ಅರ್ಜಿಯಲ್ಲಿ ಕೇಳಿರುವ ಮಾಹಿತಿ ಸರಳವಾಗಿದೆ: ಸಚಿವ ಬಂಡೆಪ್ಪ ಖಾಶೆಂಪೂರ
ಬೆಂಗಳೂರು, ಅ.4: ಸಹಕಾರ ಸಂಘಗಳ ಸಾಲ ಮನ್ನಾ ಮೊತ್ತ ಕ್ಲೇಮು ಮಾಡಲು ಅರ್ಜಿಯಲ್ಲಿ ಕೇಳಿರುವ ಮಾಹಿತಿ ಸರಳವಾಗಿದ್ದು ರೈತರು ಆತಂಕ ಪಡಬೇಕಾಗಿಲ್ಲ. ಆದಾಯ ತೆರಿಗೆ ಪ್ಯಾನ್ ಕಾರ್ಡ್ ಲಭ್ಯವಿದ್ದಲ್ಲಿ ಮಾತ್ರ ನೀಡಬಹುದು. ಇದು ಐಚ್ಛಿಕ ಆಯ್ಕೆಯಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ತಿಳಿಸಿದ್ದಾರೆ.
ಸಹಕಾರ ಸಂಘಗಳ ಸಾಲ ಮನ್ನಾ ಮೊತ್ತ ಕ್ಲೇಮು ಮಾಡಲು ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ಸರಳವಾದ ಮಾರ್ಗಸೂಚಿಗಳನ್ನು ಸಹಕಾರ ಸಂಘಗಳ ನಿಬಂಧಕರು ಹೊರಡಿಸಿದ್ದಾರೆ.
ರಾಜ್ಯದ ರೈತರು ಸಹಕಾರ ಸಂಘ ಅಥವಾ ಬ್ಯಾಂಕುಗಳಿಂದ ಪಡೆದ ಬೆಳೆ ಸಾಲವನ್ನು ಮನ್ನಾ ಮಾಡುವುದಾಗಿ ಸರಕಾರದ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಸಾಲ ಮನ್ನಾ ಆದೇಶವನ್ನು ಹೊರಡಿಸಲಾಗಿದೆ. ಅರ್ಜಿ ಸಲ್ಲಿಕೆ ಬಹಳ ಸರಳವಾಗಿದೆ. ಸಾಲ ಪಡೆದ ರೈತರಿಗೆ ಸಾಲ ಮನ್ನಾ ಸೌಲಭ್ಯ ಸಿಗಬೇಕು ಎನ್ನುವ ಕಾರಣಕ್ಕೆ ಅವರ ಉಳಿತಾಯ ಖಾತೆಗೆ ಸಾಲ ಮನ್ನಾ ಮೊತ್ತವನ್ನು ಜಮಾ ನೀಡಿ, ಡಿ.ಸಿ.ಸಿ. ಬ್ಯಾಂಕುಗಳು ಈ ಮೊತ್ತವನ್ನು ಸಂಘ ಅಥವಾ ಬ್ಯಾಂಕಿನಲ್ಲಿನ ರೈತರ ಸಾಲದ ಖಾತಗೆ ತಕ್ಷಣ ವರ್ಗಾಯಿಸಲಾಗುತ್ತದೆ.
ರೈತ ಕುಟುಂಬದ ಮುಖ್ಯಸ್ಥ ಸಲ್ಲಿಸಬೇಕಾದ ಅರ್ಜಿ ಮತ್ತು ಮುದ್ರೆಯಿಲ್ಲದ ಅಫಿಡವಿಟ್ ನಮೂನೆ ಬಗ್ಗೆ ವಿವರಣೆಯನ್ನೂ ನೀಡಲಾಗಿದೆ. ಸಾಲ ಪಡೆದ ರೈತರು ಸಾಲ ಮನ್ನಾಕ್ಕಾಗಿ ಅರ್ಜಿ ಯಾವ ರೀತಿ ಸಲ್ಲಿಸಬೇಕೆಂಬ ಮಾದರಿ ಅರ್ಜಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.