ಕಾಂಗ್ರೆಸ್ ಸಚಿವರಿಗೆ ಡಿಕೆ ಶಿವಕುಮಾರ್ ಆತಿಥ್ಯ

Update: 2018-10-04 16:25 GMT

ಬೆಂಗಳೂರು, ಅ. 4: ಸಂಪುಟ ವಿಸ್ತರಣೆ ಮತ್ತು ಖಾತೆ ಬದಲಾವಣೆಗೆ ಸಿಎಂ ಕುಮಾರಸ್ವಾಮಿ ಮುಂದಾಗಿರುವ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ಸಚಿವರಿಗೆ ಉಪಾಹಾರ ಕೂಟ ಏರ್ಪಡಿಸಿ ರಾಜಕೀಯ ಕುತೂಹಲ ಸೃಷ್ಟಿಸಿದ್ದಾರೆ.

ಗುರುವಾರ ಬೆಳಗ್ಗೆ ಇಲ್ಲಿನ ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ಸರಕಾರಿ ಬಂಗಲೆಯಲ್ಲಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಎಲ್ಲ ಸಚಿವರಿಗೂ ಉಪಾಹಾರ ಕೂಟ ಆಯೋಜಿಸಿದ್ದರು. ಲೋಕಸಭೆ ಚುನಾವಣೆ, ಚುನಾವಣಾ ಪೂರ್ವ ಮೈತ್ರಿ, ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಸಂಬಂಧ ಸಮಾಲೋಚನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಾಕಾಂಕ್ಷಿಗಳ ಹೊಸದಿಲ್ಲಿ ಮಟ್ಟದಲ್ಲಿ ಹಾಗೂ ಪ್ರಮುಖ ಮುಖಂಡ ಮನೆ ಬಾಲಿಗಿಗೆ ಎಡತಾಕುತ್ತಿದ್ದಾರೆ. ಈ ಮಧ್ಯೆಯೇ ಉಪಾಹಾರ ಕೂಟ ನಡೆಸಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾವುದೇ ಸಚಿವರು ಬಹಿರಂಗ ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡಲಾಗಿದೆ ಎಂದು ಗೊತ್ತಾಗಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಸಚಿವರು ಉಪಾಹಾರ ಕೂಟದಲ್ಲಿ ಪಾಲ್ಗೊಂಡಿದ್ದರು.

ಅವರ ಸೂಚನೆ ಮೇರೆಗೆ ಔತಣ: ಮಾಜಿ ಸಿಎಂ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಉಪಾಹಾರ ಕೂಟ ನಡೆಸಿದ್ದು, ಕಾಲಕಾಲಕ್ಕೆ ಪ್ರತಿಯೊಬ್ಬ ಸಚಿವರ ಮನೆಯಲ್ಲೂ ಔತಣಕೂಟ ನಡೆಸುವಂತೆ ಅವರೇ ಹೇಳಿದ್ದಾರೆ. ಈ ಮೊದಲು ಡಿಸಿಎಂ ಪರಮೇಶ್ವರ್ ಅವರ ನಿವಾಸದಲ್ಲಿ ನಡೆದಿತ್ತು ಎಂದು ಶಿವಕುಮಾರ್ ತಿಳಿಸಿದರು.

ಇದೀಗ ನನ್ನ ಮನೆಯಲ್ಲಿ ನಡೆದಿದೆ. ಮುಂದೆ ಸಚಿವ ಆರ್.ವಿ.ದೇಶಪಾಂಡೆ ಅವರ ಮನೆಯಲ್ಲಿ ನಡೆಯಲಿದೆ. ಇದನ್ನು ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಮಾಡಿದ್ದೇವೆ. ಇದನ್ನೇ ಪ್ರತ್ಯೇಕತೆ ಎಂದು ಯಾರೂ ಭಾವಿಸಬಾರದು ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ವೆಂಕಟರಮಣಪ್ಪ, ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್, ಶಿವಶಂಕರರೆಡ್ಡಿ, ಕೃಷ್ಣ ಭೈರೇಗೌಡ, ಝಮೀರ್ ಅಹ್ಮದ್ ಖಾನ್, ಜಯಮಾಲಾ ಸೇರಿದಂತೆ 14 ಮಂದಿ ಸಚಿವರು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಂಸದ ಡಿ.ಕೆ.ಸುರೇಶ್, ಶಾಸಕ ತುಕಾರಾಮ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

ಬೆಳ್ಳಿ ತಟ್ಟೆ-ಬೆಳ್ಳಿ ಲೋಟ

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸಚಿವರಿಗೆ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಬೆಳ್ಳಿ ತಟ್ಟೆ, ಬೆಳ್ಳಿ ಲೋಟಗಳನ್ನ ಬಳಸಲಾಗಿದೆ. ಎಲ್ಲ ಸಚಿವರು, ಶಾಸಕರಿಗೂ ಬೆಳ್ಳಿ ತಟ್ಟೆ, ಲೋಟಗಳಲ್ಲೇ ಉಪಚರಿಸಲಾಗಿದೆ. ಐಷಾರಾಮಿ ತಿಂಡಿ ತಿನಿಸುಗಳ ಜೊತೆಗೆ ಬೆಳ್ಳಿ ತಟ್ಟೆಗಳನ್ನೂ ಬಳಸಿರುವುದು ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ಚುನಾವಣೆಗೂ ಮೈತ್ರಿ ಮುಂದುವರಿಕೆ

ಲೋಕಸಭೆ ಚುನಾವಣೆಗೂ ಮುನ್ನವೇ 5 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದರೆ ಮೈತ್ರಿ ಮಾಡಿಕೊಂಡರೂ, ಆ ಕ್ಷೇತ್ರಗಳ ಗೆಲುವಿಗೆ ಶ್ರಮಿಸಬೇಕು. ರಾಮನಗರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು, ಜಮಖಂಡಿ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಳ್ಳುವುದು ಎಂಬ ನಿರ್ಧಾರವಾಗಿದೆ. ಇನ್ನು ಲೋಕಸಭೆಯಲ್ಲಿ ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಲಿದೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ತೀರ್ಮಾನ ಮಾಡಲಾಗಿದೆ. ಜಮಖಂಡಿ, ಶಿವಮೊಗ್ಗದಲ್ಲಿ ಜೆಡಿಎಸ್ ಪ್ರಭಾವಿ ಅಲ್ಲದಿದ್ದರೂ ಮೈತ್ರಿ ಧರ್ಮ ಪಾಲನೆಯಲ್ಲಿ ಹೊಂದಾಣಿಕೆ ಅನಿವಾರ್ಯ.

-ಡಾ.ಜಿ. ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News