ಮೂರು ಲೋಕಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಅಗತ್ಯವಿರಲಿಲ್ಲ: ದಿನೇಶ್ ಗುಂಡೂರಾವ್

Update: 2018-10-06 14:17 GMT

ಬೆಂಗಳೂರು, ಅ. 6: ಅತ್ಯಂತ ಕಡಿಮೆ ಅವಧಿ ಇರುವ ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಅಗತ್ಯವಿರಲಿಲ್ಲ. ಆದರೂ, ಉಪ ಚುನಾವಣೆ ಘೋಷಣೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಉಪ ಚುನಾವಣೆ ಘೋಷಣೆ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಾಡಿದ್ದು, ಇನ್ನೂ ನಾಲ್ಕೂವರೆ ವರ್ಷ ಸಮಯವಿದೆ. ಉಪ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಈ ಸಂಬಂಧ ನಮ್ಮ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದು ನಮ್ಮ ಗುರಿ ಎಂದರು.

ಇಂದು ಉಪ ಚುನಾವಣೆ ಘೋಷಣೆಯಾಗಿದೆ. ಅಭ್ಯರ್ಥಿಗಳ ಬಗ್ಗೆ ಇನ್ನೂ ಚರ್ಚಿಸಿಲ್ಲ. ಜಮಖಂಡಿ ಕ್ಷೇತ್ರದಲ್ಲಿ ಸಿದ್ದು ನ್ಯಾಮಗೌಡ ಅವರ ಪುತ್ರನಿಗೆ ಟಿಕೆಟ್ ನೀಡುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಆದರೆ, ಆ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಯನಗರ, ಆರ್.ಆರ್.ನಗರ ಕ್ಷೇತ್ರ ಚುನಾವಣೆಯಲ್ಲಿಯೂ ನಾವು ಗೆದ್ದಿದ್ದೇವೆ. ಉಪ ಚುನಾವಣೆಗೂ, ಸಾರ್ವತ್ರಿಕ ಚುನಾವಣೆಗೂ ಬಹಳ ವ್ಯತ್ಯಾಸವಿದೆ ಎಂದ ಅವರು, ಈ ಉಪ ಚುನಾವಣೆ ಸಾರ್ವತ್ರಿಕ ಚುನಾವಣೆ ದಿಕ್ಸೂಚಿಯಲ್ಲ ಎಂದು ಇದೆ ವೇಳೆ ತಿಳಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಟಿ ರಮ್ಯಾ ಸ್ಪರ್ಧೆ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ. ಯಾವ ತೀರ್ಮಾನವೂ ಆಗಿಲ್ಲ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸಂಬಂಧ ಇನ್ನೂ ಚರ್ಚೆಯಾಗಿಲ್ಲ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News