×
Ad

ಗಣೇಶ್ ಘೋಷ್-ಚಿತ್ತಗಾಂಗ್ ಶಸ್ತ್ರಾಸ್ತ್ರ ಕೋಠಿ ಲೂಟಿಯ ಕ್ರಾಂತಿಕಾರಿ : ಇವರಾರೂ ಕ್ಷಮೆ ಯಾಚಿಸಲಿಲ್ಲ!

ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!

Update: 2025-12-12 12:43 IST

ಭಾಗ - 7

ಗಣೇಶ್ ಘೋಷ್ ಜೂನ್‌22, 1900ರಂದು ಇಂದಿನ ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಜನಿಸಿದರು. ಕಲ್ಕತ್ತಾದ ಕಾಲೇಜು ಸೇರಿದ ಬಳಿಕ ಅವರು ಚಿತ್ತಗಾಂಗ್‌ನ ಜುಗಾಂತರ್ ಪಕ್ಷದ ಸದಸ್ಯರಾದರು. 1930ರ ಎಪ್ರಿಲ್ 18ರಂದು ಅವರು ಸೂರ್ಯ ಸೇನ್ ನೇತೃತ್ವದ ಚಿತ್ತಗಾಂಗ್ ಶಸ್ತ್ರಾಸ್ತ್ರ ಕೋಠಿಗೆ ದಾಳಿ ನಡೆಸಿದರು. ‘ಚಿತ್ತಗಾಂಗ್‌ಆರ್ಮರಿ ರೈಡ್ ಪ್ರಕರಣ’ವೆಂದೇ ಇದು ಪ್ರಖ್ಯಾತವಾಯಿತು.

ಪ್ರಕರಣದ ವಿಚಾರಣೆ ಬಳಿಕ ಗಣೇಶ್‌ಘೋಷ್ ಅವರನ್ನು ಅಂಡಮಾನ್‌ನ ಜೈಲಿಗೆ ರವಾನಿಸಲಾಯಿತು. 1946ರಲ್ಲಷ್ಟೇ ಅವರ ಬಿಡುಗಡೆಯಾಯಿತು.

ಬಿಡುಗಡೆ ಬಳಿಕ ಅವರು ಭಾರತೀಯ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದರು. 1952, 57, 62ರಲ್ಲಿ ಅವರು ಬಂಗಾಲದ ವಿಧಾನ ಸಭಾ ಸದಸ್ಯರಾಗಿದ್ದರು. 1967ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 1994ರ ಅಕ್ಟೋಬರ್‌16ರಂದು ಕೊನೆ ಉಸಿರೆಳೆದರು.

