ಮಮತಾ ಬ್ಯಾನರ್ಜಿಗೆ ವಿಶೇಷ ಉಡುಗೊರೆ ನೀಡಿದ ಮೆಸ್ಸಿ

Update: 2018-10-05 18:40 GMT

ಕೋಲ್ಕತಾ, ಅ.5: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಾರ್ಸಿಲೋನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅವರು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

ವಿಶೇಷ ಸಂದೇಶ ಹಾಗೂ ತನ್ನದೇ ಹಸ್ತಾಕ್ಷರವಿರುವ ಬಾರ್ಸಿಲೋನದ ಜರ್ಸಿಯೊಂದನ್ನು ಮೆಸ್ಸಿ ಅವರು ಬ್ಯಾನರ್ಜಿಗೆ ಕಳುಹಿಸಿಕೊಟ್ಟಿದ್ದಾರೆ.

‘‘ಲಿಯೊನೆಲ್ ಮೆಸ್ಸಿಯಿಂದ ನನ್ನ ಸ್ನೇಹಿತೆ ದೀದಿಗೆ ಶುಭಾಶಯಗಳು’’ಎಂದು ಸಂದೇಶವಿರುವ ಜರ್ಸಿಯನ್ನು ಅಂಡರ್-17 ವಿಶ್ವಕಪ್‌ನ್ನು ಯಶಸ್ವಿಯಾಗಿ ಸಂಘಟಿಸಿದ್ದ ಮಮತಾ ಬ್ಯಾನರ್ಜಿಗೆ ಕಳುಹಿಸಿಕೊಡಲಾಗಿದೆ.

  ಮೋಹನ್ ಬಗಾನ್ ಲೆಜೆಂಡ್ಸ್ ಹಾಗೂ ಬಾರ್ಸಿಲೋನ ಲೆಜೆಂಡ್ಸ್ ನಡುವೆ ಪಂದ್ಯ ನಡೆದ ಬಳಿಕ ಫುಟ್ಬಾಲ್ ನೆಕ್ಟ್ಸ್ ಫೌಂಡೇಶನ್ ಸಂಘಟಕರಿಗೆ ಬಾರ್ಸಿಲೋನದ ಮಾಜಿ ಸ್ಟಾರ್ ಜುಲಿಯಾನೊ ಬೆಲ್ಲೆಟಿ ಹಾಗೂ ಜರಿ ಲಿಟ್ಮನೆನ್ ಅವರು ಜರ್ಸಿಯನ್ನು ಹಸ್ತಾಂತರಿಸಿದರು. ‘‘ಅವರಿಗೆ ವೈಯಕ್ತಿಕವಾಗಿ ಬ್ಯಾನರ್ಜಿಗೆ ಜರ್ಸಿಯನ್ನು ಹಸ್ತಾಂತರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಅವರು ನಮಗೆ ಅದನ್ನು ನೀಡಿದ್ದಾರೆ. ನಾವು ಸಿಎಂಒ ಅವರನ್ನು ಸಂಪರ್ಕಿಸಲಿದ್ದೇವೆ. ಮುಖ್ಯಮಂತ್ರಿಗಳು ನಮ್ಮನ್ನು ಭೇಟಿಯಾಗಲು ಇಷ್ಟಪಟ್ಟ ಸಂದರ್ಭದಲ್ಲಿ ಜರ್ಸಿಯನ್ನು ಹಸ್ತಾಂತರಿಸಲಿದ್ದೇವೆ’’ ಎಂದು ಫುಟ್ಬಾಲ್ ಫೌಂಡೇಶನ್‌ನ ಸ್ಥಾಪಕ ಕೌಶಿಕ್ ವೌಲಿಕ್ ಹೇಳಿದ್ದಾರೆ. ಮೆಸ್ಸಿ ಅವರು 2011ರಲ್ಲಿ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ಅರ್ಜೆಂಟೀನ ಹಾಗೂ ವೆನೆಝುವೆಲಾ ನಡುವೆ ನಡೆದ ಸೌಹಾರ್ದ ಪಂದ್ಯದ ವೇಳೆ ಕೋಲ್ಕತಾಕ್ಕೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News