ಪಿಂಚಣಿಗಾಗಿ ರಕ್ತ ಕೊಟ್ಟ ನಿವೃತ್ತ ನೌಕರರು

Update: 2018-10-03 14:01 GMT

ಬೆಂಗಳೂರು, ಅ.3: ಹಳೆಯ ಪಿಂಚಣಿ ಯೊಜನೆಗೆ ಒತ್ತಾಯಿಸಿ ಎನ್‌ಪಿಎಸ್ ನೌಕರರು, ‘ರಕ್ತ ಕೊಟ್ಟೆವು, ಪಿಂಚಣಿ ಬಿಡೆವು’ ಧರಣಿ ನಡೆಸಿ ರಕ್ತದಾನ ಮಾಡಿದರು.

ಬುಧವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಹಾಗೂ ನ್ಯಾಷನಲ್ ಮೂವ್‌ಮೆಂಟ್ ಫಾರ್ ಓಲ್ಡ್ ಪೆನ್ಷನ್ ಸಂಘಟನೆಗಳ ನೇತೃತ್ವದಲ್ಲಿ ಜಮಾಯಿಸಿದ ನೌಕರರು, ರಕ್ತದಾನ ಮಾಡುವ ಮೂಲಕ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶಾಂತರಾಮ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಎನ್‌ಪಿಎಸ್ ಕೈಬಿಡುವುದಾಗಿ ಭರವಸೆ ನೀಡಿದ್ದರು. ಅವರ ಗಮನ ಸೆಳೆಯಲು ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ಘೋಷಣೆ ಮೂಲಕ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.

2006ರಲ್ಲಿ ರಾಜ್ಯ ಸರಕಾರಿ ನೌಕರರಿಗೆ ನಿಗದಿತ ಪಿಂಚಣಿ ರದ್ದುಗೊಳಿಸಿ ನೂತನ ಪಿಂಚಣಿ ಜಾರಿಗೊಳಿಸಲಾಗಿತ್ತು. ಆ ನಂತರ ಅನೇಕ ಹೋರಾಟಗಳನ್ನು ಕೈಗೊಂಡರೂ ರಾಜ್ಯ ಸರಕಾರ ಸ್ಪಂದಿಸಿಲ್ಲ. ಆದ್ದರಿಂದ, ಈ ಬಾರಿ ನೂತನವಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಕಳೆದ ಜ.2ರಂದು ಫ್ರೀಡಂ ಪಾರ್ಕ್‌ನಲ್ಲಿ 90 ಸಾವಿರ ನೌಕರರು ನಡೆಸಿದ ಹೋರಾಟದ ಫಲವಾಗಿ ಮರಣ ಮತ್ತು ನಿವೃತ್ತಿ ಉಪಧನ ಹಾಗೂ ಕುಟುಂಬ ಪಿಂಚಣಿ ಯೋಜನೆ ಜಾರಿಯಾಗಿತ್ತು. ಅದರಲ್ಲೂ ಕೆಲವೊಂದು ಷರತ್ತುಗಳಿವೆ. ಈಗ ಸಂಪೂರ್ಣವಾಗಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತಂದು, ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದರು.

ರಕ್ತದಾನ: ಪ್ರತಿಭಟನೆ ಸ್ಥಳದಲ್ಲೇ ರಕ್ತದಾನ ಮಾಡಲಾಗುತ್ತದೆ. ಅದೇ ರೀತಿ, ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಸುಮಾರು 3.5 ಲಕ್ಷ ಎನ್‌ಪಿಎಸ್ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News