ಅರುಣ್ ಶೌರಿ, ಪ್ರಶಾಂತ್ ಭೂಷಣ್‍ರನ್ನು ಭೇಟಿಯಾದ ಸಿಬಿಐ ನಿರ್ದೇಶಕ: ಮೋದಿ ಸರಕಾರಕ್ಕೆ ಅಸಮಾಧಾನ

Update: 2018-10-10 07:04 GMT

ಹೊಸದಿಲ್ಲಿ, ಅ.10: ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅವರು  ಕಳೆದ ಗುರುವಾರ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಭೇಟಿಯಾಗಿ ರಫೇಲ್ ಒಪ್ಪಂದದ ತನಿಖೆ ನಡೆಸುವಂತೆ  ಕೋರಿ ದೂರು ದಾಖಲಿಸಿದ್ದು, ಕೇಂದ್ರದ ಮೋದಿ ಸರಕಾರಕ್ಕೆ ಅಸಮಾಧಾನ ತಂದಿದೆ. ಇದೇ ವಿಚಾರದಲ್ಲಿ ಮೂರನೇ ದೂರುದಾರ ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಆಗಿದ್ದಾರೆ.

ಈ ಹಿಂದೆ ಬಿಜೆಪಿ ಜತೆಗಿದ್ದ ಹಾಗೂ ಈಗ ಬಿಜೆಪಿಯ ಕಟು ಟೀಕಾಕಾರರಾಗಿ ಬಿಟ್ಟಿರುವ ಶೌರಿ ಮತ್ತು ಸಿನ್ಹಾ ಅವರನ್ನು ಸಿಬಿಐ ನಿರ್ದೇಶಕರು ಭೇಟಿಯಾಗಿದ್ದು ಕೇಂದ್ರಕ್ಕೆ ಸುತರಾಂ ಹಿಡಿಸಿಲ್ಲವೆನ್ನಲಾಗಿದೆ.

“ಸಿಬಿಐ ನಿರ್ದೇಶಕರು ದೂರುದಾರರನ್ನು, ಮುಖ್ಯವಾಗಿ ಅವರು ರಾಜಕಾರಣಿಗಳಾಗಿದ್ದರೆ, ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಪರಿಪಾಠವಿಲ್ಲ. ಸಾಮಾನ್ಯ ಪ್ರಕ್ರಿಯೆಯಂತೆ ದೂರನ್ನು ಸಿಬಿಐ ಕಚೇರಿಯ ರಿಸೆಪ್ಶನ್ ವಿಭಾಗದಲ್ಲಿ ನೀಡಲಾಗುತ್ತದೆ. ಕಿರಿಯ ಅಧಿಕಾರಿಗಳೂ ದೂರುದಾರರನ್ನು ಭೇಟಿಯಾಗಲು ನಿರಾಕರಿಸುತ್ತಾರೆ. ದೂರೊಂದು ಅಧಿಕೃತವಾಗಿ ದಾಖಲುಗೊಂಡು ತನಿಖೆ ಆರಂಭಗೊಂಡ ನಂತರವಷ್ಟೇ ದೂರುದಾರರು ಯಾವುದೇ ಅಧಿಕಾರಿಯನ್ನು ಭೇಟಿಯಾಗಬಹುದು''  ಎಂದು ಹಿರಿಯ ಕ್ಯಾಬಿನೆಟ್ ಸಚಿವರೊಬ್ಬರು ಹೇಳಿದ್ದಾರೆ.

ತಮ್ಮ ವಿಸ್ತೃತ ದೂರಿನೊಂದಿಗೆ ಶೌರಿ ಮತ್ತು ಭೂಷಣ್ ತಮ್ಮ ವಾದವನ್ನು ಪುಷ್ಠೀಕರಿಸುವ ಹಲವು ದಾಖಲೆಗಳನ್ನೂ ಸಲ್ಲಿಸಿದ್ದಾರೆ. ವಾಸ್ತವವಾಗಿ ರಫೇಲ್ ಒಪ್ಪಂದವು ಅನಿಲ್ ಅಂಬಾನಿಯ ಸಂಸ್ಥೆಗೆ ಕಮಿಷನ್ ಆಗಿದೆ ಎಂದು ಆರೋಪಿಸಿರುವ ಅವರು  ಸಿಬಿಐ ನಿರ್ದೇಶಕರು ಸರಕಾರದ ಅನುಮತಿ ಪಡೆದು ತನಿಖೆ ನಡೆಸುವಂತೆ ಕೋರಿದ್ದಾರೆ.

ಸಿಬಿಐ ನಿರ್ದೇಶಕ ವರ್ಮಾ ಅವರು  ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಜತೆಗೆ ಹೊಂದಿರುವ  ಭಿನ್ನಾಭಿಪ್ರಾಯವೂ ಸರಕಾರದ ಅಸಮಾಧಾನಕ್ಕೆ ಇನ್ನೊಂದು ಕಾರಣವಾಗಿದೆಯೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News