ಸರ್ವ ಜನಾಂಗದ ಶಾಂತಿಯ ತೋಟಕ್ಕಾಗಿ ಹಂಬಲಿಸುತ್ತ...

Update: 2018-10-05 18:41 GMT

ಶಬ್ನಂ ಹೇಳುತ್ತಾರೆ, ''ದೊಡ್ಡ ದೊಡ್ಡ ದಂಗೆಗಳಾದಾಗ ದೇಶ, ವಿದೇಶಗಳಲ್ಲಿ ಚರ್ಚೆಯಾಗುತ್ತದೆ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನೆಗಳೇಳುತ್ತವೆ. ಇಂದು ಹಾಗಾಗದಂತೆ, ಹೊರಗೆ ಸುದ್ದಿಯಾಗದಂತೆ ಸಣ್ಣಸಣ್ಣದಾಗಿ ಜನರನ್ನು ಸೊಳ್ಳೆಗಳಂತೆ ಒರೆಸಿಹಾಕುವ, ಆದರೆ ಅದು ಸುದ್ದಿಯಾಗದಂತೆ ನೋಡಿಕೊಳ್ಳುವ ವಿದ್ಯಮಾನವಿದೆ. ಮೀಡಿಯಾಗಳೆಲ್ಲ ಬೇರೊಂದು ಚರ್ಚೆಯಲ್ಲಿ ಭಾಗಿಯಾಗಿರುತ್ತವೆ, ಇತ್ತ ನಡೆಯಬಾರದ್ದು ನಡೆದಿರುತ್ತದೆ. ಅಘೋಷಿತ ತುರ್ತುಪರಿಸ್ಥಿತಿಯಲ್ಲಿ ನಾವಿದ್ದೇವೆ ಈಗ. ಗೊತ್ತಾಗದಂತೆ ಸಮಾಜದಲ್ಲಿ ದ್ವೇಷದ ಬೀಜವನ್ನು ಬಿತ್ತಲಾಗುತ್ತಿದೆ. ಅಸಹನೆಯನ್ನು ಬೆಳೆಸಲಾಗುತ್ತಿದೆ, ಒಟ್ಟಿಗೆ ಬಾಳುತ್ತಿದ್ದ ಜನರು ಒಬ್ಬರನ್ನೊಬ್ಬರು ಸಂಶಯದಿಂದ ನೋಡುವಂತಾಗಿದೆ. ಯುದ್ಧ ನಡೆದಿದೆ, ಆದರೆ ಶಾಂತಿ ಇರುವಂತೆ ತೋರಿಸಿಕೊಳ್ಳಲಾಗುತ್ತಿದೆ.''

ದೇಶದಲ್ಲಿ ನಡೆಯುತ್ತಿರುವ ಸಂವಿಧಾನ ವಿರೋಧಿ ಚಟುವಟಿಕೆಗಳು ದೇಶದ ಮೂಲೆ ಮೂಲೆಯಿಂದ ಒಂದಿಲ್ಲೊಂದು ರೂಪದಲ್ಲಿ ಪ್ರತಿರೋಧ ವನ್ನು ಹುಟ್ಟುಹಾಕಿದೆ. ಮಧ್ಯ ಭಾರತದ ಆದಿವಾಸಿ ಮಹಿಳೆಯರು, ದಲಿತರು ತಮ್ಮ ಉಳಿವಿಗಾಗಿ ನಡೆಸಿರುವ ಮಹಿಳಾ ಕಿಸಾನ್ ಯಾತ್ರೆ ಒಂದಾದರೆ, ರಾಷ್ಟ್ರೀಯ ನಾಗರಿಕ ಸಂಘಟನೆಗಳ ಒಕ್ಕೂಟವು (ಎನ್.ಎ.ಪಿ.ಎಂ) ಆರಂಭಿಸಲಿರುವ ಸಂವಿಧಾನ ರಕ್ಷಿಸಿ ಪಾದಯಾತ್ರೆ, ಈಗ ನಡೆಯುತ್ತಿರುವ ಶಾಂತಿಗಾಗಿ ಮಾತುಕತೆಯ ಯಾತ್ರೆ. ಮೂರನೆಯ ಈ ಯಾತ್ರೆಯ ನೇತೃತ್ವ ವಹಿಸಿದವರು ಪ್ರಸಿದ್ಧ ನಾಟಕಕಾರ, ನಾಟಕ ಮಾಡುತ್ತಲೇ ಪ್ರಭುತ್ವದ ಗುಂಡಿಗೆ ಬಲಿಯಾದ ಸಫ್ದರ್ ಹಶ್ಮಿಯವರ ಸೋದರಿ ಶಬ್ನಂ ಹಶ್ಮಿಯವರು. 61 ವಯಸ್ಸಿನ ಶಬ್ನಂ ಹಶ್ಮಿ ಚಿಕ್ಕ ವಯಸ್ಸಿನವರಂತೆ ಉತ್ಸಾಹದ ಚಿಲುಮೆ, ಒಂದು ಕ್ಷಣವೂ ಬಿಡದೆ ಸತತ ಕೆಲಸದಲ್ಲಿ ತೊಡಗಿಕೊಂಡಿರುವ ಚೈತನ್ಯದ ಚಿಲುಮೆ. ಅವರೇ ಹೇಳಿಕೊಳ್ಳುವಂತೆ ದೇಶ ಇಬ್ಭಾಗವಾದಾಗ ತಾಯಿಯವರ ಕುಟುಂಬವೆಲ್ಲ ಪಾಕಿಸ್ತಾನಕ್ಕೆ ಹೊರಟು ಹೋದರೂ ತಾಯಿ ಮಾತ್ರ ಅವರೊಂದಿಗೆ ಹೋಗದೆಯೇ ತನಗಿಷ್ಟವಾದ ಯುವಕನನ್ನು ಮದುವೆಯಾಗಲು ದಿಲ್ಲಿಯಲ್ಲೇ ಉಳಿದರು.

