ಮಾಜಿ ಬಾಂಗ್ಲಾ ಪ್ರಧಾನಿ ಖಾಲಿದಾ ಪುತ್ರನಿಗೆ ಜೀವಾವಧಿ: 19 ಮಂದಿಗೆ ಮರಣ ದಂಡನೆ

Update: 2018-10-13 05:59 GMT

ಢಾಕಾ, ಅ. 10: 2004ರಲ್ಲಿ ನಡೆದ ಗ್ರೆನೇಡ್ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಝಿಯಾರ ಮಗ ತಾರಿಖ್ ರಹಮಾನ್‌ಗೆ ಇಲ್ಲಿನ ನ್ಯಾಯಾಲಯವೊಂದು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಇದೇ ಪ್ರಕರಣದಲ್ಲಿ ನ್ಯಾಯಾಲಯವು 19 ಮಂದಿಗೆ ಮರಣ ದಂಡನೆ ವಿಧಿಸಿದೆ.

ಅಂದಿನ ಗ್ರೆನೇಡ್ ದಾಳಿಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಹಾಗೂ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಸುಮಾರು 500 ಮಂದಿ ಗಾಯಗೊಂಡಿದ್ದಾರೆ.

2004 ಆಗಸ್ಟ್ 21ರಂದು ನಡೆದ ಅವಾಮಿ ಲೀಗ್ ಪಕ್ಷದ ಸಭೆಯಲ್ಲಿ ಈ ದಾಳಿ ನಡೆದಿತ್ತು. ಆಗ ಪ್ರತಿಪಕ್ಷ ನಾಯಕಿಯಾಗಿದ್ದ ಹಸೀನಾರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಆ ದಾಳಿಯಲ್ಲಿ ಹಸೀನಾ ಆಂಶಿಕ ಕಿವುಡುತನ ಅನುಭವಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತರುವಾಗಿ ರಾಜಧಾನಿಯಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿತ್ತು.

50 ವರ್ಷದ ರಹಮಾನ್‌ರ ಅನುಪಸ್ಥಿತಿಯಲ್ಲಿ ಅವರ ವಿಚಾರಣೆ ನಡೆಸಲಾಯಿತು. ಅವರನ್ನು ‘ದೇಶಭ್ರಷ್ಟ’ ಎಂಬುದಾಗಿ ನ್ಯಾಯಾಲಯ ಘೋಷಿಸಿತು.

ಅವರು ಈಗ ಲಂಡನ್‌ನಲ್ಲಿ ನೆಲೆಸಿದ್ದಾರೆ.

ಮರಣ ದಂಡನೆಗೆ ಒಳಗಾದವರ ಪಟ್ಟಿಯಲ್ಲಿ ಮಾಜಿ ಗೃಹ ಸಚಿವ ಬಾಬರ್ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News