ಗಣೇಶ್ ಘೋಷ್ ಅವರ ಕ್ರಾಂತಿಕಾರಿ ಜೀವನವನ್ನು ಈ ಚಿತ್ತಗಾಂಗ್ ಶಾಸ್ತ್ರಾಸ್ತ್ರ ಕೋಠಿಯ ಮೇಲಿನ ದಾಳಿಯ ನೇತೃತ್ವ ವಹಿಸಿದ ಸೂರ್ಯ ಸೆನ್ ಅವರ ಜೀವನದಿಂದ ಬೇರ್ಪಡಿಸಿ ನೋಡಲಾಗದು. ಶಾಲಾ ಮಾಸ್ತರರಾಗಿದ್ದ ಸೂರ್ಯ ಸೆನ್ ಚಿತ್ತಗಾಂಗ್‌ನಲ್ಲಿ ಕ್ರಾಂತಿಕಾರಿಗಳ ಪಡೆ ಕಟ್ಟಿದರು. ಶಸ್ತ್ರಾಸ್ತ್ರ ಹೊಂಚಲು ಬ್ರಿಟಿಷ್ ಶಸ್ತ್ರಾಸ್ತ್ರ ಕೋಠಿಗೇ ದಾಳಿ ಮಾಡುವ ಡೇರಿಂಗ್ ಕಾರ್ಯವನ್ನೂ ಮಾಡಿದರು. ದುರದೃಷ್ಟವಶಾತ್ ಈ ತಂಡಕ್ಕೆ ಶಸ್ತ್ರಾಸ್ತ್ರ ದೊರಕಲಿಲ್ಲ. ತುರವಾಯ ಬ್ರಿಟಿಷ್ ಪಡೆ ಜೊತೆ ನಡೆದ ಗುಂಡಿನ ಕಾಳಗದಲ್ಲಿ 80 ಬ್ರಿಟಿಷ್ ಸೈನಿಕರು ಸತ್ತರು. 20 ಕ್ರಾಂತಿಕಾರಿಗಳೂ ಅಸು ನೀಗಿದರು. ಕಾಡೊಳಗೆ ಚದುರಿ ಹೋದ ಕ್ರಾಂತಿಕಾರಿಗಳನ್ನು ಬ್ರಿಟಿಷ್ ಸರಕಾರ ವ್ಯವಸ್ಥಿತವಾಗಿ ಬೇಟೆಯಾಡಿತು. ಗಣೇಶ್ ಘೋಷ್ ಸೆರೆ ಸಿಕ್ಕರೆ ಉಳಿದ ಕೆಲವರು ಹುತಾತ್ಮರಾದರು. ಸೂರ್ಯ ಸೆನ್ ಅವರ ತಂಡದ ಇನ್ನೊಬ್ಬ ಧೀರೋದಾತ್ತ ಕ್ರಾಂತಿಕಾರಿ ಕಲ್ಪನಾ ದತ್. ತನ್ನ 17ನೇ ವಯಸ್ಸಿನಲ್ಲಿ ಈಕೆ ಚಿತ್ತಗಾಂಗ್ ರೈಡ್‌ನಲ್ಲಿ ಭಾಗವಹಿಸಿದ್ದರು. ಕಲ್ಪನಾ ದತ್ ವರ್ಷ ಕಾಲ ಬ್ರಿಟಿಷರ ಕೈಗೆ ಸಿಗದೆ ತಲೆ ಮರೆಸಿಕೊಂಡರೂ ಕೊನೆಗೆ ಸೆರೆ ಸಿಕ್ಕರು. ಕಲ್ಪನಾದತ್ ಹಲವು ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿ 1940ರಲ್ಲಿ ಬಿಡುಗಡೆ ಹೊಂದಿದರು. ಬಳಿಕ ಅವರು ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಪಿ.ಸಿ. ಜೋಷಿ ಅವರನ್ನು ವಿವಾಹವಾದರು. ಕಲ್ಪನಾ ದತ್ ಅವರು 1995ರಲ್ಲಿ ತೀರಿಕೊಂಡರು.

ಕ್ರಾಂತಿಕಾರಿಗಳ ನಾಯಕ ಸೂರ್ಯ ಸೇನ್ ಅವರ ಅಡುಗುದಾಣದ ಬಗ್ಗೆ ಬ್ರಿಟಿಷರ ಬಹುಮಾನದ ಆಸೆಗೆ ನೇತ್ರ ಸೆನ್ ಎಂಬಾತ ಬ್ರಿಟಿಷರಿಗೆ ಸುಳಿವು ಕೊಟ್ಟು ಸೂರ್ಯ ಸೆನ್ ಬಂಧನಕ್ಕೊಳಗಾದರು. ಈ ದ್ರೋಹಿ ನೇತ್ರ ಸೆನ್ ಬಹುಮಾನದ ಹಣ ಪಡೆಯುವ ಮೊದಲೇ ಇನ್ನೊಬ್ಬ ಕ್ರಾಂತಿಕಾರಿ ಕಿರಣ್ಮೊಯ್‌ಸೆನ್ ಈ ನೇತ್ರ ಸೆನ್ ಮನೆಗೆ ನುಗ್ಗಿ ಆತನ ತಲೆ ಕತ್ತರಿಸಿ ಹಾಕಿದ್ದನು. ಈ ದ್ರೋಹಿ ನೇತ್ರ ಸೆನ್ ಪತ್ನಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಉತ್ಕಟ ಅಭಿಮಾನ ಹೊಂದಿದ್ದವಳು. ತನ್ನೆದುರೇ ತನ್ನ ಗಂಡನ ತಲೆ ತರಿದರೂ ಆಕೆ ಬ್ರಿಟಿಷರಿಗೆ ಈ ಹತ್ಯೆ ಮಾಡಿದ ಕ್ರಾಂತಿಕಾರಿಯ ಹೆಸರು ತಿಳಿಸಲಿಲ್ಲ.

