ತೆಲಂಗಾಣ: ಟಿಆರ್‌ಎಸ್ ಮಣಿಸಲು ಮಹಾಮೈತ್ರಿ

Update: 2018-10-09 03:57 GMT

ಹೊಸದಿಲ್ಲಿ, ಅ.9: ಡಿಸೆಂಬರ್ 7ರಂದು ಮತದಾನ ನಡೆಯುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿಯನ್ನು ಮಣಿಸಲು ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್, ತೆಲುಗುದೇಶಂ, ಸಿಪಿಐ ಹಾಗೂ ಹೊಸದಾಗಿ ರೂಪುಗೊಂಡಿರುವ ತೆಲಂಗಾಣ ಜನಸಮಿತಿ ಪಾರ್ಟಿ "ಮಹಾಕೂಟಮಿ" (ಮಹಾಮೈತ್ರಿ) ರಚಿಸಿಕೊಂಡಿವೆ.

ಅವಧಿಗೆ ಮುನ್ನ ವಿಧಾನಸಭೆ ವಿಸರ್ಜಿಸಿ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ಈ ಮಹಾಮೈತ್ರಿ ದೊಡ್ಡ ಸವಾಲಾಗುವ ಲಕ್ಷಣಗಳಿವೆ. ಈ ಮಹಾಮೈತ್ರಿಯ ಅಧಿಕೃತ ಘೋಷಣೆ ಇಷ್ಟರಲ್ಲೇ ಆಗಲಿದೆ ಎಂದು ಮೂಲಗಳು ಹೇಳಿವೆ.

ಕೆಸಿಆರ್ ಅವರ ಜನಪ್ರಿಯ ಚುನಾವಣಾ ಆಶ್ವಾಸನೆಗಳಿಗೆ ಪ್ರತಿತಂತ್ರ ರೂಪಿಸಲು ನಾಲ್ಕು ಪಕ್ಷಗಳು ರೈತರು ಹಾಗೂ ಯುವಕರನ್ನು ಕೇಂದ್ರೀಕರಿಸಿರುವ ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸುತ್ತಿವೆ. ಕಳೆದ ಬಾರಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಕೆಸಿಆರ್ ಸರ್ಕಾರ ವಿಫಲವಾಗಿದೆ ಎನ್ನುವುದೇ ವಿರೋಧ ಪಕ್ಷಗಳ ಪ್ರಮುಖ ಚುನಾವಣಾ ವಿಷಯವಾಗಿದೆ.

ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸಲು ಟಿಜೆಎಸ್ ಮುಖ್ಯಸ್ಥ ಹಾಗೂ ತೆಲಂಗಾಣ ಚಳವಳಿಯ ಮುಖಂಡ ಕೋದಂಡರಾಮನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕೋದಂಡರಾಮನ್ ಆರು ತಿಂಗಳ ಹಿಂದೆಯಷ್ಟೇ ಟಿಜೆಎಸ್ ಪಕ್ಷ ಸ್ಥಾಪಿಸಿದ್ದರು. ಸಣ್ಣ ಸಂಘಟನೆಯಾದರೂ, ಟಿಜೆಎಸ್, ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಟಿಆರ್‌ಎಸ್‌ಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತಿದೆ.

ಚುನಾವಣೆಯಲ್ಲಿ ಮುಂಚಿತವಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಯಾವುದೇ ಏಕೈಕ ಪಕ್ಷ ಟಿಆರ್‌ಎಸ್‌ಗೆ ಸವಾಲೊಡ್ಡುವುದು ಅಸಾಧ್ಯ ಎಂಬ ಭಾವನೆ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಜತೆ ಸೇರಿ ಮಹಾಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿ ಮಾಡಿಕೊಳ್ಳುವ ಒತ್ತಡ ತಳಮಟ್ಟದಿಂದ ಬಂದಿದ್ದು, ಇದಕ್ಕೆ ಒಪ್ಪದ ಪಕ್ಷವನ್ನು ಜನವಿರೋಧಿ ಎಂದು ಪರಿಗಣಿಸುವ ಭೀತಿ ಇದೆ" ಎಂದು ಕೋದಂಡರಾಮನ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News