ಅ.6ಕ್ಕೆ ಹಮೀದ್ ಶಾ ಕಾಂಪ್ಲೆಕ್ಸ್ ಆವರಣದಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟನೆ: ಜಿ.ಎ.ಬಾವಾ
ಬೆಂಗಳೂರು, ಅ.3: ಹಝ್ರತ್ ಹಮೀದ್ ಶಾ ದರ್ಗಾ ಕಾಂಪ್ಲೆಕ್ಸ್ ಆವರಣದಲ್ಲಿ ನಿರ್ಮಿಸಲಾಗಿರುವ ಎಚ್‌ಎಚ್‌ಎಸ್ ಅಂಡ್ ಎಚ್‌ಎಂಎಸ್ ಮುಸ್ಲಿಂ ಬಾಲಕಿಯರ ವಸತಿ ನಿಲಯವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅ.6ರಂದು ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದು ದರ್ಗಾ ಸಮಿತಿಯ ಅಧ್ಯಕ್ಷ ಜಿ.ಎ.ಬಾವಾ ತಿಳಿಸಿದರು.
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, 22 ಸಾವಿರ ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಬಹುಮಹಡಿ ವಸತಿ ನಿಲಯದಲ್ಲಿ 36 ಕೊಠಡಿಗಳಿದ್ದು, 200 ಮಂದಿ ಬಾಲಕಿಯರಿಗೆ ಉಳಿದುಕೊಳ್ಳಲು ಅವಕಾಶವಿದೆ ಎಂದರು.
ಇಂಡಿಯಾ ಬಿಲ್ಡರ್ಸ್ ಮುಖ್ಯಸ್ಥ ಝಿಯಾವುಲ್ಲಾ ಶರೀಫ್ ಈ ಕಟ್ಟಡವನ್ನು ಸಮುದಾಯದ ಬಾಲಕಿಯರ ಶೈಕ್ಷಣಿಕ ಪ್ರಗತಿಯಾಗಿ ನಿರ್ಮಿಸಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಆಡಳಿತಾವಧಿಯಲ್ಲಿ ಒಂದು ಕೋಟಿ ರೂ.ಗಳನ್ನು ಈ ವಸತಿ ನಿಲಯದ ಮೂಲಸೌಕರ್ಯ ಅಭಿವೃದ್ಧಿಗಾಗಿ ನೀಡಿದ್ದರು ಎಂದು ಅವರು ಹೇಳಿದರು.
ಇದರ ಜೊತೆಗೆ ದರ್ಗಾ ಆವರಣದಲ್ಲಿ ನಡೆಯುತ್ತಿರುವ ಐಟಿಐ ತರಗತಿಗಳಿಗಾಗಿ ಪ್ರತ್ಯೇಕವಾಗಿ ನಿರ್ಮಿಸಿರುವ ಐಟಿಐ ಬ್ಲಾಕ್ ಅನ್ನು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ನಗರ ಆರೋಗ್ಯ ಕೇಂದ್ರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್, ಔಷಧಾಲಯವನ್ನು ಮಾಜಿ ಕೇಂದ್ರ ಸಚಿವ ಡಾ.ಕೆ.ರಹ್ಮಾನ್‌ಖಾನ್ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯಸಭಾ ಸದಸ್ಯ ಡಾ.ಸೈಯದ್ ನಸೀರ್ ಹುಸೇನ್ ನಮ್ಮ ಹಮೀದ್ ಶಾ ದರ್ಗಾ ಸಮಿತಿಯ ವೆಬ್‌ಸೈಟ್‌ಗೆ ಚಾಲನೆ ನೀಡಲಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಬಾವಾ ಹೇಳಿದರು.
ಐಟಿಐ ತರಗತಿಗಳು ಸುಮಾರು 17 ವರ್ಷಗಳಿಂದ ನಡೆಯುತ್ತಿದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿದ್ದಾರೆ. ಕಳೆದ 3 ವರ್ಷಗಳಿಂದ ಈ ಸಂಸ್ಥೆಯನ್ನು ಅನುದಾನದ ವ್ಯಾಪ್ತಿಗೆ ತರಲು ಶ್ರಮಿಸಲಾಗುತ್ತಿದೆ. ರಾಜ್ಯ ಸರಕಾರಕ್ಕೆ ಈ ಸಂಬಂಧ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ನಗರ ಆರೋಗ್ಯ ಕೇಂದ್ರದಲ್ಲಿ ಸಂಜೆ 5 ರಿಂದ 8 ಗಂಟೆಯವರೆಗೆ ತಜ್ಞ ವೈದ್ಯರು ಬಂದು ಪರಿಶೀಲನೆ ನಡೆಸಲಿದ್ದಾರೆ. ಸರಕಾರದ ಕೌಶಲ್ಯಾಭಿವೃದ್ಧಿ ಯೋಜನೆಯಡಿ ನಮ್ಮ ಐಟಿಐ ಸಂಸ್ಥೆಯನ್ನು ಜೋಡಿಸಲಾಗುವುದು. ಅಲ್ಲದೆ, ಕಾಂಪ್ಲೆಕ್ಸ್ ಆವರಣದಲ್ಲಿ ಖಾಲಿ ಇರುವ ಜಾಗದಲ್ಲಿ ಬಹುಮಹಡಿ ವಾಹನ ನಿಲುಗಡೆ ವ್ಯವಸ್ಥೆ, ಹಾಲಿ ಇರುವ ಕಟ್ಟಡದ ಮೂರನೆ ಮಹಡಿ ಹಾಗೂ ವಸತಿ ಸಂಕೀರ್ಣ ನಿರ್ಮಿಸುವ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.
ದರ್ಗಾ ಸಮಿತಿಗೆ ಬರುತ್ತಿರುವ ಶೇ.60ರಷ್ಟು ಆದಾಯವನ್ನು ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ವೈದ್ಯಕೀಯ ನೆರವು, ಉಚಿತ ಡಯಾಲಿಸಿಸ್ ಕೇಂದ್ರ, ಎರಡು ದರ್ಗಾಗಳು, ಒಂದು ಮಸೀದಿಯ ನಿರ್ವಹಣೆಗೆ ಭರಿಸಲಾಗುತ್ತಿದೆ. ವಕ್ಫ್ ಬೋರ್ಡ್‌ಗೆ ವಾರ್ಷಿಕ 21 ಲಕ್ಷ ರೂ.ಗಳನ್ನು ಪಾವತಿಸಲಾಗುತ್ತಿದೆ ಬಾವಾ ತಿಳಿಸಿದರು.
ದರ್ಗಾ ಸಮಿತಿಯ ಉಪಾಧ್ಯಕ್ಷ ಸೈಯದ್ ಉಮರ್ ಹಾಗೂ ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಹಾಗೂ ದರ್ಗಾ ಸಮಿತಿಯ ಸದಸ್ಯ ಮುಬೀನ್ ಮುನವ್ವರ್ ಉಪಸ್ಥಿತರಿದ್ದರು.