ಹಿಮಾಚಲ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಜಯ

Update: 2018-10-06 18:55 GMT

ಬೆಂಗಳೂರು, ಅ.6: ಮಳೆಬಾಧಿತ ವಿಜಯ್ ಹಝಾರೆ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಹಿಮಾಚಲಪ್ರದೇಶ ವಿರುದ್ಧ ವಿಜೆಡಿ ಪದ್ಧತಿಯಂತೆ 35 ರನ್‌ಗಳ ಗೆಲುವು ದಾಖಲಿಸಿದೆ.

  ಶನಿವಾರ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರ ಆರ್.ಸಮರ್ಥ್(98,97 ಎಸೆತ, 11 ಬೌಂಡರಿ) ಆಸರೆಯಾದರು. ಕರ್ನಾಟಕ 55 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಮನೀಷ್ ಪಾಂಡೆ(43) ಅವರೊಂದಿಗೆ 3ನೇ ವಿಕೆಟ್‌ಗೆ 103 ರನ್ ಜೊತೆಯಾಟ ನಡೆಸಿದ ಸಮರ್ಥ್ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. 98 ರನ್‌ಗೆ ರಿಷಿ ಧವನ್‌ಗೆ ರಿಟರ್ನ್ ಕ್ಯಾಚ್ ನೀಡಿ ಔಟಾದ ಸಮರ್ಥ್ ಶತಕದಿಂದ ವಂಚಿತರಾದರು. ಅನಿರುದ್ಧ ಜೋಶಿ(42,31 ಎಸೆತ) ಹಾಗೂ ಶ್ರೇಯಸ್ ಗೋಪಾಲ್(13)ಕರ್ನಾಟಕ 38 ಓವರ್‌ಗಳಲ್ಲಿ 8 ವಿಕೆಟ್‌ಗೆ 257 ರನ್ ಗಳಿಸಲು ನೆರವಾದರು.

ಗೆಲ್ಲಲು 32 ಓವರ್‌ಗಳಲ್ಲಿ 198 ರನ್ ಪರಿಷ್ಕೃತ ಗುರಿ ಪಡೆದ ಹಿಮಾಚಲಪ್ರದೇಶ,ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದಾಗ 20ನೇ ಓವರ್ ಅಂತ್ಯಕ್ಕೆ 121 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ಪಂದ್ಯ ಮತ್ತೆ ಆರಂಭಗೊಂಡಾಗ ಹಿಮಾಚಲಪ್ರದೇಶ ದಾಂಡಿಗರನ್ನು ಕಾಡಿದ ಕರ್ನಾಟಕ 22 ಓವರ್‌ಗಳಲ್ಲಿ 138 ರನ್‌ಗೆ 7 ವಿಕೆಟ್‌ಗಳನ್ನು ಉಡಾಯಿಸಿತು. ಅಂತಿಮವಾಗಿ 25.3 ಓವರ್‌ಗಳಲ್ಲಿ 162 ರನ್‌ಗೆ ಹಿಮಾಚಲ ಪ್ರದೇಶ ಆಲೌಟಾಯಿತು. ಹಿಮಾಚಲದ ಪರ ನಾಯಕ ಪ್ರಶಾಂತ್ ಚೋಪ್ರಾ(67,45 ಎಸೆತ)ಏಕಾಂಗಿ ಹೋರಾಟ ನೀಡಿದರು. ಕರ್ನಾಟಕದ ಕೃಷ್ಣಪ್ಪ ಗೌತಮ್(4-26)ಹಾಗೂ ಪ್ರದೀಪ್ ಟಿ.(4-35)ತಲಾ 4 ವಿಕೆಟ್‌ಗಳನ್ನು ಪಡೆದರು.

ಹೈದರಾಬಾದ್, ಆಂಧ್ರಕ್ಕೆ 1 ವಿಕೆಟ್ ಜಯ

ಇದೇ ವೇಳೆ ವಿಜಯ್ ಹಝಾರೆ  ಟ್ರೋಫಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಹೈದರಾಬಾದ್ ಹಾಗೂ ಆಂಧ್ರ ತಂಡಗಳು ಶನಿವಾರ 1 ವಿಕೆಟ್‌ಗಳ ರೋಚಕ ಜಯ ಸಾಧಿಸಿವೆ.

ಒಡಿಶಾ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 247 ರನ್ ಗಳಿಸಿದರೆ, ಹೈದರಾಬಾದ್ 49.2 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಮತ್ತೊಂದು ಪಂದ್ಯದಲ್ಲಿ ಉತ್ತರಪ್ರದೇಶ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 330 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆಂಧ್ರ 49.3 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 331 ರನ್ ಗಳಿಸಿ ಗೆಲುವಿನ ದಡ ಸೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News