ಅಜ್ಜನ ವ್ಯಾಪಾರವೆಲ್ಲ ನೆಲ ಕಚ್ಚಿತ್ತು. ಧರ್ಮದ ಹೆಸರಿನಲ್ಲಿ ದೇಶವೊಂದು ಎರಡು ಭಾಗವಾದಾಗ ಕುಟುಂಬ ಅನುಭವಿಸಿದ ಸಂಕಟ, ಅವಮಾನ, ಅಷ್ಟಿಷ್ಟಲ್ಲ. ಇಬ್ಬರು ಅಕ್ಕಂದಿರು, ಇಬ್ಬರು ಅಣ್ಣಂದಿರ ನಂತರ ಹುಟ್ಟಿದವರು ಶಬ್ನಂ. ಮನೆಯ ಕಿರಿಯ ಮುದ್ದಿನ ಮಗಳು. ತಂದೆ ಸ್ವಾತಂತ್ರ್ಯ ಹೋರಾಟಗಾರ. ತಾಯಿ ಆಧುನಿಕ ವಿಚಾರಗಳನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿ. ಮನೆಯಲ್ಲಿ ಬಡತನವಿದ್ದರೂ ಓದಲು ಪುಸ್ತಕಗಳಿಗೆ ಮಾತ್ರ ಕೊರತೆ ಇರಲಿಲ್ಲ. ಮಕ್ಕಳೆಲ್ಲರಿಗೂ ಆಧುನಿಕ ವಿಚಾರ, ಲಿಂಗ ಸೂಕ್ಷ್ಮ್ಮತೆ, ಸ್ವಾತಂತ್ರ್ಯ ಸಮಾನತೆಗಳ ಪಾಠ ಹೇಳುತ್ತ ಬೆಳೆಸಿದರು ಹಶ್ಮಿ ದಂಪತಿ. ತಂದೆ ಹೊರಗೆ ದುಡಿಯುತ್ತಿದ್ದರೂ ಮನೆಗೆ ಬಂದು ಅಡಿಗೆ, ಮನೆಗೆಲಸಗಳಲ್ಲಿ ಹೆಂಡತಿಗೆ ಸಮಾನವಾಗಿ ದುಡಿಯುತ್ತಿದ್ದ ಲಿಂಗ ಸೂಕ್ಷ್ಮ್ಮಿ. ಓದುವುದು, ಉದ್ಯೋಗದ ಆಯ್ಕೆ ಅಥವಾ ಮದುವೆ ವಿಷಯಗಳಲ್ಲಿ ಯಾರ ಮೇಲೂ ಒತ್ತಡವಿರಲಿಲ್ಲ. ತಾಯಿಯ ವಿಚಾರಗಳ ಬಗ್ಗೆ ಹೇಳುತ್ತ, ಶಬ್ನಂ ಅವರು ಒಂದು ಉದಾಹರಣೆಯನ್ನು ನಮ್ಮ ಮುಂದಿಟ್ಟರು. ಇವರ ಅಕ್ಕ ಸಬೀಹಾಗೆ ಆಭರಣಗಳೆಂದರೆ ಪ್ರೀತಿ. ಕೊಳ್ಳಲು ಅಮ್ಮನಿಗೆ ದುಂಬಾಲು ಬೀಳುತ್ತಿದ್ದಳು. ತಾಯಿ ಅದಕ್ಕೆ ವಿರೋಧಿಸುತ್ತಿರಲಿಲ್ಲ. ''ಹಾಕಿಕೊಂಡರೆ ಚೆಂದ ಕಾಣುತ್ತೀ ನಿಜ, ಆದರೆ ಈ ಆಭರಣಗಳೆಲ್ಲ ಹೆಣ್ಣಿಗೆ ಸಂಕೋಲೆಗಳೆನ್ನುವುದನ್ನು ಮರೆಯಬೇಡ. ಗೆಜ್ಜೆಯನ್ನು ಯಾಕೆ ತೊಡಿಸುತ್ತಾರೆ ಗೊತ್ತಾ? ಹುಡುಗಿ ಎಲ್ಲಿ ಓಡಾಡುತ್ತಿದ್ದಾಳೆ ಎನ್ನುವುದು ಗೊತ್ತಾಗಲಿ ಅಂತ. ಅವಳು ಆಭರಣಗಳನ್ನು ಹಾಕಿ ಗಂಡಸರಿಗೆ ಸುಂದರವಾಗಿ ಕಾಣುವ ವಸ್ತುವಾಗಲಿ ಎಂದು. ಇದು ಹೆಣ್ಣಿನ ಮೇಲೆ ಪುರುಷ ಪ್ರಧಾನ ಸಮಾಜ ಹಾಕಿರುವ ನಿಯಂತ್ರಣದ ಸಂಕೋಲೆಗಳು, ನೆನಪಿನಲ್ಲಿಡು'' ಎಂದು ವಿವರಿಸುತ್ತಿದ್ದರು.

