಳೆ ಕಡಿಮೆಯಾಗಿದೆ. ನಗರದಲ್ಲಿ ಕೆಲ ದಿನಗಳ ಹಿಂದಷ್ಟೆ ಸುರಿಯುತ್ತಿದ್ದ ಭಾರಿ ಮಳೆ ಕೊನೆಗೊಂಡಿದ್ದು, ಮಳೆ ಇಲ್ಲದೆ ತಾಪಮಾನ ಹೆಚ್ಚಾಗುತ್ತಿದೆ. ಸೆಪ್ಟೆಂಬರ್ ಮಧ್ಯಭಾಗದಲ್ಲೆ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು. ಬಳಿಕ ಮಳೆ ಬಂದಿದ್ದರಿಂದ 28-29 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿತ್ತು. ಈಗ ಮತ್ತೆ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ.

ಕೆಲ ದಿನಗಳ ಹಿಂದೆ ಹಗಲಿನಲ್ಲಿ ಏರುತ್ತಿದ್ದ ಸೆಕೆ ಸಂಜೆ ಹೊತ್ತಿಗೆ ಮಳೆಯಾಗಿ ಕಡಿಮೆಯಾಗುತ್ತಿತ್ತು. ಈಗ ಮಳೆ ಇಲ್ಲದಿರುವುದರಿಂದ ರಾತ್ರಿಯೂ ಸೆಕೆ ಅಧಿಕವಾಗಿದೆ. ಇನ್ನು ಕೆಲ ದಿನಗಳಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ಗೂ ಏರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನಲ್ಲಿ ಮುಂಗಾರು ಹೋಗಿ ಹಿಂಗಾರಿನ ಆಗಮನವಾಗುತ್ತಿದೆ. ಈ ಹಂತದಲ್ಲಿ ಮತ್ತೆ ಮಳೆ ಆರಂಭವಾಗುವ ಸಾಧ್ಯತೆ ಇದೆ. ಮಳೆಯಾದರೆ ಸೆಕೆ ಕಡಿಮೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News