ಸರ್ವೋಚ್ಚ ನ್ಯಾಯಾಲಯದ ಲೈಂಗಿಕತೆಯ ಬಗೆಗಿನ ತೀರ್ಪು: ಹಾದಿ ತಪ್ಪುತ್ತಿರುವ ಚರ್ಚೆಗಳು

Update: 2018-10-08 18:31 GMT

ಲೈಂಗಿಕತೆ ವ್ಯವಹಾರವೆಂಬ ಒಪ್ಪಿತ ಮೌಲ್ಯವಾಗುವುದು ಕಾರ್ಪೊರೇಟ್ ಶಕ್ತಿಗಳಿಗೆ ಅಗತ್ಯ ಮತ್ತು ಅನುಕೂಲ ವಿಚಾರ. ವ್ಯವಹಾರದಲ್ಲಿ ಆ ವ್ಯವಹಾರ ಮುಗಿಯುವವರೆಗೆ ಮಾತ್ರ ಬದ್ಧತೆ ಇರುತ್ತದೆ. ನಂತರ ಪರಸ್ಪರ ಸಂಬಂಧವೇ ಇರುವುದಿಲ್ಲ. ಆದರೆ ಲೈಂಗಿಕತೆ ವ್ಯವಹಾರವಲ್ಲ. ಅದು ಜೀವಂತಿಕೆಯ ಮನುಷ್ಯ ಸಂಬಂಧ. ಅಲ್ಲಿ ಪ್ರೀತಿ, ಕಾಳಜಿ, ಪರಸ್ಪರ ಗೌರವ, ಅರಿತುಕೊಳ್ಳುವಿಕೆ, ಸಹಾಯ, ಸಹಕಾರ, ಇದ್ದಾಗ ಮಾತ್ರ ಗಂಡು ಹೆಣ್ಣುಗಳಲ್ಲಿ ಸಮಾಧಾನ, ನೆಮ್ಮದಿ ನೆಲೆ ನಿಲ್ಲಲು ಸಾಧ್ಯ.


ಗಂಡು ಹೆಣ್ಣಿನ ಒಪ್ಪಿತ ಸಂಬಂಧ ಅಪರಾಧವಾಗಬಾರದು ಅದು ಸರಿ. ಹೆಂಡತಿಯನ್ನು ಗಂಡಿನ ಆಸ್ತಿಯೆಂದು ಪರಿಗಣಿಸಬಾರದು. ಅದೂ ಕೂಡ ಸರಿ. ನಿರ್ಬಂಧ ಹೇರಿ ಒಟ್ಟಿಗೆ ಇರುವಂತೆ ಮಾಡಬಾರದು. ಹೌದು. ಲೈಂಗಿಕ ಆಯ್ಕೆಯ ಸ್ವಾತಂತ್ರ್ಯ ಇರಬೇಕು. ಲೈಂಗಿಕತೆ ವ್ಯಕ್ತಿಗಳ ಖಾಸಗಿ ವಿಚಾರ. ಅದನ್ನು ಅಪರಾಧವೆಂದು ಪರಿಗಣಿಸಬಾರದು. ಇವೆಲ್ಲವೂ ಸಮಾನತೆ ಹಾಗೂ ಪ್ರಜಾತಾಂತ್ರಿಕ ನೆಲೆಗಟ್ಟಿನಲ್ಲಿ ಇರಬೇಕಾದ ಮೌಲ್ಯಗಳೇ ಆಗಿವೆ. ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅದು ನ್ಯಾಯಾಲಯದ ಕಟ್ಟೆಯೇರಿದ ಹಿನ್ನೆಲೆ ಮತ್ತು ಈಗಿನ ಸಂದರ್ಭದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಾಗುತ್ತದೆ.