ಹಶ್ಮಿ ಕುಟುಂಬದ ಮಕ್ಕಳೆಲ್ಲರೂ ಒಂದಿಲ್ಲೊಂದು ಕಲೆ ಪ್ರಕಾರದಲ್ಲಿ ಪಾರಂಗತರು. ಶಬ್ನಂ ಮಾತ್ರ ಓದನ್ನು ಅರ್ಧಕ್ಕೇ ಬಿಟ್ಟು ದಿಲ್ಲಿಯ ಬಡ ಜನರ ಬಸ್ತಿಗಳಲ್ಲಿ ಮಕ್ಕಳಿಗೆ ಪಾಠ ಹೇಳಲು ಆರಂಭಿಸಿದರು. ಶಾಲೆ ಬಿಟ್ಟ ಮಕ್ಕಳನ್ನು ಕೂಡಿಸಿ ಪಾಠ ಮಾಡಿ ಅವರು ಮತ್ತೆ ಶಾಲೆ ಸೇರುವಂತೆ ಮಾಡುತ್ತಿದ್ದುದು ಅವರ ಹವ್ಯಾಸ. ಅವರ ವಿದ್ಯಾರ್ಥಿನಿಯೊಬ್ಬರು ಮದುವೆ ಬಂಧನದಿಂದ ಹೊರಬಂದು, ಪೆಹಚಾನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇಂದು ದಿಲ್ಲಿಯ ಪೆಹಚಾನ್ ಸಂಸ್ಥೆ ಸಾವಿರಾರು ಶಾಲೆ ಬಿಟ್ಟ ಮಕ್ಕಳಿಗೆ ದಾರಿ ತೋರುವ ಸಂಸ್ಥೆಯಾಗಿದೆ.

ನಾಟಕಕಾರ ಹಶ್ಮಿಯವರ ಹತ್ಯೆಯಾಯಿತು. ನಾಟಕ ರಂಗದ ಮೇಲೆಯೇ ಆ ಅದ್ಭುತ ಕಲಾಕಾರನನ್ನು ಹತ್ಯೆಗೈದರು ದುಷ್ಕರ್ಮಿಗಳು. ಕುಟುಂಬಕ್ಕೆ ಅದೊಂದು ದೊಡ್ಡ ಆಘಾತ. ಆದರೆ ಪ್ರತಿರೋಧವೇ ಉಸಿರಾಗಿ ಬೆಳೆದಿದ್ದ ಕುಟುಂಬದ ಸದಸ್ಯರೆಲ್ಲರೂ ಸಮಾಜದ ಓರೆ ಕೋರೆಗಳನ್ನು ತಿದ್ದುವ, ಗಾಯಗೊಂಡವರನ್ನು ಆರೈಸುವ ಕೆಲಸದಲ್ಲಿ ಮಗ್ನರಾದರೇ ಹೊರತು ಧೃತಿಗೆಡಲಿಲ್ಲ. ತಮ್ಮ ಹಾದಿಯನ್ನು ಬದಲಾಯಿಸಿಕೊಳ್ಳಲೂ ಇಲ್ಲ. ಅಣ್ಣನ ನೆನಪಲ್ಲಿ 'ಸೆಹಮತ್' ಎಂಬ ಸಂಘಟನೆಯನ್ನು ಆರಂಭಿಸಿ ದಿಲ್ಲಿಯಲ್ಲಿ ಪ್ರಜಾ ಪ್ರಭುತ್ವಕ್ಕಾಗಿ, ಬಹುತ್ವಕ್ಕಾಗಿ, ಕಲೆಗಾಗಿ ಹದಿನೈದು ವರ್ಷಗಳ ಕಾಲ ದುಡಿದರು ಶಬ್ನಂ. ನೂರಾರು ಸಾವಿರಾರು ವಿದ್ಯಾರ್ಥಿ, ಯುವಜನರಿಗೆ ಪ್ರಜಾ ಪ್ರಭುತ್ವದ ಬಗ್ಗೆ ತರಬೇತಿ ನೀಡುತ್ತಿದೆ ಈ ಸಂಸ್ಥೆ.

