ಜೆಎನ್ ಯು ವಿದ್ಯಾರ್ಥಿ ನಜೀಬ್ ನಾಪತ್ತೆ ಪ್ರಕರಣ: ತನಿಖೆ ಅಂತ್ಯಗೊಳಿಸಲು ಸಿಬಿಐಗೆ ದಿಲ್ಲಿ ಹೈಕೋರ್ಟ್ ಅನುಮತಿ

Update: 2018-10-08 08:27 GMT

ಹೊಸದಿಲ್ಲಿ, ಅ.8: ಅಕ್ಟೋಬರ್ 2016ರಿಂದ ನಿಗೂಢವಾಗಿ ನಾಪತ್ತೆಯಾಗಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ಪ್ರಕರಣದ ತನಿಖೆಯನ್ನು ಅಂತ್ಯಗೊಳಿಸಿ ವರದಿ ಸಲ್ಲಿಸಲು ದಿಲ್ಲಿ ಹೈಕೋರ್ಟ್ ಸಿಬಿಐಗೆ ಸೋಮವಾರ ಅನುಮತಿಸಿದೆ.

ನಜೀಬ್ ತಾಯಿ ಫಾತಿಮಾ ನಫೀಸ್ ಅವರಿಗೆ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ವರದಿ ಕೋರಲು ಹಾಗೂ ಸಿಬಿಐ ಅಂತಿಮ ವರದಿ ಸಲ್ಲಿಸುವ ಸಂದರ್ಭ ತಮ್ಮ ದೂರಗಳೇನಾದರೂ ಇದ್ದರೆ ಸಲ್ಲಿಸಲು ಜಸ್ಟಿಸ್ ಎಸ್. ಮುರಳೀಧರ್ ಹಾಗೂ ಜಸ್ಟಿಸ್ ವಿನೋದ್ ಗೋಯೆಲ್ ಅವರನ್ನೊಳಗೊಂಡ ಪೀಠ ಅನುಮತಿಸಿದೆ.

ಇಪ್ಪತ್ತೇಳು ವರ್ಷದ ನಜೀಬ್ ಜೆಎನ್‍ಯುವಿನ ಮಾಹಿ-ಮಂಡ್ವಿ ಹಾಸ್ಟೆಲ್ ನಿಂದ ಅಕ್ಟೋಬರ್ 15, 2016ರಂದು ನಾಪತ್ತೆಯಾಗಿದ್ದರು. ನಾಪತ್ತೆಯಾದ ಹಿಂದಿನ ರಾತ್ರಿ ಎಬಿವಿಪಿ ಜತೆ ನಂಟು ಹೊಂದಿದ್ದ ಕೆಲ ವಿದ್ಯಾರ್ಥಿಗಳಿಗೂ ನಜೀಬ್ ರಿಗೂ ಜಗಳವಾಗಿತ್ತೆನ್ನಲಾಗಿದೆ. ಈ ಪ್ರಕರಣದ ತನಿಖೆಯನ್ನು ಸೆಕ್ಷನ್ 169 (ಸಾಕ್ಷ್ಯಗಳ ಕೊರತೆಯಿರುವ ಸಂದರ್ಭ ಆರೋಪಿಗಳ ಬಿಡುಗಡೆ) ಅನ್ವಯ ಅಂತ್ಯಗೊಳಿಸುವ ತನ್ನ ನಿರ್ಧಾರವನ್ನು ಸಿಬಿಐ  ಹೈಕೋರ್ಟ್ ಪೀಠದ ಮುಂದೆ ಹೇಳಿಕೊಂಡ ಒಂದು ತಿಂಗಳ ನಂತರ ಈ ತೀರ್ಪು ಬಂದಿದೆ.

ಆರೋಪಿಗಳ ವಿಚಾರಣೆ ನಡೆಸದೆ ಸಿಬಿಐ ಅವರನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ಆಗ ನಜೀಬ್ ತಾಯಿಯ ವಕೀಲ ಕೋಲಿನ್ ಗೊನ್ಸಾಲ್ವಿಸ್ ನ್ಯಾಯಾಲಯದೆದುರು ವಾದಿಸಿದ್ದರು. “ಸಿಬಿಐ ಒತ್ತಡಕ್ಕೆ ಮಣಿದಿದೆ. ನಿಷ್ಪಕ್ಷಪಾತ ತನಿಖೆ ನಡೆಸಲು ವಿಫಲವಾಗಿದೆ, ಆರೋಪಿಗಳು ಕಸ್ಟಡಿಯಲ್ಲಿರುವಾಗ ವಿಚಾರಣೆಯೇಕೆ ನಡೆಸಿಲ್ಲ?” ಎಂದು ಅವರು ಆಗ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News