ಆರೋಗ್ಯ ಇಲಾಖೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟೆಲ್ ಬ್ಯಾನ್
ಬೆಂಗಳೂರು, ಅ. 4: ಆರೋಗ್ಯ ಇಲಾಖೆಯಲ್ಲಿ ನಡೆಯುವ ಸಭೆ-ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟೆಲ್ ಗಳಲ್ಲಿ ನೀಡದೆ ಪರ್ಯಾಯ ಮಾರ್ಗದಲ್ಲಿ ಒದಗಿಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಲಾಖಾ ಮುಖ್ಯಸ್ಥರ ಹಂತದಲ್ಲಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಹಂತದಲ್ಲಿ ಏರ್ಪಡಿಸಲಾಗುತ್ತಿರುವ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಒದಗಿಸುವ ಬದಲು 20 ಲೀಟರ್‌ಗಳ ಕ್ಯಾನ್‌ಗಳನ್ನು ಖರೀದಿಸಿ, ಕಪ್ ಮೂಲಕ ಕುಡಿಯುವ ನೀರನ್ನು ಒದಗಿಸಲು ಸೂಚಿಸಿದೆ. ಹೆಚ್ಚಿನ ಪ್ಲಾಸ್ಟಿಕ್ ತ್ಯಾಜ್ಯದಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದರ ಜೊತೆಗೆ ನೈಸರ್ಗಿಕ ಸ್ವಚ್ಛತೆಯನ್ನು ಕಾಪಾಡುವುದು ದುಸ್ತರವಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಇಲಾಖೆ ತಿಳಿಸಿದೆ.
ಇಲಾಖೆಯ ಎಲ್ಲ ಅಧಿಕಾರಿಗಳು ತಮ್ಮ ಹಂತದಲ್ಲಿ ಅನುಷ್ಠಾನಗೊಳಿಸಲು ಕ್ರಮವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಸೂಚನೆ ನೀಡಿದ್ದಾರೆ.