 ಗೋಧ್ರಾ ಹತ್ಯಾಕಾಂಡ ಶಬ್ನಂ ಹಶ್ಮಿಯವರನ್ನು ಗುಜರಾತಿಗೆ ಕರೆಯಿತು. ಫೋಟೋಗ್ರಾಫರ್ ಆಗಿರುವ ಮಗ ಅಲ್ಲಿ ನಡೆದುದನ್ನು ದಾಖಲಿಸಲು ಗೋಧ್ರಾಕ್ಕೆ ಹೊರಟಾಗ ಶಬ್ನಂ ಮತ್ತು ಅವರ ಪತಿ ಗೋಹರ್ ರಝಾಕ್ ಕೂಡ ಹೊರಟರು. ಇವರು ಮಾಡಿದ ಡಾಕ್ಯುಮೆಂಟರಿ, 'ಈವಿಲ್ ಸ್ಟಾಕ್ಸ್ ದಿ ಲ್ಯಾಂಡ್' ಹಿಂದೂ ಮುಸ್ಲಿಮ್ ದಂಗೆಯ ನಿಜ ಚಿತ್ರಣವನ್ನು ಕಟ್ಟಿಕೊಡುತ್ತದೆ. ಆ ಹಿಂದೂ ಮುಸ್ಲಿಂ ದಂಗೆಗಳು ನೂರಾರು ಮಹಿಳೆಯರ ಮೇಲೆ ಗ್ಯಾಂಗ್‌ರೇಪನ್ನೆಸಗಿತ್ತು. ಗ್ಯಾಂಗ್‌ರೇಪ್‌ಗೆ ಬಲಿಯಾದವರನ್ನು ಸಂದರ್ಶಿಸಿ ದಾಖಲಿಸತೊಡಗಿದರು ಶಬ್ನಂ. ಒಂದೊಂದು ಕೇಸಿನ ಕಥೆಯೂ ಭಯಾನಕ. ಮನೆಯೊಳಗಿದ್ದವರನ್ನು ಎಳೆದೆಳೆದು ಸಾಮುದಾಯಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಒಬ್ಬ ಮಹಿಳೆಯ ಬಳಿ ಮಾತಾಡಿದರೆ ಆಕೆ ಇನ್ನೂ ಹತ್ತು ಮಹಿಳೆಯರ ಬಗ್ಗೆ ಹೇಳುತ್ತಿದ್ದಳು. ಹೀಗಾಗಿ ಅಧಿಕೃತವಾಗಿ ಅತ್ಯಾಚಾರಕ್ಕೊಳಗಾದವರ ಸಂಖ್ಯೆಗೂ ಶಬ್ನಂ ದಾಖಲಿಸಿದ ಸಂಖ್ಯೆಗೂ ಅಜಗಜಾಂತರ. ಎಲ್ಲೆಡೆ ಸ್ಮಶಾನ ಮೌನವಿತ್ತು. ಸಾಂತ್ವನ ಹೇಳಲು ಹೋದವರು, ಎದೆಗಪ್ಪಿಕೊಂಡು ಕಣ್ಣೀರೊರೆಸಲು ಹೋದವರಿಗೆ ಮಾತ್ರ ನಿಜಚಿತ್ರ ಗೊತ್ತು ಎನ್ನುತ್ತಾರೆ ಶಬ್ನಂ. ಇತ್ತ ಇಡೀ ಭಾರತ ಚರ್ಚೆಯಲ್ಲಿ ಮುಳುಗಿತ್ತು.

