ಅಂಡರ್-19 ಏಶ್ಯಕಪ್: ಭಾರತ ಫೈನಲ್‌ಗೆ ಪ್ರವೇಶ

Update: 2018-10-04 18:43 GMT

ಢಾಕಾ, ಅ.4: ಆತಿಥೇಯ ಬಾಂಗ್ಲಾದೇಶ ವಿರುದ್ಧ ರೋಚಕ ಜಯ ದಾಖಲಿಸಿದ ಭಾರತ ರವಿವಾರ ನಡೆಯಲಿರುವ ಅಂಡರ್-19 ಏಶ್ಯಕಪ್‌ನ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದ ಮೋಹಿತ್ ಜಾಂಗ್ರಾ ಹಾಗೂ ಸಿದ್ದಾರ್ಥ್ ದೇಸಾಯಿ ಭಾರತಕ್ಕೆ 2 ರನ್ ಅಂತರದ ರೋಚಕ ಗೆಲುವು ತಂದರು.

ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ 49.3 ಓವರ್‌ಗಳಲ್ಲಿ ಕೇವಲ 172 ರನ್‌ಗೆ ಆಲೌಟಾಯಿತು. 69 ಎಸೆತಗಳಲ್ಲಿ 37 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಅಗ್ರ ಸ್ಕೋರರ್ ಎನಿಸಿಕೊಂಡರು. ಸಮೀರ್ ಚೌಧರಿ ಹಾಗೂ ಅನುಜ್ ರಾವತ್ ಕ್ರಮವಾಗಿ 36 ಹಾಗೂ 35 ರನ್ ಕೊಡುಗೆ ನೀಡಿದರು.

ವೇಗದ ಬೌಲರ್ ಜಾಂಗ್ರಾ ಹಾಗೂ ಎಡಗೈ ಸ್ಪಿನ್ನರ್ ದೇಸಾಯಿ ಅವರ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಭಾರತ ಕನಿಷ್ಠ ಸ್ಕೋರ್ ಗಳಿಸಿದರೂ ಗೆಲುವಿನ ನಗೆ ಬೀರಿತು. 6 ವಿಕೆಟ್‌ಗಳನ್ನು ಹಂಚಿಕೊಂಡ ಜಾಂಗ್ರಾ ಹಾಗೂ ದೇಸಾಯಿ ಬಾಂಗ್ಲಾದೇಶವನ್ನು 46.2 ಓವರ್‌ಗಳಲ್ಲಿ 170 ರನ್‌ಗೆ ಆಲೌಟ್ ಮಾಡಿದರು.

ಈ ಇಬ್ಬರು ಬೌಲರ್‌ಗಳು ಬಾಂಗ್ಲಾದ ಅಗ್ರ-6 ದಾಂಡಿಗರ ಪೈಕಿ ಐವರನ್ನು ಪೆವಿಲಿಯನ್‌ಗೆ ಅಟ್ಟಿ ಆಘಾತ ನೀಡಿದರು.

ಬಾಂಗ್ಲಾ 20ನೇ ಓವರ್‌ನಲ್ಲಿ 65 ರನ್‌ಗೆ 5 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆಗ 6ನೇ ವಿಕೆಟ್‌ಗೆ 74 ರನ್ ಜೊತೆಯಾಟ ನಡೆಸಿದ ಶಮೀಮ್ ಹುಸೈನ್(59) ಹಾಗೂ ವಿಕೆಟ್‌ಕೀಪರ್ ಅಕ್ಬರ್ ಅಲಿ(45)ತಂಡವನ್ನು ಸ್ಮರಣೀಯ ಗೆಲುವಿನತ್ತ ಮುನ್ನಡೆಸಿದರು.

ಬಾಂಗ್ಲಾ 6 ವಿಕೆಟ್‌ಗಳ ನಷ್ಟಕ್ಕೆ 139 ರನ್ ಗಳಿಸಿದ್ದಾಗ ಗೆಲ್ಲಲು 14.5 ಓವರ್‌ಗಳಲ್ಲಿ 34 ರನ್ ಅಗತ್ಯವಿತ್ತು. ಅರ್ಧಶತಕ ಸಿಡಿಸಿದ್ದ ಹುಸೈನ್ ಕ್ರೀಸ್‌ನಲ್ಲಿದ್ದರು. ಹಾಗಾಗಿ ಬಾಂಗ್ಲಾಕ್ಕೆ ಗೆಲ್ಲುವ ಎಲ್ಲ ಅವಕಾಶವಿತ್ತು. ಆದರೆ, ಭಾರತದ ಬೌಲರ್‌ಗಳು ಬಾಂಗ್ಲಾ ದಾಂಡಿಗರಿಗೆ ಸುಲಭವಾಗಿ ರನ್ ಬಿಟ್ಟುಕೊಡಲಿಲ್ಲ. ಅಂತಿಮವಾಗಿ ಭಾರತದ ಬೌಲರ್‌ಗಳ ಪ್ರಯತ್ನ ಫಲ ನೀಡಿದ್ದು, ಬಾಂಗ್ಲಾ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಹುಸೈನ್ 43ನೇ ಓವರ್‌ನಲ್ಲಿ ಪೆವಿಲಿಯನ್‌ಗೆ ಸೇರಿದ ಬಾಂಗ್ಲಾದ 8ನೇ ದಾಂಡಿಗ ಎನಿಸಿಕೊಂಡರು. 47 ಓವರ್‌ನೊಳಗೆ ಬಾಂಗ್ಲಾ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

 ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮಧ್ಯಮ ಓವರ್‌ನಲ್ಲೂ ಮೂರು ವಿಕೆಟ್‌ಗಳನ್ನು ಬೇಗನೇ ಕೈಚೆಲ್ಲಿತು. ಜೈಸ್ವಾಲ್ ಹಾಗೂ ರಾವತ್ 2ನೇ ವಿಕೆಟ್‌ಗೆ ಸೇರಿಸಿದ 66 ರನ್ ಹಾಗೂ ಆಯುಷ್ ಬಡೋನಿ(28) ಹಾಗೂ ಚೌಧರಿ(36) ನಡುವಿನ 59 ರನ್ ಜೊತೆಯಾಟದಿಂದ ಭಾರತ 200ರ ಗಡಿ ತಲುಪಲು ಯಶಸ್ವಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News