ಆಧಾರ್: ಸಂವಿಧಾನ ಪೀಠದ ತೀರ್ಪು ನವೀಕರಿಸಿದ ಒಂದು ಹೊಸ ಹೋರಾಟದ ಆರಂಭ

Update: 2018-10-02 19:13 GMT

ವಿಶಿಷ್ಟ ಗುರುತು ಚೀಟಿ ಯೋಜನೆಗೆ ಮೊದಲ ಕಾನೂನು ಸವಾಲನ್ನು ಒಡ್ಡಿದ ಆರು ವರ್ಷಗಳ ನಂತರ, ಇದೀಗ ಸುಪ್ರೀಂ ಕೋರ್ಟ್ ಆಧಾರ್ ಯೋಜನೆ (ಪ್ರಾಜೆಕ್ಟ್)ಯ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ತೀರ್ಪು ನೀಡಿದೆ. ನಾಲ್ವರು ನ್ಯಾಯ ಮೂರ್ತಿಗಳು ಆಧಾರ್ ಯೋಜನೆಯ ಸಿಂಧುತ್ವವನ್ನು ಎತ್ತಿಹಿಡಿದು ತೀರ್ಪು ನೀಡಿದರೆ, ಓರ್ವ ನ್ಯಾಯ ಮೂರ್ತಿ ಆಧಾರ್ ಯೋಜನೆ ಅಸಾಂವಿಧಾನಿಕ ಹಾಗೂ ಆಧಾರ್ ದತ್ತಾಂಶಗಳನ್ನು ಡಿಲೀಟ್ ಮಾಡಬೇಕೆಂದು ಹೇಳಿದ್ದಾರೆ.

ಆಧಾರ್ ಯೋಜನೆ ಕಾರ್ಯರೂಪಕ್ಕೆ ಬಂದು ಕೆಲವು ವರ್ಷಗಳೇ ಕಳೆದ ಬಳಿಕ, ಆಧಾರ್ ಮಸೂದೆಯಲ್ಲಿ ಹಲವು ನ್ಯೂನತೆಗಳಿವೆ ಎಂಬುದನ್ನು ಗಮನಿಸಲಾಯಿತು. ಈಗ ಆಧಾರ್ ಕಾಯ್ದೆಯನ್ನು ಎತ್ತಿ ಹಿಡಿದಿರುವ ನಾಲ್ವರು ನ್ಯಾಯಮೂರ್ತಿಗಳು ಕೂಡ 2016ರ ಆಧಾರ್ ಕಾಯ್ದೆಯ ಹಲವಾರು ಸೆಕ್ಷನ್‌ಗಳನ್ನು ರದ್ದುಗೊಳಿಸಿ, ಆಧಾರ್ ಯೋಜನೆಯನ್ನು ಅನಿಯಂತ್ರಿತವಾಗಿ ವಿಸ್ತರಿಸದಂತೆ ಅದರ ಮೇಲೆ ಮಿತಿ ಹೇರಿದ್ದಾರೆ ಎಂಬುದೂ ಗಮನಾರ್ಹ

ನ್ಯಾಯಮೂರ್ತಿ ಸಿಕ್ರಿಯವರ ತೀರ್ಪಿನ ಪ್ರಕಾರ, ಸಿಬಿಎಸ್‌ಇ, ಎನ್‌ಇಇಟಿ, ಯುಜಿಸಿ ಶಾಲಾ ಪ್ರವೇಶಾತಿಗಳು ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ಆಧಾರ್ ಕಡ್ಡಾಯವೆಂದು ಹೇಳುವಂತಿಲ್ಲ, ಯಾಕೆಂದರೆ ಇವುಗಳು ಕಾಯ್ದೆಯ ಸೆಕ್ಷನ್ 7ರ ಕಕ್ಷೆಯೊಳಗೆ ಬರುವುದಿಲ್ಲ.

ಮುಖ್ಯ ವಿಷಯವೆಂದರೆ ಖಾಸಗಿ ಸಂಸ್ಥೆಗಳು, ಏಜನ್ಸಿಗಳು ಆಧಾರ್ ಕಾರ್ಡ್‌ನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ಕುರಿತು ನಾಗರಿಕರು ಹಾಗೂ ಹಲವು ಮಂದಿ ಸಂಸದರು ವ್ಯಕ್ತಪಡಿಸಿದ್ದ ಆತಂಕ ಹಾಗೂ ಕಾಳಜಿಗಳನ್ನು ಸುಪ್ರೀಂ ಕೋರ್ಟ್ ಪರಿಗಣಿಸಿ ಆಧಾರ್ ಕಾಯ್ದೆಯ 57ನೆಯ ಸೆಕ್ಷನ್‌ನ್ನು ಅಸಾಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿದೆ.