 ನೈತಿಕ ಅನೈತಿಕ ಎನ್ನುವುದು ಆಳುವ ಪ್ರಭಾವಿ ಶಕ್ತಿಗಳ ಅನುಕೂಲಿತ ಮೌಲ್ಯಗಳ ಮಾನದಂಡಗಳಲ್ಲಿ ಅಳೆಯುವುದು ಅಸಮಾನ ಅಪ್ರಜಾತಾಂತ್ರಿಕ (ಅಂದರೆ ಪ್ರಜಾತಾಂತ್ರಿಕ ಮೌಲ್ಯಗಳು ಸಮಾಜದ ದೈನಂದಿನ ಜೀವನದಲ್ಲಿ ಅಳವಡಿಕೆಯಾಗದೇ ಇರುವ) ಸಮಾಜದಲ್ಲಿ ಮಾಮೂಲಿ ವಿಚಾರ. ನೈತಿಕತೆಯ ಪ್ರಶ್ನೆ ಹೇರಲ್ಪಟ್ಟ ಒಮ್ಮುಖ ಮೌಲ್ಯಗಳಿಗೆ ಹೋಲಿಸಿ ಹೇಳಲಾಗುತ್ತದೆ. ಆದರೆ ಅದೇ ಮೌಲ್ಯಗಳನ್ನು ಅವರು ಯಾರೂ ತಮ್ಮ ವೈಯಕ್ತಿಕ ಜೀವನದಲ್ಲಿ ಪಾಲಿಸುತ್ತಾರೋ ಎಂದರೆ ಇಲ್ಲ ಎನ್ನುವುದು ಎದ್ದು ಕಾಣುತ್ತಿರುತ್ತದೆ. ಬಹಿರಂಗವಾಗಿ ಮಾತ್ರ ಇದು ಒಪ್ಪಿತ. ಖಾಸಗಿಯಾಗಿ ಒಪ್ಪುವ ಪ್ರಶ್ನೆಯೇ ಇಲ್ಲ. ಆದರೆ ಹೆಣ್ಣಿಗೆ ಮಾತ್ರ ಬಹಿರಂಗವಾಗಿಯೂ ಖಾಸಗಿಯಾಗಿಯೂ ಎಲ್ಲಾ ವಿಚಾರಗಳಂತೆ ಈ ವಿಚಾರಗಳಲ್ಲೂ ಭಾರೀ ಹೇರಿಕೆ ನಮ್ಮ ಸಮಾಜದಲ್ಲಿ ಇದ್ದೇ ಇರುತ್ತದೆ. ಲೈಂಗಿಕತೆಯೇ ಬೇರೆ, ಪ್ರೀತಿಯೇ ಬೇರೆ, ಗಂಡ ಹೆಂಡತಿ ಸಂಬಂಧಗಳೇ ಬೇರೆ, ಕುಟುಂಬವೇ ಬೇರೆ ಎಂದೆಲ್ಲಾ ಚರ್ಚೆಗಳು ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಹಲವೆಡೆಗಳಲ್ಲಿ ನಡೆಯುತ್ತಿವೆ. ‘‘ಗಂಡ ಹೆಂಡಿರ ನಡುವೆ ಲೈಂಗಿಕ ತೃಪ್ತಿ ಸಿಗದೇ ಇದ್ದರೇ ಅಂತಹವರು ಬೇರೆಯವರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ ಅದಕ್ಕೆ ಯಾರ ಅನುಮತಿ ಬೇಕಾಗಿಲ್ಲ.’’