ಸಮುದಾಯದ ಮಟ್ಟದಲ್ಲಿ ಕೆಲಸ ಮಾಡಬೇಕೆಂಬ ಹಂಬಲದಿಂದ ಹರ್ಷ ಮಂದರ್, ಇತಿಹಾಸತಜ್ಞ ಕೆ.ಎನ್.ಫಣಿಕ್ಕರ್ ಮತ್ತು ಶಬ್ನಂ ಸೇರಿ 'ಅನ್ಹದ್' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಕಾಡಿನ ಬೆಂಕಿಯಂತೆ ಹರಡುತ್ತಿರುವ ಕೋಮು ದ್ವೇಷ ಶಬ್ನಂ ಅವರನ್ನು ಸದಾ ಕಾಡಿದೆ. ಹಾಗೆಯೇ ಎಲ್ಲಾ ಕೋಮು, ಜಾತಿಗಳಲ್ಲಿರುವ ಲಿಂಗ ತಾರತಮ್ಯವು ಕೂಡ ಅವರನ್ನು ನಿದ್ದೆಗೆಡಿಸಿದೆ. ಕೆಲ ವರ್ಷಗಳ ಹಿಂದೆ ಲಿಂಗ ತಾರತಮ್ಯದ ವಿರುದ್ಧ 'ರಿಸರ್ವೇಶನ್ ಎಕ್ಸ್‌ಪ್ರೆಸ್' ಎಂಬ ದೇಶದಾದ್ಯಂತ ರ್ಯಾಲಿ ಮಾಡಿದ್ದರು. ಝಾನ್ಸಿಯಿಂದ ಮೂರು ಧಾರೆಯಾಗಿ ಹೊರಟು ದೇಶದೆಲ್ಲೆಡೆ ಮಹಿಳಾ ಸಮಾನತೆಯ ಬಗ್ಗೆ ಮಾತನಾಡಿಕೊಂಡು ಅನುಭವಗಳನ್ನು ಮೇಳೈಸಿಕೊಂಡು ಮಹಿಳಾ ಸಂಘಟನೆಗಳು ದಿಲ್ಲಿಯಲ್ಲಿ ಒಂದುಗೂಡಿದ್ದವು. ಎಲ್ಲಿಂದಲಾದರೂ ದುಡ್ಡು ತಂದು ದೇಶದೆಲ್ಲೆಡೆ ತಿರುಗಿ ಜನ ಜನರನ್ನೂ ತಲುಪಿ ಶಾಂತಿಯ ಮಾತುಕತೆಯಾಡಬೇಕು. ಹತ್ತಾರು ಬಣ್ಣದ ದಾರಗಳನ್ನು ಸೇರಿಸಿ ಬಟ್ಟೆ ನೇಯ್ದಂತೆ ವಿವಿಧ ಕೋಮಿನ, ವಿವಿಧ ಭಾಷೆಯ, ವಿವಿಧ ಸಂಸ್ಕೃತಿಯ, ವಿವಿಧ ಪೋಷಾಕುಗಳ ಜನರನ್ನು ಒಟ್ಟಿಗೆ ತಂದು ಒಂದುಗೂಡಿಸಿ ಇಟ್ಟುಕೊಳ್ಳಬೇಕು. ಈ ವೈವಿಧ್ಯಮಯ ಭಾರತ ವೈವಿಧ್ಯಮಯವಾಗಿಯೇ ಪರಸ್ಪರರನ್ನು ಗೌರವಿಸುತ್ತಾ, ಬೇರೆಯವರನ್ನು ಬಾಳಗೊಡುತ್ತ ಒಟ್ಟಿಗೆ ಬಾಳುವಂತಾಗಬೇಕೆಂಬ ಹಂಬಲದಿಂದ ದೇಶ ಸುತ್ತುತ್ತಾರೆ ಶಬ್ನಂ.

