ಮಾವೋವಾದಿಗಳು ಜೈಲಿನಿಂದ ಪರಾರಿಯಾಗಲು ಸಂಚು: ಬಿಜೆಪಿ ನಾಯಕನ ಬಂಧನ

Update: 2018-10-10 11:06 GMT

ರಾಂಚಿ, ಅ.10: ಚೈಬಾಸ ಕಾರಾಗೃಹದಲ್ಲಿರುವ ಕೆಲ ಪ್ರಮುಖ ಮಾವೋವಾದಿಗಳನ್ನು ಬಂಧಮುಕ್ತಗೊಳಿಸುವ ಸಲುವಾಗಿ ಅವರು ಅಲ್ಲಿಂದ ಪರಾರಿಯಾಗಲು ಸಂಚು ರೂಪಿಸಿದ ಆರೋಪದ ಮೇಲೆ ಜಿಲ್ಲಾ ಬಿಜೆಪಿ ನಾಯಕ ರಮಾಶಂಕರ್ ಪಾಂಡೆ ಹಾಗೂ ಜೈಲಿನ ಮೂವರು ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಭದ್ರತಾ ಸಿಬ್ಬಂದಿಯನ್ನು ಚಾಮು ಮುಂಡಾ, ಜುವೆಲ್ ಹೊರೊ ಹಾಗೂ ವಿಜಯ್ ಖಲ್ಖೊ ಎಂದು ಗುರುತಿಸಲಾಗಿದೆ.

ಜೈಲಿನಲ್ಲಿರುವ ಸಂದೀಪ್ ಸೊರೆನ್ ಮತ್ತಿತರರನ್ನು ಹೊರಕ್ಕೆ ಕರೆತರಲು ಅವರು ಸಂಚು ಹೂಡಿದ್ದರೆಂದು ಚೈಬಾಸ ಎಸ್.ಪಿ. ಕ್ರಾಂತಿ ಕುಮಾರ್ ಗಢ್ದೇಸಿ ಹೇಳಿದ್ದಾರೆ.

ಸಂದೀಪ್ ಸೋರೆನ್ ಹಣಕಾಸಿನ ವಿಚಾರವನ್ನು ನಿರ್ವಹಿಸುತ್ತಿದ್ದ ಪಾಂಡೆಯು ಆರೋಪಿ ಖಲ್ಕೋಗೆ ಅದಾಗಲೇ 4 ಲಕ್ಷ ರೂ. ನೀಡಿ ದಸರಾ ಸಂದರ್ಭ ಜೈಲಿನಿಂದ ತಪ್ಪಿಸಿಕೊಂಡು ಹೋಗಲು ಸಂಚು ರೂಪಿಸಿದ್ದರು ಹಾಗೂ ಈ ಮೂಲಕ ಮಾವೋವಾದಿಗಳಾದ ರಾಜೇಶ್ ಸಂಥಾಲಿ, ರಮೇಶ್ ಕುಂಕಲ್, ಮಾರ್ಕಾಂಡೇಯ ಸಿಂಗ್ ಕುಟಿಯ, ದೇವ್ ಕುಮಾರ್  ಬಿರುಲಿ ಹಾಗೂ ನಲ್ಲ ಭಿಕ್ಷಪತಿ ಎಂಬವರು ಪರಾರಿಯಾಗಲು ಸಹಕರಿಸಲು ಯೋಜಿಸಿದ್ದರು ಎಂದು ಆರೋಪಿಸಲಾಗಿದೆ.

ಜೈಲಿನ ಕಾಂಪೌಂಡ್ ಗೋಡೆಯನ್ನು ಹಗ್ಗಗಳ ಸಹಾಯದಿಂದ ಹತ್ತಿ ಹೊರಹೋಗಲು ಇಲ್ಲವೇ ನ್ಯಾಯಾಲಯಕ್ಕೆ ಹೋಗುವ ಹಾದಿಯಲ್ಲಿ ಬಾಂಬ್ ಸ್ಫೋಟದ ಮೂಲಕ ಪರಾರಿಯಾಗುವ ಸಂಚು ಹೂಡಲಾಗಿತ್ತು. ಇದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಕೂಡ ನಡೆದಿತ್ತೆನ್ನಲಾಗಿದೆ. ಇದಕ್ಕಾಗಿ ರೂ 10 ಲಕ್ಷದ ಒಪ್ಪಂದಕ್ಕೆ ಬರಲಾಗಿತ್ತೆಂದೂ ತಿಳಿದು ಬಂದಿದೆ.

ಇದೇ ಜೈಲಿನಿಂದ 2011 ಹಾಗೂ 2014ರಲ್ಲಿ ಕೈದಿಗಳು ಪರಾರಿಯಾದ ಸಂದರ್ಭ ಆರೋಪಿ ವಿಜಯ್ ಖಲ್ಕೊ ಅಲ್ಲಿಯೇ ಕರ್ತವ್ಯದಲ್ಲಿದ್ದ. 2011ರಲ್ಲಿ ಇಲ್ಲಿಂದ ಪರಾರಿಯಾದವರಲ್ಲಿ ಹೋದವರಲ್ಲಿ ಸಂದೀಪ್ ಸೋರೆನ್ ಕೂಡ ಸೇರಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News