ಬ್ಯಾಂಕ್ ಖಾತೆಗಳಿಗೆ ಮತ್ತು ಮೊಬೈಲ್ ಫೋನ್‌ಗಳಿಗೆ ಆಧಾರ್‌ಕಾರ್ಡ್ ಕಡ್ಡಾಯ ಎನ್ನುವಂತಿಲ್ಲ; ಯಾಕೆಂದರೆ ಅದು ಅಸಾಂವಿಧಾನಿಕವೆಂದು ನ್ಯಾಯಾಲಯ ಹೇಳಿದೆ. ಮಕ್ಕಳ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅದು ನೀಡಿರುವ ತೀರ್ಪು ಮಕ್ಕಳ ಒಂದು ಗೆಲುವು ಎನ್ನಬಹುದು.

‘‘ತಮ್ಮ ಪೋಷಕರ ಒಪ್ಪಿಗೆಯೊಂದಿಗೆ ಆಧಾರ್ ಯೋಜನೆಯಲ್ಲಿ ನೋಂದಾಯಿಸಲ್ಪಟ್ಟಿರುವ ಮಕ್ಕಳು, ಅವರಿಗೆ ಮೆಜಾರಿಟಿಯ ವಯಸ್ಸು ಬಂದಾಗ, ಆಧಾರ್ ಯೋಜನೆಯ ಸವಲತ್ತುಗಳು ಅವರಿಗೆ ಬೇಡವಾದಲ್ಲಿ, ಅವರು ಆಧಾರ್ ಯೋಜನೆಯಿಂದ ಹೊರನಡೆಯುವ ಆಯ್ಕೆಯನ್ನು ಅವರಿಗೆ ನೀಡಲಾಗಿದೆ.’’ ಎಂದು ನ್ಯಾಯಾಲಯ ಹೇಳಿದೆ.

ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸರಕಾರದ ಏಜೆನ್ಸಿಗಳೊಂದಿಗೆ ಆಧಾರ್ ದತ್ತಾಂಶದ ಹಂಚಿಕೆಯನ್ನು ನ್ಯಾಯಾಲಯದ ತೀರ್ಪು ತಡೆದಿದೆ. ‘ರಾಷ್ಟ್ರೀಯ ಭದ್ರತೆ’ ಎಂಬ ಪದಪುಂಜವನ್ನು ಸಂವಿಧಾನದಲ್ಲಿ ವ್ಯಾಖ್ಯಾನಿಸಲಾಗಿಲ್ಲ ಎಂಬುದು ಗಮನಾರ್ಹ. ತಮ್ಮ ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂದಲ್ಲಿ ಗುರುತು ಚೀಟಿ ಪ್ರಾಧಿಕಾರದ ವಿರುದ್ಧ ದೂರುಗಳನ್ನು ಸಲ್ಲಿಸುವ ಹಕ್ಕನ್ನು ಕೂಡ ಈಗ ನೀಡಲಾಗಿದೆ.

