ಪೆಟ್ರೋಲ್-ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಬೇಕು: ಸಚಿವ ಕೃಷ್ಣಭೈರೇಗೌಡ

Update: 2018-10-04 16:13 GMT

ಬೆಂಗಳೂರು, ಅ.4: ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂಬುದು ನಮ್ಮ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಚರ್ಚೆ ಆರಂಭ ಮಾಡಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ತರುವುದು, ಬಿಡುವುದು ನಂತರದ ವಿಚಾರ. ಈಗಿನ ಪರಿಸ್ಥಿತಿಯಲ್ಲಿ ಈ ಸಂಬಂಧ ಚರ್ಚೆ ಮಾಡುವುದು ಉತ್ತಮ. ಆದರೆ, ನಮಗಿರುವ ಮಾಹಿತಿಯ ಪ್ರಕಾರ ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ ಎಂದರು.

ಪೆಟ್ರೋಲ್-ಡೀಸೆಲ್ ದರಗಳ ಹೆಚ್ಚಳಕ್ಕೆ ನಾವು ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದು ಮಾತ್ರ ಕಾರಣವಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರಕಾರವು ಪೆಟ್ರೋಲ್ ಮೇಲೆ ಎರಡು ಹಾಗೂ ಡೀಸೆಲ್ ಮೇಲೆ ನಾಲ್ಕು ಪಟ್ಟು ತೆರಿಗೆಯನ್ನು ಹೆಚ್ಚಳ ಮಾಡಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ಅನ್ನು ಇಳಿಸುವ ಮೂಲಕ ರಾಜ್ಯ ಸರಕಾರವನ್ನು ಅನುಸರಿಸುತ್ತಿದೆ. 2014ರಲ್ಲಿ ಇದ್ದ ದರಕ್ಕೆ ಇಳಿಸಿದರೆ ಕೇಂದ್ರ ಸರಕಾರಕ್ಕೆ ನಿಜಕ್ಕೂ ಜನರ ಪರ ಕಾಳಜಿಯಿದೆ ಎಂಬುದನ್ನು ಒಪ್ಪಿಕೊಳ್ಳಬಹುದು ಎಂದು ಕೃಷ್ಣಭೈರೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News