ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಶಿಕ್ಷಣ ಇಲಾಖೆ ಮುಂದಾಗಬೇಕು: ಶಾಸಕ ಎಸ್.ಟಿ.ಸೋಮಶೇಖರ್

Update: 2018-10-08 14:09 GMT

ಬೆಂಗಳೂರು, ಅ.8: ಸರಕಾರಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಶಿಕ್ಷಕ ವೃಂದ ಹಾಗೂ ಶಿಕ್ಷಣ ಇಲಾಖೆ ಮುಂದಾಗಬೇಕೆಂದು ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಸೋಮವಾರ ರಾಮೋಹಳ್ಳಿ ಸರಕಾರಿ ಪಾಠಶಾಲೆ ಹಾಗೂ ಗಂಗಾಧರೇಶ್ವರ ಪ್ರೌಢಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿ ಮಾತನಾಡಿದ ಅವರು, ಬಡವರು ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚಾಗಿ ಸರಕಾರಿ ಶಾಲೆಗಳಲ್ಲಿ ಓದುತ್ತಿರುವುದರಿಂದ ಸರಕಾರಿ ಶಾಲೆಗಳಿಗೆ ಎಲ್ಲ ಸವಲತ್ತುಗಳನ್ನು ನೀಡುವಂತೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ತಮ ಸೌಲಭ್ಯಗಳನ್ನು ನೀಡಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಾಣ ಮಾಡಿ ತರಬೇತಿ ನೀಡಿದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಹೈಜಂಪ್ ಕ್ರೀಡೆಯಲ್ಲಿ 2ನೆ ಸ್ಥಾನ ಹಾಗೂ ಡಿಸ್ಕಸ್ ಥ್ರೋ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ರಾಮೋಹಳ್ಳಿ ಸರಕಾರಿ ಶಾಲೆಯ 7ನೆ ತರಗತಿ ವಿದ್ಯಾರ್ಥಿ ಆಕಾಶ್‌ಗೆ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ವೇಣುಗೋಪಾಲ್ ಮಾತನಾಡಿ, ರೈತಾಪಿ ಮಕ್ಕಳು, ಬಡವರ ಮಕ್ಕಳು ಸರಕಾರಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅವರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಲು ಪ್ರಯತ್ನ ನಡೆಸಬೇಕಾಗಿದೆ ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ವೇಣುಗೋಪಾಲ್, ಉಪಾಧ್ಯಕ್ಷ ಪ್ರಭು, ಮಾಜಿ ಅಧ್ಯಕ್ಷರಾದ ಪಿ.ವೆಂಕಟೇಶ್, ಹನುಮಂತಯ್ಯ, ಉದ್ಯಮಿ ರಾಕೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News