‘‘ಮದುವೆ ಸಂಬಂಧಗಳಲ್ಲಿ ಇದ್ದುಕೊಂಡೂ ಇತರ ವ್ಯಕ್ತಿಗಳೊಂದಿಗೆ ಮಹಿಳೆ ಮತ್ತು ಪುರುಷರು ಲೈಂಗಿಕ ಸಂಬಂಧ ಇಟ್ಟುಕೊಳ್ಳುವುದು ತಪ್ಪಲ್ಲ.’’ ಇತ್ಯಾದಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿದಾಗ ಹಲವು ತಪ್ಪುಗ್ರಹಿಕೆಗಳಿಗೆ ಈಡಾಗುತ್ತಿರುವ ಅಪಾಯಗಳು ಕಾಣುತ್ತಿವೆ.. ಮಾರುಕಟ್ಟೆ ಶಕ್ತಿಗಳೂ ಸೇರಿದಂತೆ ಆಳುವಂತಹ ಶಕ್ತಿಗಳಿಗೆ ಹಾಗೂ ಪುರುಷಾಧಿಪತ್ಯ ವ್ಯವಸ್ಥೆಗೆ ಪೂರಕವಾಗಿರುವಂತಹ ಅಭಿಪ್ರಾಯಗಳೂ ಕೂಡ ಹರಿದಾಡುತ್ತಿವೆ. ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವ ಭರದಲ್ಲಿ ಪ್ರೀತಿ, ಕಾಳಜಿ, ವಿಶ್ವಾಸ, ಪರಸ್ಪರ ಬದ್ಧತೆ ಮೊದಲಾದ ಮನುಷ್ಯ ಮೌಲ್ಯಗಳನ್ನು ಗಾಳಿಗೆ ತೂರುವಂತಹ ರೀತಿಯ ಚರ್ಚೆಗಳು ನಡೆಯುತ್ತಿವೆ. ಪುರುಷಾಧಿಪತ್ಯವನ್ನು ಆವಾಹಿಸಿಕೊಂಡವರು ಅಷ್ಟೇ ಕೆಟ್ಟ ರೀತಿಗಳಲ್ಲಿ ತೀರ್ಪಿನ ಬಗ್ಗೆ ಅಪಪ್ರಚಾರಗಳನ್ನು ನಡೆಸುತ್ತಿದ್ದಾರೆ.

ಆದರೆ ಗಂಡು ಹೆಣ್ಣಿನ ನಡುವೆ ಪ್ರೀತಿಯಿಲ್ಲದ, ಬದ್ಧತೆಯಿಲ್ಲದ ಲೈಂಗಿಕ ಸಂಬಂಧವಿದ್ದರೆ ಅದು ಲೈಂಗಿಕತೆ ಎನ್ನುವ ಮನುಷ್ಯ ಸಂಬಂಧವನ್ನು ವ್ಯವಹಾರದ ಮಟ್ಟಕ್ಕೆ ಇಳಿದುಬಿಡುತ್ತದೆ. ಲೈಂಗಿಕತೆ ವ್ಯವಹಾರವೆಂಬ ಒಪ್ಪಿತ ಮೌಲ್ಯವಾಗುವುದು ಕಾರ್ಪೊರೇಟ್ ಶಕ್ತಿಗಳಿಗೆ ಅಗತ್ಯ ಮತ್ತು ಅನುಕೂಲ ವಿಚಾರ. ವ್ಯವಹಾರದಲ್ಲಿ ಆ ವ್ಯವಹಾರ ಮುಗಿಯುವವರೆಗೆ ಮಾತ್ರ ಬದ್ಧತೆ ಇರುತ್ತದೆ. ನಂತರ ಪರಸ್ಪರ ಸಂಬಂಧವೇ ಇರುವುದಿಲ್ಲ. ಆದರೆ ಲೈಂಗಿಕತೆ ವ್ಯವಹಾರವಲ್ಲ. ಅದು ಜೀವಂತಿಕೆಯ ಮನುಷ್ಯ ಸಂಬಂಧ. ಅಲ್ಲಿ ಪ್ರೀತಿ, ಕಾಳಜಿ, ಪರಸ್ಪರ ಗೌರವ, ಅರಿತುಕೊಳ್ಳುವಿಕೆ, ಸಹಾಯ, ಸಹಕಾರ, ಇದ್ದಾಗ ಮಾತ್ರ ಗಂಡು ಹೆಣ್ಣುಗಳಲ್ಲಿ ಸಮಾಧಾನ, ನೆಮ್ಮದಿ ನೆಲೆ ನಿಲ್ಲಲು ಸಾಧ್ಯ.