ಆದರೆ ಕಲ್ಯಾಣ ಯೋಜನೆಗಳ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಬೇಕೆಂಬ ಆಧಾರ್ ಕಾಯ್ದೆಯ ಏಳನೆಯ ಸೆಕ್ಷನ್‌ನ್ನು ನ್ಯಾಯಾಲಯ ರದ್ದು ಮಾಡದೆ ಇರುವುದು ನಾಗರಿಕರ ಪಾಲಿಗೆ ಆಘಾತಕಾರಿ ಮತ್ತು ನಿರಾಶಾದಾಯಕ. ಆಧಾರ್ ತಂತ್ರಜ್ಞಾನದಿಂದಾಗಿ ಬಡವರ ಬದುಕಿನಲ್ಲಿ ಉಂಟಾಗಿರುವ ಸಮಸ್ಯೆ, ಸಂಕಷ್ಟ ಹಾಗೂ ತೊಂದರೆಯನ್ನು ನ್ಯಾಯಮೂರ್ತಿ ಸಿಕ್ರಿ ನೇತೃತ್ವದ ನ್ಯಾಯಪೀಠವು ಕಡೆಗಣಿಸಿದೆ. ಆಧಾರ್ ಕಾಯ್ದೆಯನ್ನು ಅದು ‘‘ಉಪಯೋಗಿಯಾದ ಕಾನೂನು’’ ಎಂದಿದೆ. ಕಳೆದ ಮೂರು ವರ್ಷಗಳಲ್ಲಿ ಆಧಾರ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಮತ್ತು ಮುಖ್ಯವಾದ ಸಾಮಾಜಿಕ ನೆರವು ಕಾರ್ಯಕ್ರಮಗಳ ದೋಷಗಳಿಂದಾಗಿ 25 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಇದನ್ನು ನ್ಯಾಯಾಲಯ ಪರಿಗಣಿಸದಿರುವುದು ದುರದೃಷ್ಟಕರ. ಟೆಲಿಕಾಮ್ ಆಪರೇಟರ್ಸ್ ಮತ್ತು ಬ್ಯಾಂಕಿಂಗ್ ದತ್ತಾಂಶಗಳು ಸೇರಿದಂತೆ, ಎಲ್ಲೆಲ್ಲಿ ಆಧಾರ್ ಮಾಹಿತಿಯನ್ನು ಉಳಿಸಿಕೊಳ್ಳುವುದು ಇನ್ನು ಮುಂದಕ್ಕೆ ಕಾನೂನು ಬದ್ಧವಲ್ಲವೋ ಆ ಎಲ್ಲಾ ಪೋರ್ಟಲ್ ಗಳಿಂದ ಆಧಾರ್ ದತ್ತಾಂಶಗಳನ್ನು ಡಿಲೀಟ್ ಮಾಡುವಂತೆ ಕೇಂದ್ರ ಸರಕಾರ ತಕ್ಷಣ ಆಜ್ಞೆ ಮಾಡಬೇಕಾಗಿದೆ.

ನ್ಯಾಯಮೂರ್ತಿ ಚಂದ್ರಚೂಡ್ ತೀರ್ಪು ಮೆಜಾರಿಟಿ ತೀರ್ಪು ಆಗಬೇಕಿತ್ತು. ಚಂದ್ರಚೂಡ್ ಅವರು ನ್ಯಾಯಮೂರ್ತಿ ಸಿಕ್ರಿ ಅವರ ತೀರ್ಪಿನ ಕೆಲವು ಅಂಶಗಳ ಬಗ್ಗೆ ಸಹಮತ ವ್ಯಕ್ತಪಡಿಸಿದ್ದರಾದರೂ ಅದರ ಹೆಚ್ಚಿನ ಅಂಶಗಳ ಬಗ್ಗೆ ಭಿನ್ನಮತ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರು ‘‘ಆಧಾರ್ ಕಾಯ್ದೆಯನ್ನು ಒಂದು ಘನ ಮಸೂದೆಯಾಗಿ ಅಂಗೀಕರಿಸಿರುವುದು ಸಂವಿಧಾನಕ್ಕೆ ಮಾಡಿದ ಮೋಸ’’ ಎಂದಿದ್ದಾರೆ. ‘‘ರಾಜ್ಯಸಭೆಯ ಘನತೆಗೆ ಕುಂದು ತರುವುದನ್ನು ಒಪ್ಪಲು ಸಾಧ್ಯವಿಲ್ಲ ಆಧಾರ್ ಕಾಯ್ದೆಯನ್ನು ರಾಜ್ಯಸಭೆ ಅಂಗೀಕರಿಸಿರುವುದು ಒಂದು ಕಾನೂನು ವಿರೋಧಿ ಕ್ರಮ, ಆಧಾರ ದತ್ತಾಂಶವನ್ನು ಡಿಲೀಟ್ ಮಾಡಬೇಕು’’ ಎನ್ನುತ್ತದೆ ಅವರ ತೀರ್ಪು.

ಆಧಾರ್ ಯೋಜನೆಯ ವಿರುದ್ಧ ಹಲವು ವರ್ಷಗಳ ಕಾಲ ಹೋರಾಡಿದವರಿಗೆ ನಾವು ನಮಿಸೋಣ.

ಕೃಪೆ: countercurrents.or

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News