ಬೆಂಗಳೂರಿನಲ್ಲಿ ಮುಂದುವರಿದ ಮಳೆ: ದಿನವಿಡೀ ಮೋಡ ಕವಿತ ವಾತಾವರಣ

Update: 2018-10-04 16:11 GMT

ಬೆಂಗಳೂರು, ಅ.4: ರಾಜ್ಯದ ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯು ಗುರುವಾರವೂ ಮುಂದುವರಿದಿದ್ದು, ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ಸಾಧಾರಣ ಮಳೆಯಾಗಿದ್ದು, ಇನ್ನು ಕೆಲವೆಡೆ ತುಂತುರು ಮಳೆಯಾಗಿದೆ.

ತಮಿಳುನಾಡು, ಕರಾವಳಿ ಹಾಗೂ ಶ್ರೀಲಂಕಾದಲ್ಲಿ ಉಂಟಾಗಿರುವ ವಾಯುಬಾರ ಕುಸಿತದಿಂದ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದಾರು ದಿನಗಳ ಕಾಲ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.

ನಗರದಲ್ಲಿ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು, ಯಲಹಂಕ, ಲಾಲ್‌ಬಾಗ್, ನಾಯಂಡಹಳ್ಳಿ, ಯಶವಂತಪುರ, ಜಯನಗರ, ಶಾಂತಿನಗರ, ಕೆಂಪೇಗೌಡ ಬಸ್ ನಿಲ್ದಾಣ, ವರ್ತೂರು, ಕೆ.ಆರ್.ಪುರ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ. ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.

ಮುನ್ನೆಚ್ಚರಿಕೆ ವಹಿಸಲು ಸೂಚನೆ: ನಗರದಲ್ಲಿ ನಾಲ್ಕೈದು ದಿನಗಳ ಕಾಲ ಮಳೆ ಬೀಳುವ ಸಾದ್ಯತೆ ಇರುವುದರಿಂದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕುಳಿತು ಎಲ್ಲ ವಲಯದ ಕಂಟ್ರೋಲ್ ರೂಮ್‌ಗಳಿಗೆ ಕರೆ ಮಾಡಿ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ಯಾವ ರಸ್ತೆಯಲ್ಲಿ ನೀರು ನಿಲ್ಲುತ್ತದೆ ಅಂತಹ ಜಾಗದಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ರಸ್ತೆಯ ನೀರು ಸರಾಗವಾಗಿ ಚರಂಡಿಗಳಿಗೆ ಹರಿದುಹೋಗಲು ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ?

ಬೊಮ್ಮನಹಳ್ಳಿ 6.5 ಮಿ.ಮೀ, ಅಗ್ರಹಾರ ದಾಸರಹಳ್ಳಿ 7 ಮಿ.ಮೀ, ಯಶವಂತಪುರ 3.5 ಮಿ.ಮೀ, ಚಿಕ್ಕಬಾಣವಾರ 4.5 ಮಿ.ಮೀ, ಲಾಲ್‌ಬಾಗ್ 9 ಮಿ.ಮೀ, ಹೊಯ್ಸಳನಗರ 17.5 ಮಿ.ಮೀ, ವರ್ತೂರು 15.5 ಮಿ.ಮೀ, ದೊಡ್ಡಾನೆಕುಂದಿ 14.5 ಮಿ.ಮೀ, ಕೆ.ಆರ್.ಪುರ 13 ಮಿ.ಮೀ, ಬಿದರಹಳ್ಳಿ 5 ಮಿ.ಮೀ, ದೊಡ್ಡಬಾಣಹಳ್ಳಿ, ಯಲಹಂಕ, ಗೊಟ್ಟಿಗೇಹಳ್ಳಿ ತಲಾ 9.5 ಮಿ.ಮೀ, ದೊಮ್ಮಸಂದ್ರ 6.5 ಮಿ.ಮೀ, ದೊಡ್ಡಗುಬ್ಬಿ 5.5 ಮಿ.ಮೀ ರಷ್ಟು ಮಳೆಯಾಗಿರುವುದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News