×
Ad

ಶಿಥಿಲಾವಸ್ಥೆಯಲ್ಲಿ ನಾಡಪ್ರಭು ಕೆಂಪೇಗೌಡ ಗೋಪುರ

Update: 2018-10-04 20:38 IST

ಬೆಂಗಳೂರು, ಅ.4: ನಗರದ ಬಿಬಿಎಂಪಿ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡರ ಗೋಪುರ ಶಿಥಿಲಾವಸ್ಥೆಗೆ ಬಂದು ನಿಂತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

2006 ರ ನವೆಂಬರ್ ನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ನಗರದ ಹಡ್ಸನ್ ವೃತ್ತದಲ್ಲಿನ ಕೆಂಪೇಗೌಡ ಗೋಪುರ ನಿರ್ಮಾಣ ಮಾಡಿಸಿದ್ದರು. ಆದರೆ, ಇದೀಗ ಗೋಪುರದ ಸುತ್ತಲೂ ಬಿರುಕು ಬಿಟ್ಟಿದ್ದು, ಬೀಳುವ ಹಂತಕ್ಕೆ ತಲುಪಿದೆ. ಆದರೂ, ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರದ ಮೇಖ್ರಿ ವೃತ್ತ, ಕೋರಮಂಗಲ, ಗವಿಪುರಂ ಹಾಗೂ ಲಾಲ್‌ಬಾಗ್ ಬಳಿ ಕೆಂಪೇಗೌಡರು ನಿರ್ಮಾಣ ಮಾಡಿದ್ದ ರೀತಿಯಲ್ಲಿಯೇ ಹಡ್ಸನ್ ವೃತ್ತದಲ್ಲಿರುವ ಗೋಪುರ ಆಕರ್ಷಣೀಯವಾಗಿದೆ. ಆದರೆ, ಜನಪ್ರತಿನಿಧಿಗಳ ಹಾಗೂ ಪಾಲಿಕೆ ಆಡಳಿತ ವರ್ಗದ ಬೇಜಾವಾಬ್ದಾರಿಯಿಂದಾಗಿ ಕೆಂಪೇಗೌಡರ ಗೋಪುರ ಅವನತಿಯತ್ತ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿದ್ದ ಮಮ್ತಾಜ್ ಬೇಗಂ ಅವರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಗೋಪುರವನ್ನು ಪಾಲಿಕೆ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಇಂದು ಗೋಪುರ ಶಿಥಿಲಾವಸ್ಥೆಗೆ ತಲುಪಿದೆ. ಈಗಾಗಲೇ ಗೋಪುರಕ್ಕೆ ಅಳವಡಿಸಿರುವ ಕಲ್ಲುಗಳು ಕಿತ್ತು ಬರುತ್ತಿವೆ. ಗೋಪುರದ ಸುತ್ತಮುತ್ತ ಸ್ವಚ್ಛತೆ ಕಾಪಾಡದಿರುವ ಹಿನ್ನೆಲೆಯಲ್ಲಿ ಗೋಪುರ ಮುಂಭಾಗದ ನೀರಿನ ಕೊಳ ಗಬ್ಬುನಾರುತ್ತಿದೆ. ಕೊಳ ತ್ಯಾಜ್ಯಮಯವಾಗಿದ್ದು, ಕೊಳದಲ್ಲಿ ಅಳವಡಿಸಿರುವ ಕಾರಂಜಿ ತುಕ್ಕು ಹಿಡಿದಿದೆ. ಗೋಪುರದ ಒಂದು ಭಾಗದಲ್ಲಿ ಗಿಡ ಬೆಳೆಯುತ್ತಿದ್ದು, ಕೆಲವು ಕಡೆ ಬಿರುಕು ಕಾಣಿಸಿಕೊಂಡಿದೆ.

ಇದುವರೆಗೂ ಒಂಬತ್ತು ಮಂದಿ ಮೇಯರ್ ಆಗಿ ಆಯ್ಕೆಯಾಗಿದ್ದರೂ ಯಾರೊಬ್ಬರೂ ಶಿಥಿಲಾವಸ್ಥೆ ತಲುಪಿರುವ ಕೆಂಪೇಗೌಡ ಗೋಪುರದ ಕಡೆ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ. ತಾವು ಅಧಿಕಾರ ವಹಿಸಿಕೊಂಡಾಗ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾಲಿಕೆ ಕಚೇರಿಗೆ ತೆರಳುವ ಮೇಯರ್‌ಗಳು ಸಮೀಪದಲ್ಲೇ ಇರುವ ಕೆಂಪೇಗೌಡ ಗೋಪುರದ ದುಸ್ಥಿತಿ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಹೇಳಿದ್ದಾರೆ.

ನೂತನವಾಗಿ ಮೇಯರ್ ಆಗಿ ಆಯ್ಕೆಯಾಗಿರುವ ಗಂಗಾಂಬಿಕೆ ಈ ಹಿಂದಿನ ಎಲ್ಲ ಮೇಯರ್‌ಗಳಂತೆ ಗೋಪುರದ ಬಗ್ಗೆ ನಿರ್ಲಕ್ಷ ವಹಿಸುವ ಬದಲಿಗೆ, ಕೂಡಲೇ ಅಧಿಕಾರಿಗಳನ್ನು ಕರೆದು ಕೆಂಪೇಗೌಡ ಗೋಪುರದ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News