ಮದುವೇನೇ ಬೇರೆ, ಲೈಂಗಿಕತೇನೆ ಬೇರೆ, ಗಂಡ ಹೆಂಡತೀನೆ ಬೇರೆ ಅಂತೆಲ್ಲಾ ಹೋದರೆ ಅದು ವ್ಯಕ್ತಿಜೀವನದಲ್ಲಿ ಅರಾಜಕತೆ ಮಾತ್ರ ಸೃಷ್ಟಿಸಬಹುದೇ ಹೊರತು ಬೇರೇ ಯಾವುದೇ ಒಳಿತನ್ನೂ ಮಾಡುವುದಿಲ್ಲ. ಚಿಂತನೆಗಳಲ್ಲೂ ಇದು ಅಗಾಧವಾದ ಕೆಟ್ಟ ಪರಿಣಾಮ ಬೀರುತ್ತವೆ. ಅದನ್ನು ನಾವು ನಮ್ಮ ಸಮಾಜದಲ್ಲಿ ನೋಡುತ್ತಿದ್ದೇವೆ. ಹಾಗಂತ ಈಗ ಸಮಾಜದಲ್ಲಿ ನಡೆಯುತ್ತಿರುವ ಮದುವೆಗಳು ಸರಿಯಾದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತಿವೆ ಎಂದು ನನ್ನ ಅಭಿಪ್ರಾಯವಲ್ಲ. ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ಮದುವೆಗಳು ಸೋಗಲಾಡಿತನ, ಢಾಂಬಿಕತೆ, ಒಣ ಪ್ರದರ್ಶನ, ಮೂಢ ನಂಬಿಕೆ, ಅಸಮಾನತೆ, ಹೆಣ್ಣಿನ ಶೋಷಣೆ, ವ್ಯಾವಹಾರಿಕ ಇತ್ಯಾದಿಗಳಿಂದ ಕುಸಿದು ಹೋಗುತ್ತಿವೆಯೆನ್ನುವುದು ನಿಜ. ಆದರೆ ಅದಕ್ಕೆ ಈಗ ನಡೆಯುತ್ತಿರುವ ಚರ್ಚೆಗಳು, ಮುಂದಿಡುತ್ತಿರುವ ವಿಚಾರಗಳು ಪರಿಹಾರವಾಗುವುದಿಲ್ಲ. ಬದಲಿಗೆ ಗಂಡು ಹೆಣ್ಣಿನ ನಡುವಿರುವ ವೈವಾಹಿಕ ಮತ್ತು ಲೈಂಗಿಕ ಸಮಸ್ಯೆಗಳನ್ನು ಮತ್ತಷ್ಟು ಬಿಗಡಾಯಿಸಿ ಬಿಡುತ್ತದೆ.

ಪ್ರೀತಿ ಮತ್ತು ಲೈಂಗಿಕತೆ ಪರಸ್ಪರ ಪೂರಕ ವಿಚಾರ. ಆದರೆ ನಮ್ಮ ಸಮಾಜದಲ್ಲಿ ವಿಚಿತ್ರ ತೋರುಗಾಣಿಕೆಯ ಮಡಿವಂತಿಕೆಯಿದೆ. ಆದರೆ ಆಚರಣೆಯ ವಿಚಾರಕ್ಕೆ ಬಂದರೆ ವಿಷಯ ಬೇರೇಯೇ ಇದೆ. ಗುಟ್ಟಿನಲ್ಲಿಯಾದರೆ ಜಾತಿ ಮಡಿವಂತಿಕೆಯಾಗಲೀ ಲೈಂಗಿಕ ಮಡಿವಂತಿಕೆಯಾಗಲೀ ಈ ವಿಚಾರದಲ್ಲಿ ಕಾಣಿಸುವುದಿಲ್ಲ. ಗುಟ್ಟಿನ ಲೈಂಗಿಕತೆಯಲ್ಲಿ ಜಾತಿ ಅಂತಸ್ತು ಅಡ್ಡಿಯೇ ಅಲ್ಲ. ಆದರೆ ಬಹಿರಂಗವಾಗಿ ಅಂತರ್ಜಾತಿ ಹೆಣ್ಣು ಗಂಡುಗಳು ಪ್ರೀತಿಸುವುದು ಮದುವೆಯಾಗುವುದು ಮಾಡಕೂಡದು. ಇದು ಸಮಾಜದಲ್ಲಿ ಎದ್ದು ಕಾಣುವ ಅಸಹ್ಯ ಸೋಗಲಾಡಿತನ.

