ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ಸಾರಿಗೆ ವ್ಯವಸ್ಥೆ: ಸಚಿವ ಜಿ.ಟಿ.ದೇವೇಗೌಡ
ಬೆಂಗಳೂರು, ಅ. 3: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ಬೆಂಗಳೂರಿನಿಂದ ಮೈಸೂರಿಗೆ 150 ರೂ.ಪ್ರಯಾಣ ದರದಲ್ಲಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದಸರಾ ಉತ್ಸವಕ್ಕೆ ಅಧಿಕೃತ ಆಹ್ವಾನ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾ ಉತ್ಸವಕ್ಕೆ ಆಗಮಿಸುವವರಿಗಾಗಿ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಮೈಸೂರು ದಸರಾ ಉತ್ಸವ ಏರ್ ಇಂಡಿಯಾದಿಂದ ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದು, ‘ಆಕಾಶ ಅಂಬಾರಿ’ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವ ಕಣ್ತುಂಬಿಕೊಳ್ಳಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಅಸಮಾಧಾನವಿಲ್ಲ: ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ತಾವು ಒಟ್ಟಿಗೆ ಇದ್ದೇವೆ. ನಮ್ಮಲ್ಲಿ ಯಾವುದೇ ಅಸಮಾಧಾನ-ಭಿನ್ನಾಭಿಪ್ರಾಯಗಳಿಲ್ಲ. ಆದರೂ ಆಧಾರರಹಿತ ಸುದ್ದಿ ಬಿತ್ತರವಾಗುತ್ತಿದೆ ಎಂದು ದೇವೇಗೌಡ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ. ಚಿಕ್ಕವನಿದ್ದಾಗಿನಿಂದಲೂ ನನಗೆ ಹಿತಶತ್ರುಗಳು ಇದ್ದಾರೆಂದು ಅವರು ಹೇಳಿದರು. ಈ ವೇಳೆ ಸಚಿವ ಸಾ.ರಾ. ಮಹೇಶ್ ಉಪಸ್ಥಿತರಿದ್ದರು.