ಮೊದಲ ಟೆಸ್ಟ್ ನಲ್ಲಿ ಪಾಕ್ ಮೇಲುಗೈ

Update: 2018-10-09 18:49 GMT

ದುಬೈ, ಅ.9: ಆಸ್ಟ್ರೇಲಿಯ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.

   ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನ ವಾದ ಮಂಗಳವಾರ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ ಆಲ್‌ರೌಂಡರ್ ಬಿಲಾಲ್ ಆಸಿಫ್(36ಕ್ಕೆ 6) ಮತ್ತು ಮುಹಮ್ಮದ್ ಅಬ್ಬಾಸ್(29ಕ್ಕೆ 4) ದಾಳಿಗೆ ತತ್ತರಿಸಿ 88.3 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲೌಟಾಗಿದೆ.

280 ರನ್‌ಗಳ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ ದಿನದಾಟದಂತ್ಯಕ್ಕೆ 16.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 45 ರನ್ ಗಳಿಸಿದೆ.

ಆರಂಭಿಕ ದಾಂಡಿಗ ಇಮಾಮ್ ವುಲ್ ಹಕ್ 23 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ . ಮುಹಮ್ಮದ್ ಹಫೀಝ್(17) , ಬಿಲಾಲ್ ಆಸಿಫ್(0) ಮತ್ತು ಅಝರ್ ಅಲಿ(4) ಔಟಾದರು.

ಆಸ್ಟ್ರೇಲಿಯ 202: ಎರಡನೇ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಔಟಾಗದೆ 30 ರನ್ ಗಳಿಸಿದ್ದ ಆಸ್ಟ್ರೇಲಿಯ ಬ್ಯಾಟಿಂಗ್ ಮುಂದುವರಿಸಿ ಈ ಮೊತ್ತಕ್ಕೆ 172 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. 17 ರನ್ ಗಳಿಸಿದ್ದ ಉಸ್ಮಾನ್ ಖ್ವಾಜಾ ಮತ್ತು 13 ರನ್ ಗಳಿಸಿದ್ದ ಆ್ಯರೊನ್ ಫಿಂಚ್ ಬ್ಯಾಟಿಂಗ್ ಮುಂದುವರಿಸಿ ಮೊದಲ ವಿಕೆಟ್‌ಗೆ 142 ರನ್ ಸೇರಿಸಿದರು. ಫಿಂಚ್ (62) ಅವರು ಅಬ್ಬಾಸ್ ಎಸೆತದಲ್ಲಿ ಶಫೀಕ್‌ಗೆ ಕ್ಯಾಚ್ ನೀಡಿದರು.ಖ್ವಾಜಾ 85 ರನ್ ಗಳಿಸಿ ಔಟಾದರು. ಚೊಚ್ಚಲ ಪಂದ್ಯವನ್ನಾಡುತ್ತಿರುವ ಬಿಲಾಲ್ ಆಸಿಫ್ ಮತ್ತು ಮತ್ತು ಮುಹಮ್ಮದ್ ಅಬ್ಬಾಸ್ ದಾಳಿಗೆ ಸಿಲುಕಿದ ಆಸ್ಟ್ರೇಲಿಯ ದಾಂಡಿಗರು ರನ್ ಗಳಿಸಲು ಪರದಾಡಿದರು. ಪೀಟರ್ ಸಿಡ್ಲ್ (10) ಮಿಚೆಲ್ ಮಾರ್ಷ್(12) ಎರಡಂಕೆಯ ಸ್ಕೋರ್ ದಾಖಲಿಸಿದರು. ಮೂವರು ಆಟಗಾರರು ಸೊನ್ನೆ ಸುತ್ತಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News