ಆಸ್ಟ್ರೇಲಿಯಕ್ಕೆ ಖ್ವಾಜಾ-ಹೆಡ್ ಆಸರೆ

Update: 2018-10-10 18:56 GMT

   ದುಬೈ, ಅ.10: ಪಾಕಿಸ್ತಾನ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಗೆಲುವಿಗೆ 462 ರನ್‌ಗಳ ಸವಾಲನ್ನು ಪಡೆದಿರುವ ಆಸ್ಟ್ರೇಲಿಯ ತಂಡ ವೇಗಿ ಮುಹಮ್ಮದ್ ಅಬ್ಬಾಸ್ ದಾಳಿಗೆ ತತ್ತರಿಸಿದ್ದು , ಆರಂಭಿಕ ದಾಂಡಿಗ ಉಸ್ಮಾನ್ ಖ್ವಾಜಾ ಮತ್ತು ಟ್ರಾವಿಸ್ ಹೆಡ್ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದ್ದಾರೆ.

    ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಆಸ್ಟ್ರೇಲಿಯ ತಂಡ ದಿನದಾಟದಂತ್ಯಕ್ಕೆ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 136 ರನ್ ಗಳಿಸಿದೆ. ಗೆಲುವಿಗೆ ಇನ್ನೂ 326 ರನ್ ಗಳಿಸಬೇಕಾಗಿದೆ

 ಅರ್ಧ ಶತಕ ದಾಖಲಿಸಿರುವ ಆಸ್ಟ್ರೇಲಿಯ ತಂಡದ ಆರಂಭಿಕ ದಾಂಡಿಗ ಉಸ್ಮಾನ್ ಖ್ವಾಜಾ(50) ಮತ್ತು 34 ರನ್ ಗಳಿಸಿರುವ ಟ್ರಾವಿಸ್ ಹೆಡ್ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

   

 ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯದ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿತ್ತು. ಆ್ಯರೊನ್ ಫಿಂಚ್ ಮತ್ತು ಉಸ್ಮಾನ್ ಖ್ವಾಜಾ ಮೊದಲ ವಿಕೆಟ್‌ಗೆ 87 ರನ್‌ಗಳ ಜೊತೆಯಾಟ ನೀಡಿದರು. 29.4ನೇ ಓವರ್‌ನಲ್ಲಿ ಮುಹಮ್ಮದ್ ಅಬ್ಬಾಸ್ ಅವರು ಫಿಂಚ್‌ರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಫಿಂಚ್ 99 ಎಸೆತಗಳಲ್ಲಿ 49 ರನ್ ಗಳಿಸಿದರು.ಅದೇ ಓವರ್‌ನ ಕೊನೆಯ ಎಸೆತದಲ್ಲಿ ಆಸ್ಟ್ರೇಲಿಯಕ್ಕೆ ಇನ್ನೊಂದು ಆಘಾತ. ಶಾನ್ ಮಾರ್ಷ್ ಅವರು ಅಬ್ಬಾಸ್ ಎಸೆತದಲ್ಲಿ ಸರ್ಫರಾಝ್ ಅಹ್ಮದ್‌ಗೆ ಕ್ಯಾಚ್ ನೀಡಿದರು. ಮಾರ್ಷ್ ಖಾತೆ ತೆರೆಯದೆ ನಿರ್ಗಮಿಸಿದರು. ಅಬ್ಬಾಸ್‌ರ ಮುಂದಿನ ಓವರ್‌ನಲ್ಲಿ (31.4) ಇನ್ನೊಂದು ಯಶಸ್ಸು. ಮಿಚೆಲ್ ಮಾರ್ಷ್ (0) ಅವರನ್ನು ಅಬ್ಬಾಸ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. 87ಕ್ಕೆ 3 ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ಆಸ್ಟ್ರೇಲಿಯದ ಬ್ಯಾಟಿಂಗ್‌ನ್ನು ಮುನ್ನಡೆಸಿದ ಖ್ವಾಜಾ ಮತ್ತು ಹೆಡ್ ಮುಂದೆ ವಿಕೆಟ್ ಉರುಳದಂತೆ ನೋಡಿಕೊಂಡರು. ನಾಲ್ಕನೇ ವಿಕೆಟ್‌ಗೆ 49 ರನ್‌ಗಳ ಜೊತೆಯಾಟ ನೀಡಿ ಬ್ಯಾಟಿಂಗ್‌ನ್ನು ಅಂತಿಮ ದಿನಕ್ಕೆ ಕಾಯ್ದಿರಿಸಿದ್ದಾರೆ.

 ಪಾಕಿಸ್ತಾನದ ಮುಹಮ್ಮದ್ ಅಬ್ಬಾಸ್ 26ಕ್ಕೆ 3 ವಿಕೆಟ್ ಉಡಾಯಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅಬ್ಬಾಸ್ 29ಕ್ಕೆ 4 ವಿಕೆಟ್ ಕಬಳಿಸಿದ್ದರು.

 ಮೊದಲ ಇನಿಂಗ್ಸ್‌ನಲ್ಲಿ ಬಿಲಾಲ್ ಆಸಿಫ್(36ಕ್ಕೆ 6) ಮತ್ತು ಮುಹಮ್ಮದ್ ಅಬ್ಬಾಸ್(29ಕ್ಕೆ 4) ದಾಳಿಗೆ ತತ್ತರಿಸಿ ಆಸ್ಟ್ರೇಲಿಯ 88.3 ಓವರ್‌ಗಳಲ್ಲಿ 202ರನ್‌ಗಳಿಗೆ ಆಲೌಟಾಗಿತ್ತು.

   ಮೊದಲ ಇನಿಂಗ್ಸ್‌ನಲ್ಲಿ 280 ರನ್‌ಗಳ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ ಮೂರನೇ ದಿನದಾಟದಂತ್ಯಕ್ಕೆ 16.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 45 ರನ್ ಗಳಿಸಿತ್ತು.ಆರಂಭಿಕ ದಾಂಡಿಗ ಇಮಾಮ್ ವುಲ್ ಹಕ್ 23 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಪಾಕಿಸ್ತಾನ ಬ್ಯಾಟಂಗ್ ಮುಂದುವರಿಸಿ 57.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 181 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

   ಹಕ್ 48 ರನ್, ಸೊಹೈಲ್ 39 ರನ್, ಅಸಾದ್ ಶಫೀಕ್ 41 ರನ್ ಗಳಿಸಿ ಔಟಾದರು. ಬಾಬರ್ ಅಝಮ್ ಔಟಾಗದೆ 28 ರನ್ ಗಳಿಸಿದರು. ಆಸ್ಟ್ರೇಲಿಯದ ಜಾನ್ ಹೊಲ್ಯಾಂಡ್ 83ಕ್ಕೆ 3 ವಿಕೆಟ್, ನಥಾನ್ ಲಿಯೋನ್ 58ಕ್ಕೆ 2 ಮತ್ತು ಮಾರ್ನುನ್ 9ಕ್ಕೆ 1 ವಿಕೆಟ್ ಪಡೆದರು. ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 202 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News