×
Ad

ಮಕ್ಕಳು, ಮಹಿಳೆಯರ ನಾಪತ್ತೆ ಪ್ರಕರಣ: ಪತ್ತೆಗೆ ಕ್ರಮ ಕೈಗೊಳ್ಳದ ಡಿಜಿಪಿ ವಿರುದ್ಧ ಕಿಡಿಕಾರಿದ ಹೈಕೋರ್ಟ್

Update: 2018-10-03 20:32 IST

ಬೆಂಗಳೂರು, ಅ.3: ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳು, ಮಹಿಳೆಯರು ಮತ್ತು ಪುರುಷರ ನಾಪತ್ತೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಕಣ್ಮರೆಯಾಗಿರುವವರ ಪತ್ತೆಗೆ ಕ್ರಮ ಕೈಗೊಳ್ಳದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಛೀಮಾರಿ ಹಾಕಿದೆ. ರಾಜ್ಯದಲ್ಲಿ 2015ರ ಜನವರಿಯಿಂದ 2018ರ ಜುಲೈವರೆಗೆ ಒಟ್ಟು 52,813 ಮಂದಿ ಕಾಣೆಯಾಗಿದ್ದರು. ಅದರಲ್ಲಿ ಇನ್ನೂ 14,150 ಜನ ಪತ್ತೆಯಾಗಿಲ್ಲ. ಈ ಬಗ್ಗೆ ಅಧ್ಯಯನ ನಡೆಸದೆ, ಡಿಜಿಪಿ ನೀಡಿರುವ ಉತ್ತರವನ್ನು ಕೋರ್ಟ್ ಕಠಿಣ ಪದಗಳಿಂದ ಟೀಕಿಸಿದೆ.

ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಮಕ್ಕಳು ಮತ್ತು ಮಹಿಳೆಯರ ನಾಪತ್ತೆ ಕುರಿತ ಸ್ವಯಂಪ್ರೇರಿತ ಪ್ರಕರಣ ಮತ್ತು ರಾಜ್ಯದಲ್ಲಿನ ಹಲವು ನಾಪತ್ತೆ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ರಾಘವೇಂದ್ರ ಚವ್ಹಾಣ್ ಮತ್ತು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ಪೊಲೀಸರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿತು. ನಾಪತ್ತೆಯಾದವರ ಪತ್ತೆಗೆ ಕೈಗೊಂಡಿರುವ ಕ್ರಮಗಳ ಸಮಂಜಸ ವಿವರಣೆ ನೀಡಿಲ್ಲ. ಇದು ಗಾಬರಿ ಹುಟ್ಟಿಸುವ ಸಂಗತಿ. ನಾಪತ್ತೆಯಾದವರ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಲ್ಲೂ ಪೊಲೀಸರು ವಿಶ್ಲೇಷಿಸಿ, ಕಾರಣ ಹುಡುಕಬೇಕಿತ್ತು. ಇದ್ಯಾವುದನ್ನೂ ಮಾಡದೆ ಪೊಲೀಸ್ ಇಲಾಖೆ ಪ್ರಕರಣವನ್ನು ನಿರ್ಲಕ್ಷಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ನಾಪತ್ತೆಯಾಗಿರುವವರು ದೇಶದ್ರೋಹಿ ಸಂಘಟನೆಗಳಲ್ಲಿ ತೊಡಗಿರುವರೆ? ಇಂಥವರನ್ನು ಬಳಸಿಕೊಂಡು ಬೆಂಗಳೂರಿಗೆ ಅಪಾಯ ತಂದೊಡ್ಡಲು ಮುಂದಾಗಲಾಗಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಿಲ್ಲ. ಹಾಗಾದರೆ, ವಿಚಕ್ಷಣಾ ದಳಗಳು ಏನು ಮಾಡುತ್ತಿವೆ? ಇದನ್ನು ಹೀಗೆ ಬಿಟ್ಟರೆ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ನ್ಯಾಯಪೀಠ ಹೇಳಿತು. ಮುಂದಿನ ವಿಚಾರಣೆ ವೇಳೆ ಡಿಜಿಪಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಹೇಳಿದ ಕೋರ್ಟ್, ವಿಚಾರಣೆಯನ್ನು ನ.14ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News