ಚಲಿಸುತ್ತಿದ್ದ ರೈಲು ಹತ್ತುವ ವೇಳೆ ಬಿದ್ದು ಐಬಿಎಂ ಟೆಕ್ಕಿ ಸಾವು

Update: 2018-10-10 04:29 GMT

ಮುಂಬೈ, ಅ.10: ಸ್ನೇಹಿತರ ಜತೆ ಚಾರಣಕ್ಕೆ ತೆರಳಲು ಹೊರಟಿದ್ದ ಐಬಿಎಂ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು, ಚಲಿಸುತ್ತಿರುವ ರೈಲನ್ನೇರುವ ವೇಳೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ದಾದರ್ ರೈಲು ನಿಲ್ದಾಣದಲ್ಲಿ ನಡೆದಿದೆ.

ಸಾಂಗ್ಲಿ ಕಾಲೇಜಿನಿಂದ ಎಂಜಿನಿಯರಿಂಗ್ ಪದವಿ ಪಡೆದ ಸುದರ್ಶನ್ ಚೌಧರಿ (31) ಮೃತಪಟ್ಟವರಾಗಿದ್ದಾರೆ. ಸುದರ್ಶನ್ ರೈಲು ಹತ್ತುವ ಪ್ರಯತ್ನದಲ್ಲಿದ್ದಾಗ ಪ್ಲಾಟ್‌ಫಾರಂನಿಂದ ಹಳಿಗೆ ಜಾರಿ ಬಿದ್ದು, ಈ ದುರಂತ ಸಂಭವಿಸಿದೆ. ರೈಲು ಸುಮಾರು 50 ಮೀಟರ್ ದೂರಕ್ಕೆ ಅವರನ್ನು ಎಳೆದೊಯ್ದಿದೆ. ಘಟನೆ ರವಿವಾರವೇ ಸಂಭವಿಸಿದ್ದರೂ, ಮೃತರ ಗುರುತು ಈಗಷ್ಟೇ ಪತ್ತೆಯಾಗಿದೆ. ಪ್ರಯಾಣಿಕರು ಮೃತ ವ್ಯಕ್ತಿಯ ಮೊಬೈಲನ್ನು ಪೊಲೀಸರಿಗೆ ಒಪ್ಪಿಸಿದ ಬಳಿಕ ಟೆಕ್ಕಿಯ ಗುರುತು ಪತ್ತೆಹಚ್ಚಲಾಗಿದೆ.

ಸಾಂಗ್ಲಿ ಕಾಲೇಜಿನಿಂದ ಎಂಜಿನಿಯರಿಂಗ್ ಪದವಿ ಪಡೆದ ಸುದರ್ಶನ್ ಚೌಧರಿ ಇನ್ನೆರಡು ತಿಂಗಳಲ್ಲಿ ಹಸೆಮಣೆ ಏರಬೇಕಿತ್ತು. ಆತನ ಪೋಷಕರು ನಾಗ್ಪುರದವರಾಗಿದ್ದು, ಉದ್ಯೋಗಕ್ಕಾಗಿ ಇವರು ಮುಂಬೈಗೆ ಬಂದಿದ್ದರು. ತಂದೆತಾಯಿಗೆ ಒಬ್ಬನೇ ಮಗನಾಗಿದ್ದ ಎಂದು ಸ್ನೇಹಿತ ಸಂದೀಪ್ ವಿವರಿಸಿದ್ದಾರೆ.

ರವಿವಾರ ಮುಂಜಾನೆ ಮಲದ್‌ನಿಂದ ಚೌಧರಿ ಹೊರಟಿದ್ದ. ದಾದರ್‌ನಲ್ಲಿ ಕರ್ಜತ್‌ಗೆ ತೆರಳಲು ರೈಲು ಬದಲಿಸಬೇಕಿತ್ತು. ಅಲ್ಲಿ ಚಾರಣಕ್ಕೆ ಸ್ನೇಹಿತರು ನಿರ್ಧರಿಸಿದ್ದರು. ಸ್ನೇಹಿತರು ಇದ್ದ ರೈಲು ಹಿಡಿಯುವ ಧಾವಂತದಲ್ಲಿ ಈ ದುರ್ಘಟನೆ ಸಂಭವಿಸಿದೆ. ಒಂದನೇ ಪ್ಲಾಟ್‌ಫಾರಂನ ಕೊನೆಯಲ್ಲಿ ಈತ ಜಾರಿ ಹಳಿಗೆ ಬಿದ್ದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News