ನಮ್ಮ ಸಮಾಜದಲ್ಲಿ ಪ್ರೀತಿ ಹಾಗೂ ಲೈಂಗಿಕತೆ ಬಗ್ಗೆ ಸರಿಯಾದ ಮನುಷ್ಯ ಮೌಲ್ಯಗಳಿಂದ ಕೂಡಿದ ತಿಳುವಳಿಕೆ ಕಡಿಮೆ. ಇಂತಹ ಬದುಕಿನ ಗಹನವಾದ ವಿಚಾರಗಳಲ್ಲಿ ಪ್ರಜ್ಞೆಯ ಕೊರತೆಯಿಂದಾಗಿ ಎಡವಟ್ಟು ತಿಳುವಳಿಕೆಗಳೇ ಜಾಸ್ತಿ ಚಾಲ್ತಿಯಲ್ಲಿವೆ. ಇದಕ್ಕೆ ನಮ್ಮ ಸಾಮಾಜಿಕ ಸಂದರ್ಭ ಪ್ರಧಾನ ಕಾರಣವಾದರೂ ಅದನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಿ, ಸಮಾನತೆ ಮತ್ತು ಪ್ರಜಾತಾಂತ್ರಿಕ ಪ್ರಜ್ಞೆಯ ಮೂಲಕ ಅರ್ಥೈಸಬೇಕಾಗಿದೆ. ಗಂಡು ಹೆಣ್ಣಿನ ಸಂಬಂಧಗಳು ಪ್ರಜಾತಾಂತ್ರಿಕ ನೆಲೆಗಟ್ಟಿನಲ್ಲಿ ಕಟ್ಟಿಬೆಳೆಸುವುದು ಪ್ರೀತಿ ಹಾಗೂ ಲೈಂಗಿಕತೆಗಳ ಉಳಿವು ಬೆಳವಣಿಗೆಗಳನ್ನು ನಿರ್ಧರಿಸುತ್ತದೆ. ಅದು ಬದುಕಿನ ಜೀವಂತಿಕೆಯ ಉಳಿವು ಹಾಗೂ ಬೆಳವಣಿಗೆಯ ವಿಚಾರವಾಗಿದೆ.

ಪರಸ್ಪರ ಪ್ರೀತಿಯಿದ್ದಲ್ಲಿ ಪ್ರಜಾತಾಂತ್ರಿಕ ಸಂಬಂಧ ರೂಢಿಸಿಕೊಂಡಲ್ಲಿ ಪ್ರೀತಿ ಹಾಗೂ ಲೈಂಗಿಕತೆಯಲ್ಲಿ ಕೊರತೆ ಕಾಣಿಸುವುದಿಲ್ಲ. ಪ್ರೀತಿ ಲೈಂಗಿಕತೆಗಳು ಜೈವಿಕಕ್ಕಿಂತಲೂ ಮಾನಸಿಕತೆಯ ವಿಚಾರವಾಗಿದೆ. ಭಾವನೆಗಳೇ ಅಲ್ಲಿ ಪ್ರಮುಖವಾಗಿರುತ್ತದೆ. ಪ್ರೀತಿ ಭಾವನೆಗಳಿಲ್ಲದ ಲೈಂಗಿಕತೆ ನೆಲೆ ನಿಲ್ಲಲು ಸಾಧ್ಯವಿಲ್ಲ. ಲೈಂಗಿಕತೆಗಾಗಿ ಮಾತ್ರ ಲೈಂಗಿಕತೆ ಎಂದು ಗ್ರಹಿಸಿ ಆ ರೀತಿ ಜೀವಿಸಹೊರಟರೆ ಅಲ್ಲಿ ಜೀವನವಾಗಲೀ, ಬಾಂಧವ್ಯವಾಗಲೀ ಇರದ ಯಾಂತ್ರಿಕ ಜೈವಿಕ ವ್ಯವಹಾರದ ಮಟ್ಟಕ್ಕೆ ಕುಸಿದು, ಜೀವಂತಿಕೆ ಇಲ್ಲದ, ಕ್ರಮೇಣ ಸ್ವಯಂ ಹೇಸಿಗೆ ಪಟ್ಟುಕೊಳ್ಳುವ, ಇಲ್ಲವೇ ಸ್ವಯಂ ಅಸಮಾಧಾನ ಪಡುವ, ಮಾನಸಿಕ ಅಸ್ವಸ್ಥತೆಗೆ ಗುರಿಯಾಗುವ ಸಾಧ್ಯತೆಗಳೇ ಹೆಚ್ಚು. ಲೈಂಗಿಕತೆಯನ್ನು ಕೇವಲ ದೇಹದ ವ್ಯವಹಾರವಾಗಿ ಕಂಡಾಗ ಅಂತಹವರು ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಅರಾಜಕತೆ ಅವರನ್ನು ಮುಳುಗಿಸಿಬಿಡುತ್ತದೆ. ಪ್ರೀತಿ ಲೈಂಗಿಕತೆಯನ್ನು ಆರೋಗ್ಯಕರ ಮಾನವೀಯ ಸಂಬಂಧವಾಗಿ ಗ್ರಹಿಸದೆ, ಮದುವೆ ಒಂದು ಕಡೆ, ಲೈಂಗಿಕತೆ ಮತ್ತೊಂದು ಕಡೆ, ಪ್ರೀತಿ ಇನ್ನೊಂದು ಕಡೆ ಎಂಬೆಲ್ಲಾ ವಾದಗಳನ್ನು ಅಳವಡಿಸಿಕೊಳ್ಳಲು ಹೋದರೆ ಅಪಾಯಕಾರಿಯಾಗುತ್ತದೆ. ಅದು ಬದುಕನ್ನು ಸರಿಯಾದ ನೆಲೆಯಲ್ಲಿ ಕಟ್ಟಿ ಬೆಳೆಸುವ ಬದಲು ಬದುಕಿನಲ್ಲಿ ಅರಾಜಕತೆ ಸೃಷ್ಟಿಸುತ್ತದೆ.