2005ರಲ್ಲಿ ಕಾಶ್ಮೀರದಲ್ಲಿ ಭೂಕಂಪವಾಗಿ ಜನರು ಮನೆಗಳನ್ನು ಕಳೆದುಕೊಂಡು ಪರಿತಪಿಸುತ್ತಿದ್ದಾಗ ಶಬ್ನಂ ಅವರ ಶಿಷ್ಯನೊಬ್ಬ 'ದೀದೀ ನೀವಿಲ್ಲಿ ಬರಬೇಕು' ಎಂದು ಫೋನು ಮಾಡಿದ. ಬಾರಾಮುಲ್ಲಾ ಜಿಲ್ಲೆಯಲ್ಲಿ ಭೀಕರ ಭೂಕಂಪವಾಗಿತ್ತು. ಜನ ಮನೆ ಮಠ ಕಳೆದುಕೊಂಡಿದ್ದರು. ರಕ್ಷಣೆ, ಪುನರ್ವಸತಿಗೆ ಹೋದವರು ಸುಲಭವಾಗಿ ತಲುಪಬಲ್ಲ ಬಯಲು ಪ್ರದೇಶಗಳಿಗಷ್ಟೇ ತಮ್ಮ ಕೆಲಸವನ್ನು ಸೀಮಿತಗೊಳಿಸುತ್ತಿದ್ದರು. ಸಾಧನಾ ಪೀಕ್ ಎಂಬ ಶಿಖರದ ಮೇಲ್ಗಡೆ ವಾಸಿಸುತ್ತಿದ್ದ ಜನವಸತಿಗಳಿಗೆ ಏನೊಂದೂ ತಲುಪುತ್ತಿರಲಿಲ್ಲ. ಅಂಥಲ್ಲಿಗೆ ಹೋಯಿತು ಶಬ್ನಂ ಅವರ ತಂಡ. ಅಲ್ಲಿನ ತಾಂಗ್ದಾರ್ ಎಂಬ ಹಳ್ಳಿ, ವರ್ಷದಲ್ಲಿ 8 ತಿಂಗಳು ಹಿಮದಲ್ಲಿ ಮುಚ್ಚಿರುತ್ತದೆ. ಏನೊಂದು ಸಾಮಾನು ಬೇಕಾದರೂ ಕೆಳಗಿಳಿದು ಬರಬೇಕು. ಮತ್ತೆ ಶಿಖರವೇರಬೇಕು. ಅಂಥ ಹಳ್ಳಿಗಳಲ್ಲಿ ಚಹಾದಂಗಡಿ, ಕಿರಾಣಿ ಅಂಗಡಿ ತೆಗೆದು ಸ್ಥಳೀಯವಾಗಿಯೇ ಸಾಮಾನುಗಳು ಸಿಗುವಂತೆ ಮಾಡಿದರು. ಅಲ್ಲಿಯೇ ಕಂಪ್ಯೂಟರ್ ಸೆಂಟರ್ ತೆರೆದು ಯುವಕ ಯುವತಿಯರಿಗೆ ಕಂಪ್ಯೂಟರ್ ಜಗತ್ತನ್ನು ಪರಿಚಯಿಸಿದರು. 30 ಹಳ್ಳಿಗಳ ಸುಮಾರು 900 ಕುಟುಂಬಗಳ ಪುನರ್ವಸತಿಯನ್ನು ಗಡಿಗಳನ್ನು ಮೀರಿ ನಿಂತ 'ಅನ್ಹದ್' ಸಂಸ್ಥೆಯು ಮಾಡಿತು. ಕಾಶ್ಮೀರದ 30 ಹಳ್ಳಿಗಳಲ್ಲಿ, ಬಿಹಾರದ 10 ಹಳ್ಳಿಗಳಲ್ಲಿ ಮತ್ತು ಹರ್ಯಾಣದ 10 ಹಳ್ಳಿಗಳಲ್ಲಿ ಸ್ಥಳೀಯ ಸಮುದಾಯಗಳೊಂದಿಗೆ ಅನ್ಹದ್ ಕೆಲಸ ಮಾಡುತ್ತಿದೆ.

''ದುಡ್ಡಿಗೇನು ಮಾಡಿದಿರಿ?'' ಎಂದು ಶಬ್ನಂ ಅವರನ್ನು ಕೇಳಿದಾಗ ನಗುತ್ತಾರೆ. ''ನಾವೆಂದೂ ಕೆಲಸಕ್ಕಾಗಿ ದುಡ್ಡು ಸಂಗ್ರಹಣೆಗೆ ಹೋದವರಲ್ಲ. ನಮ್ಮ ಕೆಲಸದ ಬಗ್ಗೆ ಕೇಳಿದ ಕ್ರಿಶ್ಚಿಯನ್ ಏಡ್ ಸಂಸ್ಥೆ ತಾನಾಗಿಯೇ ಸಹಾಯಕ್ಕೆ ಬಂತು. 2014ರವರೆಗೂ ಅವರೊಂದಿಗೆ ನಮ್ಮ ಬಾಂಧವ್ಯ ಚೆನ್ನಾಗಿಯೇ ಇತ್ತು. ಆದರೀಗ ನಮ್ಮ ಸಂಸ್ಥೆಯ ಲೆಕ್ಕ ಪತ್ರಗಳದ್ದು, ವರದಿಗಳದ್ದು ಬಹಳ ವಿಚಾರಣೆ ನಡೆಯುತ್ತಿದೆ. ವಿದೇಶೀ ಹಣವನ್ನು ಪಡೆಯುವುದಕ್ಕೆ ಇರುವ ನೋಂದಣಿ ಪತ್ರವನ್ನು ಕಸಿದುಕೊಳ್ಳಲಾಗಿದೆ. ಮತ್ತೆ ಅದರ ನವೀಕರಣಕ್ಕೆ ನಾವು ಹೋಗಿಲ್ಲ. ಬೇಡವಾದರೆ ಬಿಡಿ, ಭಾರತೀಯರು ಕೊಟ್ಟ ದೇಣಿಗೆಯಲ್ಲೇ ಕೆಲಸ ಮಾಡುತ್ತೇವೆ ನಾವು.''

