ಕಳವು ಆರೋಪಿಯ ಬಂಧನ: 11 ಲಕ್ಷ ರೂ. ಮೌಲ್ಯದ 7 ದ್ವಿಚಕ್ರ ವಾಹನ, ಚಿನ್ನಾಭರಣ ವಶ

Update: 2018-10-04 15:10 GMT

ಬೆಂಗಳೂರು, ಅ.4: ಸಾರ್ವಜನಿಕರನ್ನು ಬೆದರಿಸಿ ಸುಲಿಗೆ, ಚಿನ್ನಾಭರಣ ಹಾಗೂ ದ್ವಿ ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕಳ್ಳನೊಬ್ಬನನ್ನು ಬಂಧಿಸಿರುವ ತಲಘಟ್ಟಪುರ ಠಾಣಾ ಪೊಲೀಸರು, 11 ಲಕ್ಷ ರೂ.ಮೌಲ್ಯದ 7 ದ್ವಿಚಕ್ರ ವಾಹನಗಳು, 46 ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಹೊಸೂರು ರಸ್ತೆಯ ಗಾರೆಭಾವಿಪಾಳ್ಯದ ಲಕ್ಷ್ಮೀಲೇಔಟ್ ನಿವಾಸಿ ಉದಯ್ ಅಲಿಯಾಸ್ ಕಲಾಕಾರ್ (18) ಬಂಧಿತ ಆರೋಪಿ. ಈತನ ಬಂಧನದಿಂದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಒಟ್ಟು 14 ಪ್ರಕರಣಗಳು ಬೆಳಕಿಗೆ ಬಂದಿವೆ.

ಆರೋಪಿ ಉದಯ್ ಇತರ ನಾಲ್ವರು ಆರೋಪಿಗಳೊಂದಿಗೆ ಸೇರಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ. ಕಳವು ಮಾಡಿದ ವಾಹನದಲ್ಲಿ ಮಾರಕಾಯುಧಗಳನ್ನು ಇಟ್ಟುಕೊಂಡು ನೈಸ್ ರಸ್ತೆ ಹಾಗೂ ಇತರ ಹೊರವಲಯದ ರಸ್ತೆಗಳಲ್ಲಿ ಹೋಗುವ ಸಾರ್ವಜನಿಕರನ್ನು ಬೆದರಿಸಿ ಬೆಳೆಬಾಳುವ ವಸ್ತುಗಳನ್ನು ದರೋಡೆಮಾಡುತ್ತಿದ್ದ. ಮಾತ್ರವಲ್ಲ ದೇವಸ್ಥಾನಗಳ ಬಾಗಿಲು ಮುರಿದು ಹುಂಡಿಯಲ್ಲಿದ್ದ ಹಣ, ಗರ್ಭಗುಡಿಯಲ್ಲಿರುವ ಚಿನ್ನದ ಆಭರಣಗಳನ್ನು ಕಳವು ಮಾಡುತ್ತಿದ್ದುದು ವಿಚಾರಣೆಯ ವೇಳೆ ತಿಳಿದುಬಂದಿದೆ.

ಈತನ ಬಂಧನದಿಂದ ತಲಘಟ್ಟಪುರದ ಒಂದು, ಪೀಣ್ಯದ 3 ಬ್ಯಾಟರಾಯನಪುರ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 1 ಪ್ರಕರಣ ಸೇರಿ ಒಟ್ಟು 5 ಸುಲಿಗೆ ಪ್ರಕರಣ ಬೆಳಕಿಗೆ ಬಂದಿವೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 2 ದೇವಸ್ಥಾನ ಕನ್ನಕಳವು ಪ್ರಕರಣದಲ್ಲಿಯೂ ಈತ ಭಾಗಿಯಾಗಿದ್ದ. ಬೇಗೂರು ಪೊಲೀಸ್ ಠಾಣೆ, ಪರಪ್ಪನ ಅಗ್ರಹಾರ, ಎಚ್‌ಎಸ್‌ಆರ್ ಲೇಔಟ್, ಅತ್ತಿಬೆಲೆ, ಆನೇಕಲ್, ಹಾಸನ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಕೂಡ ಪತ್ತೆಯಾಗಿವೆ.

ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಶರಣಪ್ಪ, ಸುಬ್ರಹ್ಮಣ್ಯಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕಾಂತರಾಜ್ ಅವರ ನೇತೃತ್ವದಲ್ಲಿ ತಲಘಟ್ಟಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News