ಇಲ್ಲಿ ಗಂಡು ಹೆಣ್ಣು ಸಂಬಂಧಗಳು ನಿರ್ಬಂಧಿತ ಇಲ್ಲವೇ ಒತ್ತಾಯದ ಸಂಬಂಧವಾಗಿರಬಾರದು ಎನ್ನುವುದು ಬಹಳ ಮುಖ್ಯವಿಚಾರವಾಗಬೇಕು. ಅದು ಪರಸ್ಪರ ಪ್ರೀತಿ ಮತ್ತು ಬದ್ಧತೆಯ ಸಂಬಂಧವಾಗಿ ಪ್ರಜಾತಾಂತ್ರಿಕ ಚೌಕಟ್ಟಿನಲ್ಲಿ ಕಟ್ಟಿ ಬೆಳೆಸಬೇಕಾದ ಜವಾಬ್ದಾರಿಯುತ ವಿಚಾರ ಅಂತ ಗಂಡು ಹೆಣ್ಣು ಅರಿತುಕೊಂಡರೆ ಎಲ್ಲವೂ ಸುಸೂತ್ರವಾಗಿರುತ್ತದೆ. ಅದಿಲ್ಲದಿದ್ದಾಗ ಮಾತ್ರ ಎಲ್ಲವೂ ಸಮಸ್ಯೆಗಳಾಗಿ ಮಾರ್ಪಡುತ್ತದೆ. ಗಂಡು ಹೆಣ್ಣಿನ ನಡುವೆ ಪ್ರೀತಿ, ಮದುವೆ, ಕುಟುಂಬ ಕೇವಲ ರೋಚಕತೆ, ರಮ್ಯತೆ ಇಲ್ಲವೇ ಲೈಂಗಿಕತೆಗಾಗಿ ಎಂದು ಪರಿಭಾವಿಸದೇ ಅದು ಜೀವನ ಕಟ್ಟಿ ಬೆಳೆಸುವ ಮುಖ್ಯ ಜವಾಬ್ದಾರಿಗಳಲ್ಲಿನ ಭಾಗವೆಂದು ಗಂಡು ಹೆಣ್ಣು ಗ್ರಹಿಸಬೇಕು. ಪ್ರೀತಿಯನ್ನು ಸಿದ್ಧಪಡಿಸಿ ಬಳಸಲು ಸಾಧ್ಯವಿಲ್ಲ. ಸಿದ್ಧಪಡಿಸಿ ಕೊಡಲೂ ಸಾಧ್ಯವಿಲ್ಲ. ಅದು ಬದುಕಿನಲ್ಲಿ ನಿರಂತರ ಕಟ್ಟುವಿಕೆಯಾಗಬೇಕು. ಅದಕ್ಕೆ ಕೊನೆಯಿಲ್ಲ. ಸಾಯುವವರೆಗೂ ಕಟ್ಟುವಿಕೆಯನ್ನು ಅದು ಬಯಸುತ್ತದೆ. ಹಾಗೆಯೇ ಜೀವಂತಿಕೆಯ ಜೀವನ ಕೂಡ. ಪ್ರೀತಿ, ಲೈಂಗಿಕತೆ, ಸಂಸಾರ, ಕುಟುಂಬಗಳನ್ನು ನಾವು ಸರಿಯಾಗಿ ಗ್ರಹಿಸದೆ ಹೋದರೆ ಬಾಳು ಪೂರ್ಣ ನಾಶವಾಗುತ್ತದೆ. ಈ ಗ್ರಹಿಕೆಯನ್ನು ನಮ್ಮ ಸಮಾಜದಲ್ಲಿ ಕಾಣಲು ಕಷ್ಟ.

