×
Ad

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಭ್ರಷ್ಟಾಚಾರ ಆರೋಪ: ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

Update: 2018-10-03 19:50 IST

ಬೆಂಗಳೂರು, ಅ.3: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಡೆದಿರುವ ಎಲ್ಲ ರೀತಿಯ ಕಾಮಗಾರಿ ಮತ್ತು ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಜನಶಕ್ತಿ ವೇದಿಕೆಯ ಕಾರ್ಯಕರ್ತರು ನಗರದ ಪುರಭವನದ ಮುಂಭಾಗ ಪ್ರತಿಭಟನೆ ನಡೆಸಿದರು.

ಸ್ಲಂ ನಿವಾಸಿಗಳಿಗಾಗಿ ನರ್ಮ್, ರಾಜೀವ್‌ಗಾಂಧಿ ಆವಾಸ್ ಹಾಗೂ ಪ್ರಧಾನ ಮಂತ್ರಿಗಳ ಆವಾಸ್ ಯೋಜನಯಡಿ ಬಹುಮಹಡಿ ವಸತಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆಯಷ್ಟೆ. ಆದರೆ, ಇಲ್ಲಿ ಭೂ ಸ್ವಾಧೀನ, ಟೆಂಡರ್ ಪ್ರಕ್ರಿಯೆಯಿಂದ ಪ್ರಾರಂಭಗೊಂಡು ಮನೆ ಹಂಚಿಕೆ ಆಗುವವವರಿಗೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ವೇಳೆ ಜನಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ಡಿ.ಸಿ.ಪ್ರಕಾಶ್ ಮಾತನಾಡಿ, ಸುಮಾರು 1136.95ಕೋಟಿ ರೂ.ವೆಚ್ಚದಲ್ಲಿ ರಾಜ್ಯಾದ್ಯಂತ 41,745 ಮನೆಗಳನ್ನು ಕಟ್ಟಲಾಗಿದೆ. ಬೆಂಗಳೂರು ನಗರವೊಂದರಲ್ಲಿಯೆ 18ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ, ಇಲ್ಲಿನ ಬಹುತೇಕ ಮನೆಗಳನ್ನು ಸ್ಲಂ ನಿವಾಸಿಗಳಲ್ಲದವರಿಗೆ ಮಾರಾಟವಾಗಿದೆ ಎಂದು ಅವರು ಆರೋಪಿಸಿದರು.

ಎರಡು ಮಹಡಿ ವಸತಿ ನಿಲಯಗಳನ್ನು ಕಟ್ಟಬೇಕಾದ ಜಾಗದಲ್ಲಿ ಮೂರು ಮಹಡಿಯ ವಸತಿಗಳನ್ನು ಕಟ್ಟಲಾಗಿದೆ. ಹೆಚ್ಚುವರಿಯಾಗಿ ಕಟ್ಟಿರುವ ಮನೆಗಳು ಅಕ್ರಮವಾಗಿ ಮಾರಾಟವಾಗಿದ್ದು, ಈ ಬಗೆಗಿನ ಸಂಪೂರ್ಣ ಮಾಹಿತಿ ನನ್ನ ಬಳಿಯಿದೆ. ಹೀಗಾಗಿ ಸರಕಾರ ಇದನ್ನು ನ್ಯಾಯಾಂಗ ತನಿಖೆ ಆದೇಶಿಸಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿರುವ ಕೊಳಗೇರಿಗಳನ್ನು ನಿರ್ಮೂಲನೆ ಮಾಡಬೇಕೆಂಬ ಸದುದ್ದೇಶದಿಂದ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯನ್ನು ಸ್ಥಾಪಿಸಲಾಗಿದೆ. ಮಂಡಳಿಗೆ ವಿವಿಧ ಯೋಜನೆಗಳ ಮೂಲಕ ನೂರಾರು ಕೋಟಿ ರೂ. ಬಿಡುಗಡೆಯಾಗುತ್ತಿದೆ ಹಾಗೂ ಮನೆಗಳನ್ನು ಕಟ್ಟಲಾಗುತ್ತಿದೆ. ಆದರೂ ರಾಜ್ಯದಲ್ಲಿ ಕೊಳಗೇರಿ ನಿವಾಸಿಗಳ ಯಾವೊಂದು ಸಮಸ್ಯೆ ನಿವಾರಣೆಯಾಗಿಲ್ಲ. ಹೀಗಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ನಡೆಯುತ್ತಿರುವ ಅವ್ಯವಹಾರ, ಭ್ರಷ್ಟಾಚಾರವನ್ನು ಪತ್ತೆ ಹಚ್ಚಿ, ಕೊಳಗೇರಿ ನಿವಾಸಿಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News