ಅನ್ಹದ್ ಕೆಲಸ ಮಾಡುವ ಪರಿಯನ್ನು ನೋಡಿದರೆ ಶಬ್ನಂ ಅವರ ಎದೆಗಾರಿಕೆಯ ಪರಿಚಯವಾಗುತ್ತದೆ. ಎಲ್ಲೆಡೆ ಭಯದ ನಿಶ್ಶಬ್ದವಿದ್ದಾಗ ಅನ್ಹದ್ ಮಾತನಾಡುತ್ತದೆ. ಗೋಧ್ರಾ ನಂತರದ ಹತ್ಯಾಕಾಂಡದಲ್ಲಿ ಅದೆಷ್ಟೋ ಮಕ್ಕಳನ್ನು ವಿಚಾರಣೆಯಿಲ್ಲದೆ ಜೈಲಿಗೆ ಹಾಕಲಾಗಿತ್ತು. ಅಲ್ಲಿ ನಡೆದುದನ್ನು ಫೋಟೊ ವೀಡಿಯೊಗಳ ಮೂಲಕ ಜಗತ್ತಿಗೆ ತೋರಿಸಿದ್ದು ಅನ್ಹದ್. ಬಾಬರಿ ಮಸೀದಿಯ ನಾಶದ ನಂತರ ಎರಡೇ ದಿನದಲ್ಲಿ ದಿಲ್ಲಿಯಲ್ಲಿ ಸಾರ್ವಜನಿಕ ಜನಸಂವಾದವನ್ನೇರ್ಪಡಿಸಿದ್ದು ಅನ್ಹದ್. ಬಿಹಾರದ ಫಾರ್ಬಿಸ್ ಗಂಜ್‌ನಲ್ಲಿ ಪೊಲೀಸ್ ಶೂಟಿಂಗ್ ಆಗಿ ನಿಷ್ಪಾಪಿ ಜನರು ಜೀವ ಕಳೆದುಕೊಂಡಾಗ ಹೋಗಿ ನಿಜಾಂಶವನ್ನೆಲ್ಲ ಬಯಲಿಗೆಳೆದು ಮಾತನಾಡಿದ್ದು ಅನ್ಹದ್. ರಾಜಸ್ಥಾನದ ಗೋಪಾಲ್‌ಗಡ್‌ದಲ್ಲಿ ಮಸೀದಿಯೊಳಗೆ ಪೊಲೀಸ್ ಫೈರಿಂಗ್ ಆದಾಗ ಸುದ್ದಿಮಾಡಲು ಹೋದ ಮಾಧ್ಯಮದವರಿಗೆ ಒಳಪ್ರವೇಶವಿರಲಿಲ್ಲ. ವಿಶ್ವ ಸಂಸ್ಥೆಯ ಶಾಂತಿ ಸಮಿತಿಯ ಸದಸ್ಯೆಯ ಕಾರ್ಡನ್ನುಪಯೋಗಿಸಿ ಶಬ್ನಂ ಒಳಪ್ರವೇಶಿಸಿದರು. ಜನರನ್ನು ಕೊಂದು ಹೆಣಗಳನ್ನು ದರದರನೆ ಎಳೆತಂದ ಪ್ರಭುತ್ವ ಎಲ್ಲೆಡೆ ರಕ್ತದೋಕುಳಿಯನ್ನು ಮಾಡಿತ್ತು. ಇವೆಲ್ಲದರ ಫೋಟೊ, ವೀಡಿಯೊಗಳನ್ನು ಮಾಡಿ ಹೊರಬಂದ ಶಬ್ನಂ ಅವರನ್ನು ಬೇಡಿಗಳು ಹೊರಗೆ ಕಾಯುತ್ತಿದ್ದವು. ಹೀಗೆ ಅಸಹನೆಯ ವಿರುದ್ಧ, ದಂಗೆಯ ವಿರುದ್ಧ ನಿಜ ಚಿತ್ರವನ್ನು ದಾಖಲಿಸಿ, ಜಗತ್ತಿಗೇ ತೋರಿಸುವ ಎದೆಗಾರಿಕೆ ಶಬ್ನಂ ಅವರದ್ದು. ಪೊಲೀಸರ ಬೇಡಿಗಳಾಗಲೀ ಬಂದೂಕಾಗಲೀ ಎಂದೂ ಅವರ ಎದೆಗುಂದಿಸಲೇ ಇಲ್ಲ.

