ಕರ್ಣವೀರ್ ಕೌಶಲ್ ದ್ವಿಶತಕದ ದಾಖಲೆ

Update: 2018-10-06 18:50 GMT

ನಡಿಯಾಡ್, ಅ.6: ವಿಜಯ್ ಹಝಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ಉತ್ತರಾಖಂಡ ನ ಆರಂಭಿಕ ದಾಂಡಿಗ ಕರ್ಣವೀರ್ ಕೌಶಲ್ ದ್ವಿಶತಕ(202) ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಕೌಶಲ್ ದ್ವಿಶತಕದ ನೆರವಿನಲ್ಲಿ ಉತ್ತರಾಖಂಡ ತಂಡ ಇಲ್ಲಿ ನಡೆದ ಪ್ಲೇಟ್ ಗ್ರೂಪ್ ಪಂದ್ಯದಲ್ಲಿ ಸಿಕ್ಕಿಂ ವಿರುದ್ಧ 199 ರನ್‌ಗಳ ಜಯ ಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಉತ್ತರಾಖಂಡ ತಂಡ ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 366 ರನ್ ಗಳಿಸಿತ್ತು. ಗೆಲುವಿಗೆ 367 ರನ್‌ಗಳ ಸವಾಲನ್ನು ಪಡೆದ ಸಿಕ್ಕಿಂ ತಂಡ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 167 ರನ್ ಗಳಿಸಿತು. ಆರಂಭಿಕ ದಾಂಡಿಗರಾದ ಕರ್ಣವೀರ್ ಕೌಶಲ್ ಮತ್ತು ವಿನೀತ್ ಸಕ್ಸೇನಾ ಮೊದಲ ವಿಕೆಟ್‌ಗೆ 42.2 ಓವರ್‌ಗಳಲ್ಲಿ 296 ರನ್ ಸೇರಿಸಿದರು. ಸಕ್ಸೇನಾ ಶತಕ (133ಎ, 4ಬೌ) ಗಳಿಸಿದ ಬೆನ್ನಲ್ಲೇ ಮನ್‌ದೀಪ್ ಭುಟಿಯಾ ಎಸೆತದಲ್ಲಿ ವಿವೇಕ್ ದಯಾಳಿಗೆ ಕ್ಯಾಚ್ ನೀಡಿದರು. 42.2ನೇ ಓವರ್‌ನಲ್ಲಿ ಉತ್ತರಾಖಂಡ ತಂಡ 1 ವಿಕೆಟ್ ನಷ್ಟದಲ್ಲಿ 296 ರನ್ ಗಳಿಸಿತ್ತು. ಬಳಿಕ ಸೌರಭ್ ಚೌಹಾಣ್, ಕೌಶಲ್‌ಗೆ ಜೊತೆಯಾದರು. ಇವರು ಎರಡನೇ ವಿಕೆಟ್‌ಗೆ 39 ರನ್ ಸೇರಿಸಿದರು. 46.4ನೇ ಓವರ್‌ನಲ್ಲಿ ಕೌಶಲ್ ಅವರು ಮನ್‌ದೀಪ್ ಭುಟಿಯಾ ಎಸೆತದಲ್ಲಿ ಆಶೀಷ್ ಥಾಪಾಗೆ ಕ್ಯಾಚ್ ನೀಡಿದರು. ಆಗ ತಂಡದ ಸ್ಕೋರ್ 2 ವಿಕೆಟ್ ನಷ್ಟದಲ್ಲಿ 335ಕ್ಕೆ ತಲುಪಿತ್ತು. ಕೌಶಲ್ 135 ಎಸೆತಗಳಲ್ಲಿ 18 ಬೌಂಡರಿ ಮತ್ತು 9 ಸಿಕ್ಸರ್‌ಗಳ ನೆರವಿನಿಂದ 202 ರನ್ ಗಳಿಸಿದರು. ಕೌಶಲ್ 38 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಬಳಿಕ 71 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. 101 ಎಸೆತಗಳಲ್ಲಿ 150 ರನ್ ಪೂರೈಸಿದರು. ಬಳಿಕ 31 ಎಸೆತಗಳಲ್ಲಿ ದ್ವಿಶತಕ ತಲುಪಿದರು.

    ವಿಜಯ್ ಹಝಾರೆ ಟ್ರೋಫಿ ಟೂರ್ನಮೆಂಟ್‌ನ ಹಿಂದಿನ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆ 187 ರನ್. ಟೀಮ್ ಇಂಡಿಯಾದ ಉಪನಾಯಕ ಅಜಿಂಕ್ಯ ರಹಾನೆ ಮುಂಬೈ ತಂಡದ ಪರ 2007-08ರಲ್ಲಿ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 187 ರನ್ ದಾಖಲಿಸಿದ್ದರು. ಈ ದಾಖಲೆಯನ್ನು ಕೌಶಲ್ ಮುರಿದಿದ್ದಾರೆ. 27ರ ಹರೆಯದ ಕೌಶಲ್ 7 ಪಂದ್ಯಗಳಲ್ಲಿ 467 ರನ್ ಜಮೆ ಮಾಡಿದ್ದಾರೆ. ಕೊನೆಯಲ್ಲಿ ಸೌರಭ್ ಚೌಹಾಣ್ (ಔಟಾಗದೆ 26) ಮತ್ತು ವಿಜಯ್ ಜೇಥಿ (ಔಟಾಗದೆ 18) ಜೊತೆಯಾಗಿ ತಂಡದ ಸ್ಕೋರ್ 366ಕ್ಕೆ ತಲುಪುವಲ್ಲಿ ನೆರವಾದರು.

ಸಿಕ್ಕಿಂ ತಂಡದ ಮನ್‌ದೀಪ್ ಭುಟಿಯಾ 82ಕ್ಕೆ 2 ವಿಕೆಟ್ ಉಡಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News