ಬಹುತೇಕ ತಂದೆತಾಯಿಗಳಲ್ಲೂ ಕಾಣಲು ಕಷ್ಟ. ಅದಕ್ಕೆ ನಮ್ಮ ಸಾಮಾಜಿಕ ಸಂದರ್ಭ ಪ್ರಧಾನ ಕಾರಣ. ಇವೆಲ್ಲದರ ಸರಿಯಾದ ವಿಶ್ಲೇಷಣೆ ಮಾಡಿಕೊಳ್ಳುವ ಅಗತ್ಯವಿದೆ. ಅದು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪದಶಃ ಅರ್ಥಗಳಲ್ಲಿ ಗ್ರಹಿಸುವುದರಿಂದ ಸಾಧ್ಯವಾಗುವುದಿಲ್ಲ. ಅಲ್ಲಿ ತನ್ನ ಕಟ್ಟೆ ಏರಿದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಲಾಗಿದೆಯೇ ಹೊರತು ಅದು ಗಂಡು ಹೆಣ್ಣಿನ ಸಂಬಂಧಗಳ ಎಲ್ಲಾ ಆಯಾಮಗಳಿಗೆ ಸಂಬಂಧಪಟ್ಟಂತೆ ಅಲ್ಲ. ಆ ತೀರ್ಪು ಆ ಮಟ್ಟದಲ್ಲಿ ಮಾತ್ರ ಗ್ರಹಿಸಬೇಕು. ಹೆಂಡತಿ ಗಂಡಿನ ಆಸ್ತಿ ರೀತಿ ಪರಿಭಾವಿಸುವುದು, ಒಪ್ಪಿತ ಲೈಂಗಿಕ ಸಂಬಂಧಗಳು ಅಪರಾಧವೆಂದು ಪರಿಗಣಿಸುವುದು ಪ್ರಜಾತಾಂತ್ರಿಕವಲ್ಲ. ಅದು ಸರಿ. ನಿರ್ಬಂಧಿತವಾಗಿ ಒಟ್ಟಿಗೆ ಇರಬೇಕೆನ್ನುವ ಸಮಾಜದ ಮನೋಭಾವ ಕೂಡ ಪ್ರಜಾತಾಂತ್ರಿಕವಲ್ಲ. ಏನೇ ಇದ್ದರೂ, ಎಷ್ಟೇ ಕಷ್ಟ ಆದರೂ ಒಟ್ಟಿಗೇ ಇರಬೇಕೆನ್ನುವ ಹಳೇ ಊಳಿಗಮಾನ್ಯ ಹೇರಿಕೆಯೂ ಜನವಿರೋಧಿಯಾದುದೇ ಆಗಿದೆ.