ಶಬ್ನಂ ಹೇಳುತ್ತಾರೆ, ''ದೊಡ್ಡ ದೊಡ್ಡ ದಂಗೆಗಳಾದಾಗ ದೇಶ, ವಿದೇಶಗಳಲ್ಲಿ ಚರ್ಚೆಯಾಗುತ್ತದೆ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನೆಗಳೇಳುತ್ತವೆ. ಇಂದು ಹಾಗಾಗದಂತೆ, ಹೊರಗೆ ಸುದ್ದಿಯಾಗದಂತೆ ಸಣ್ಣಸಣ್ಣದಾಗಿ ಜನರನ್ನು ಸೊಳ್ಳೆಗಳಂತೆ ಒರೆಸಿಹಾಕುವ, ಆದರೆ ಅದು ಸುದ್ದಿಯಾಗದಂತೆ ನೋಡಿಕೊಳ್ಳುವ ವಿದ್ಯಮಾನವಿದೆ. ಮೀಡಿಯಾಗಳೆಲ್ಲ ಬೇರೊಂದು ಚರ್ಚೆಯಲ್ಲಿ ಭಾಗಿಯಾಗಿರುತ್ತವೆ, ಇತ್ತ ನಡೆಯಬಾರದ್ದು ನಡೆದಿರುತ್ತದೆ. ಅಘೋಷಿತ ತುರ್ತುಪರಿಸ್ಥಿತಿಯಲ್ಲಿ ನಾವಿದ್ದೇವೆ ಈಗ. ಗೊತ್ತಾಗದಂತೆ ಸಮಾಜದಲ್ಲಿ ದ್ವೇಷದ ಬೀಜವನ್ನು ಬಿತ್ತಲಾಗುತ್ತಿದೆ. ಅಸಹನೆಯನ್ನು ಬೆಳೆಸಲಾಗುತ್ತಿದೆ, ಒಟ್ಟಿಗೆ ಬಾಳುತ್ತಿದ್ದ ಜನರು ಒಬ್ಬರನ್ನೊಬ್ಬರು ಸಂಶಯದಿಂದ ನೋಡುವಂತಾಗಿದೆ. ಯುದ್ಧ ನಡೆದಿದೆ, ಆದರೆ ಶಾಂತಿ ಇರುವಂತೆ ತೋರಿಸಿಕೊಳ್ಳಲಾಗುತ್ತಿದೆ.''

''ಈ ಅತಿ ತೀವ್ರ ಅಪಾಯಕಾರಿ ಪರಿಸ್ಥಿತಿ ಯನ್ನು ನೋಡಿದ ನಾವು ಕೆಲವು ಸಂಘಟನೆಗಳು ದಿಲ್ಲಿಯಲ್ಲಿ ಕುಳಿತು ಚರ್ಚೆ ಮಾಡಿದೆವು. ಸಾರ್ವಭೌಮತೆಯನ್ನೂ, ಸಮಾನತೆಯನ್ನೂ ತಂದುಕೊಟ್ಟಿರುವ ಸಂವಿಧಾನವನ್ನೂ, ನಮ್ಮ ದೇಶದ ಬಹುತ್ವವನ್ನೂ ಉಳಿಸಿಕೊಳ್ಳಬೇಕು. ಅದಕ್ಕಾಗಿ ಜನ ಜನಗಳ ಮಧ್ಯೆ ಶಾಂತಿಯ ಮಾತುಕತೆಗಳಾಗಬೇಕು. ಸುಮ್ಮನೆ ಕೂಡಲು ಸಾಧ್ಯವಿಲ್ಲ ಎಂದು ಹೊರಟಿದ್ದೇವೆ. ಅದೇ 'ಬಾತೆ ಅಮನ್ ಕೀ''.

''ಮಹಿಳೆಯರಿಂದು ಮಾತಾಡಬೇಕಾಗಿದೆ. ಅಸಹನೆಯ ಬೆಂಕಿಯನ್ನು ಆರಿಸಬೇಕಾಗಿದೆ. ಸಂವಿಧಾನವನ್ನು ರಕ್ಷಿಸಬೇಕಾಗಿದೆ. ಯಾಕೆಂದರೆ ಯಾವ ಸಮಾಜದಲ್ಲೂ, ಯಾವ ಕೋಮಿನಲ್ಲೂ ಹೆಣ್ಮಕ್ಕಳಿಗೆ ಸಮಾನತೆಯನ್ನು ಯಾರೂ ಕೊಡದಿದ್ದಾಗ ಕೇವಲ ಸಂವಿಧಾನವು ನಮಗೆ ಸಮಾನತೆಯನ್ನು ಕೊಟ್ಟಿದೆ. ನಮ್ಮ ಬದುಕುವ ಹಕ್ಕಿಗಾಗಿ, ನಮ್ಮ ಸ್ವಾತಂತ್ರ್ಯಕ್ಕಾಗಿ, ನಮ್ಮ ಸಮಾನತೆಯ ಉಸಿರಿಗಾಗಿ ನಾವು ಸಂವಿಧಾನ ರಕ್ಷಿಸಲು ಬೀದಿಗಿಳಿಯಲೇಬೇಕಾಗಿದೆ.''

Writer - ಶಾರದಾ ಗೋಪಾಲ

contributor

Editor - ಶಾರದಾ ಗೋಪಾಲ

contributor

Similar News