106 ವರ್ಷಗಳ ಸಂಭ್ರಮದಲ್ಲಿ ಅಂಜುಮನ್ ಹಾಮಿಯೇ ಮುಸ್ಲಿಮೀನ್
ನಾಳೆಯಿಂದ ಭಟ್ಕಳದಲ್ಲಿ ‘ಅಂಜುಮನ್ ದಿನ’
ಭಟ್ಕಳ : ಕರ್ನಾಟಕದ ಕರಾವಳಿ ಭಟ್ಕಳದಲ್ಲಿ ಶತಮಾನಕ್ಕೂ ಅಧಿಕ ಕಾಲ ತನ್ನ ಅದ್ವಿತೀಯ ಶಿಕ್ಷಣ ಸೇವೆಯಿಂದ ಗುರುತಿಸಿಕೊಂಡಿರುವ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಸಂಸ್ಥೆ ಪ್ರಸಕ್ತ 106ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.
ಸಮಾಜದ ಶಿಕ್ಷಣ, ಸಂಸ್ಕೃತಿ ಮತ್ತು ಪ್ರಗತಿಗೆ ಸಮರ್ಪಿತವಾಗಿ ಸೇವೆಯ ಧ್ವಜವನ್ನು ಹೊತ್ತು ಸಾಗುತ್ತಿರುವ ಈ ಸಂಸ್ಥೆ ಕೇವಲ ಭಟ್ಕಳದಷ್ಟೇ ಅಲ್ಲದೆ ಉಡುಪಿ, ಉತ್ತರ ಕನ್ನಡ ಜಿಲ್ಲಾದ್ಯಂತ ಶಿಕ್ಷಣ ಇತಿಹಾಸದಲ್ಲೂ ವಿಶಿಷ್ಟ ಸ್ಥಾನ ಪಡೆದಿದೆ.
106ನೇ ವರ್ಷದ ಸಂದರ್ಭವನ್ನು ಸ್ಮರಿಸಲು ಡಿ.13 ಮತ್ತು 14 ರಂದು ‘ಅಂಜುಮನ್ ದಿನ’ ದ ಭವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಜಾಗೃತಿ-ಸಾಂಸ್ಕೃತಿಕ-ಶೈಕ್ಷಣಿಕ ಕಾರ್ಯಕ್ರಮಗಕ್ಕೆ ಗಣ್ಯರು, ಹಳೇ ವಿದ್ಯಾರ್ಥಿಗಳು, ಪೋಷಕರು ಸೇರಿ ಸಾವಿರಾರು ಜನರು ಸೇರುವ ನಿರೀಕ್ಷೆಯಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಇತಿಹಾಸದ ಬೆಳಕು ‘ಅಂಜುಮನ್’: 1919ರಲ್ಲಿ ಪ್ರಾರಂಭವಾದ ಭಟ್ಕಳದ ಅಂಜುಮನ್ ಹಾಮಿಯೇ ಮುಸ್ಲಿಮೀನ್, ಮೂಲೆಮೂಲೆಗಳಲ್ಲಿ ಪಸರಿಸಿದ್ದ ಅಂಧಕಾರವನ್ನು ದೂರ ಮಾಡಿ, ಸಮಾಜಕ್ಕೆ ಶಿಕ್ಷಣದ ದೀಪ ಹಚ್ಚಿತ್ತು. ವಿನಯ, ಮೌಲ್ಯ, ಸಂಸ್ಕೃತಿ ಮತ್ತು ವ್ಯಕ್ತಿತ್ವ ರೂಪಿಸುವುದೇ ಸಂಸ್ಥೆಯ ಗುರಿಯಾಗಿದೆ. ಇದು ಭಟ್ಕಳದ ವ್ಯಕ್ತಿತ್ವ, ಜ್ಞಾನ, ಸಂಸ್ಕೃತಿ ಮತ್ತು ಪ್ರಗತಿಯ ಮೂಲಸ್ತಂಭ. 106 ವರ್ಷಗಳಲ್ಲಿ 25ಕ್ಕೂ ಹೆಚ್ಚು ಶೈಕ್ಷಣಿಕ ಘಟಕಗಳು, ನೂರಾರು ಶಿಕ್ಷಕರು, ಸಾವಿರಾರು ವಿದ್ಯಾರ್ಥಿಗಳು, ದೇಶ-ವಿದೇಶಗಳಲ್ಲಿ ಹಳೇ ವಿದ್ಯಾರ್ಥಿಗಳು ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವುದು ಇವೆಲ್ಲವೂ ಸಂಸ್ಥೆಯ ಕೊಡುಗೆಯಾಗಿವೆ.