ಬಂದನಕ್ಕೊಳಗಾದ ಸೂರ್ಯ ಸೆನ್ ಅವರನ್ನು ಅವರ ಸಹ ಕ್ರಾಂತಿಕಾರಿ ತಾರಕೇಶ್ವರ ದಸ್ತಿದಾರ ಜೊತೆಗೆ ಜನವರಿ 12, 1934ರಂದು ಗಲ್ಲಿಗೇರಿಸಲಾಯಿತು.

ತಮ್ಮ ಕೊನೆಯ ಪತ್ರದಲ್ಲಿ ಸೂರ್ಯ ಸೆನ್ ತನ್ನ ಕಾಮ್ರೇಡರಿಗೆ ಹೀಗೆ ಬರೆದರು:

‘‘ಸಾವು ಕದ ಬಡಿಯುತ್ತಿದೆ. ನನ್ನ ಮನಸ್ಸು ಅನಂತದೆಡೆಗೆ ಹಾರುತ್ತಿದೆ.ಇಂಥಾ ಶುಭ ಗಳಿಗೆಯಲ್ಲಿ ನಾನೇನು ನಿಮಗೆ ಬಿಟ್ಟು ಹೋಗಲು ಸಾಧ್ಯ? ಸ್ವತಂತ್ರ ಭಾರತ.. ಆ ಒಂದು ಕನಸನ್ನುಳಿದು ಇನ್ನೇನನ್ನೂ ಬಿಟ್ಟು ಹೋಗಲಾರೆ. ಎಪ್ರಿಲ್‌18, 1930ನ್ನು ಎಂದಿಗೂ ಮರೆಯದಿರಿ. ಚಿತ್ತಗಾಂಗ್‌ನ ಬಂಡಾಯವನ್ನು ಮರೆಯದಿರಿ. ಭಾರತದ ಸ್ವಾತಂತ್ರ್ಯದ ಬಲಿಗಂಬದಲ್ಲಿ ಪ್ರಾಣ ತೆತ್ತ ಕ್ರಾಂತಿಕಾರಿಗಳ ಹೆಸರನ್ನು ನೆತ್ತರ ಬಣ್ಣದಲ್ಲಿ, ನಿಮ್ಮ ಹೃದಯದಲ್ಲಿ ಬರೆಯಿರಿ’’

ನೆನಪಿಡಿ: ಈ ಕ್ರಾಂತಿಕಾರಿಗಳು ತಮ್ಮ ಧೀರೋದಾತ್ತ ಚಟುವಟಿಕೆ ನಡೆಸಿ ಹುತಾತ್ಮರಾಗುತ್ತಿದ್ದಾಗ ಸಾವರ್ಕರ್ ಇದ್ದರು!! ಈ ದಿವ್ಯ ಚೇತನಗಳ ಬಗ್ಗೆ ಸಾವರ್ಕರ್ ಒಂದು ಮಾತಾಡಿದ ಪುರಾವೆಯೂ ಇಲ್ಲ. ಅವರಾಗಲೇ ಪಿಂಚಣಿ ಪಡೆದು ಕೂತಿದ್ದರು.

ಸೂರ್ಯ ಸೆನ್ ಅವರನ್ನು ಗಲ್ಲಿಗೇರಿಸಿದ ಜಾಗ. (ಚಿತ್ತಗಾಂಗ್ ಜೈಲಿನ ಆವರಣದಲ್ಲಿ) ಬಾಂಗ್ಲಾ ದೇಶ ಇದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುರೇಶ್ ಕಂಜರ್ಪಣೆ

contributor

Similar News