ಅದೆಲ್ಲವನ್ನೂ ವಿರೋಧಿಸುವ ಅದೇ ವೇಳೆಯಲ್ಲಿ ಗಂಡು ಹೆಣ್ಣಿನ ನಡುವಿನ ವೈವಾಹಿಕ ಸಂಬಂಧ ಪ್ರಜಾತಂತ್ರೀಕರಣ ಮಾಡಬೇಕಾದ ಬಗ್ಗೇನೂ ಅದಕ್ಕಿಂತಲೂ ಹೆಚ್ಚು ಗಂಭೀರತೆಯಿಂದ ಚಿಂತಿಸಬೇಕಾಗಿದೆ. ಅದಕ್ಕೆ ಹೆಣ್ಣುಗಂಡುಗಳ ಸಾಮೂಹಿಕ ಸಂಘಟಿತ ಪ್ರಯತ್ನ ಅತ್ಯಗತ್ಯ.. ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವ ಅದೇ ವೇಳೆಯಲ್ಲಿ ಬ್ರಿಟಿಷರು ಹೋಗಿ ಸಂವಿಧಾನ ಅಂಗೀಕಾರವಾಗಿ ಎಪ್ಪತ್ತಕೂ ಹೆಚ್ಚು ವರ್ಷಗಳ ಕಾಲ ಇಂತಹ ಮನುಷ್ಯ ವಿರೋಧಿ ಹಾಗೂ ಸಂವಿಧಾನ ವಿರೋಧಿ ಕಾನೂನು ಕಟ್ಟಳೆಗಳು ಯಾಕೆ ಅಸ್ತಿತ್ವದಲ್ಲಿತ್ತು. ಅದರ ಹಿಂದಿನ ಕಾರಣಗಳೇನು. ಈಗ ಯಾಕೆ ಇದು ಸಂವಿಧಾನ ವಿರೋಧಿ ಅಂತ ತೀರ್ಪು ಬಂದಿದೆ ಅನ್ನುವ ವಿಚಾರಗಳ ಮೇಲೆ ಚರ್ಚೆ ನಡೆಯುವ ಅವಶ್ಯಕತೆ ಇದೆ.

 ಕುಟುಂಬ ಅನ್ನೋ ಸಮಾಜದ ಮುಖ್ಯ ಘಟಕವನ್ನು ಸಮಾನತೆಯ ನೆಲೆಗಟ್ಟಿನಲ್ಲಿ ಪ್ರಜಾತಂತ್ರೀಕರಿಸುವ ಬಗ್ಗೆ ನೋಡದೇ ತೀರ್ಪನ್ನು ಪದಶಃ ಅರ್ಥಗಳಲ್ಲಿ ಪರಿಭಾವಿಸಿ ನೋಡುವುದು ಮತ್ತೂ ಅಪಾಯಕಾರಿಯಾಗುವ ಸಂಭವವೇ ಹೆಚ್ಚು.

ಈ ನಿಟ್ಟಿನಲ್ಲಿ ಚರ್ಚೆಗಳು ಹೆಚ್ಚು ಹೆಚ್ಚು ನಡೆಯಲಿ. ಚಿಂತನ ಮಂಥನಗಳು ನಡೆಯಲಿ. ಗಂಡು ಹೆಣ್ಣಿನ ಸಂಬಂಧ ಹೆಚ್ಚು ಹೆಚ್ಚು ಪ್ರಜಾತಾಂತ್ರೀಕರಣಗೊಳ್ಳುತ್ತಾ ಸಾಗಲಿ. ಜಾತಿ ಮತ ಭೇದವಿಲ್ಲದ ಪ್ರೀತಿಯ ಸಂಬಂಧಗಳು ಬೆಳೆಯುತ್ತಾ, ಗಟ್ಟಿಗೊಳ್ಳುತ್ತಾ ಸಾಗಲಿ. ಇದು ಯುವ ಜನರ ಪ್ರಜ್ಞಾಪೂರ್ವಕ ಪ್ರಯತ್ನದಿಂದ ಮಾತ್ರ ಕೈಗೂಡುವ ವಿಚಾರ.

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News