ಅಂಜುಮನ್ ಸಂಸ್ಥೆಯನ್ನು ‘ಮುಸ್ಲಿಮೀನ್’ ಎಂದು ಕರೆಯಲಾದರೂ, ಧರ್ಮ, ಜಾತಿ, ವರ್ಗಗಳ ತಾರತಮ್ಯವಿಲ್ಲದ ಶಿಕ್ಷಣ ಸೇವೆಯನ್ನು ಒದಗಿಸುತ್ತಿದೆ. ಅನೇಕ ಮುಸ್ಲಿಮೇತರ ವಿದ್ಯಾರ್ಥಿಗಳೂ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಸಂಸ್ಥೆಯ ವ್ಯಾಪಕ ದೃಷ್ಟಿಯ ಸಾಕ್ಷಿಯಾಗಿದೆ.
ಮೌಲ್ಯಯುತ ಶಿಕ್ಷಣ: ಅಧುನಿಕತೆ ಮತ್ತು ನೈತಿಕತೆ ಎರಡನ್ನೂ ಸಮತೋಲನದಲ್ಲಿಡುವುದು ಅಂಜುಮನ್ ಶಿಕ್ಷಣದ ವೈಶಿಷ್ಟ್ಯ. ಇಲ್ಲಿ ಶಿಸ್ತು, ವಿನಯ, ಸಮಾಜ ಸೇವೆ, ಸಾಂಸ್ಕೃತಿಕ ಜ್ಞಾನ, ನೈತಿಕತೆ ಇವುಗಳನ್ನು ಒಟ್ಟಾಗಿ ಬೆಳೆಸುವ ಶಿಕ್ಷಣ ವಾತಾವರಣವಿದೆ. ‘ಜ್ಞಾನ, ವಿನಯ, ಸೇವೆ’ ಅಂಜುಮನ್‌ನ ಶಿಕ್ಷಣದ ಆಧಾರಸ್ತಂಭಗಳು.
ಸಂಸ್ಥೆಯ ಅಧೀನದಲ್ಲಿರುವ ಶಾಲಾ, ಕಾಲೇಜುಗಳು: AHM ಹೈಸ್ಕೂಲ್, AHM ಪ್ರೌಢಶಾಲೆ, AHM ಪದವಿ ಕಾಲೇಜು, ಮ್ಯಾನೇಜ್‌ಮೆಂಟ್ ಮತ್ತು ಸೈನ್ಸ್ ವಿಭಾಗಗಳು, ತಾಂತ್ರಿಕ ಮತ್ತು ಆಧುನಿಕ ಶಿಕ್ಷಣ ಘಟಕಗಳು ಇವೆಲ್ಲವೂ ಭಟ್ಕಳದ ಯುವ ಜನತೆಯ ಜ್ಞಾನ, ಪ್ರತಿಭೆ, ವ್ಯಕ್ತಿತ್ವವನ್ನು ಬೆಳಗಿಸಿದ ಪ್ರಮುಖ ವೇದಿಕೆಗಳಾಗಿವೆ.
ಆಧುನಿಕ ತಂತ್ರಜ್ಞಾನ ಶಿಕ್ಷಣ, global standard ಲರ್ನಿಂಗ್, ಹೊಸ ಕೋರ್ಸ್‌ಗಳು, ಉದ್ಯೋಗ ಆಧಾರಿತ ತರಬೇತಿ, ಮಹಿಳಾ ಶಿಕ್ಷಣಕ್ಕೆ ಹೆಚ್ಚುವರಿ ಒತ್ತು, ಜಾಗತಿಕ ಹಳೇ ವಿದ್ಯಾರ್ಥಿ ಜಾಲವನ್ನು ಬಲಪಡಿಸುವತ್ತ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಸಜ್ಜಾಗಿದೆ.
ಅಂಜುಮನ್ ದಿನ: ಡಿ.13 ಮತ್ತು 14ರಂದು ನಡೆಯುವ ಈ ವಿಶೇಷ ಕಾರ್ಯಕ್ರಮಗಳಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮೀನುಗಾರಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೇರಿದಂತೆ ಅನೇಕ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯಾರ್ಥಿ ಗೌರವ ಸಮಾರಂಭ, 106 ವರ್ಷದ ಸಾಧನೆಗಳ ಪ್ರದರ್ಶನ, ಹಳೇ ವಿದ್ಯಾರ್ಥಿಗಳ ಮಿಲನ, ವಿಶೇಷ ಪ್ರವಚನ-ಸಮಾವೇಶಗಳು ನಡೆಯಲಿವೆ.