ಮಹಿಳೆಯರ ಅನುಭವಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ?

Update: 2018-10-10 18:58 GMT

ಕಳೆದ ವಾರ ಇಬ್ಬರು ಮಹಿಳೆಯರು ತಾವು ಈ ಹಿಂದೆ ಅನುಭವಿಸಿದ ಲೈಂಗಿಕ ಕಿರುಕುಳದ ಸಂಕಟದ ಅನುಭವಗಳನ್ನು ಲೋಕದೆದುರು ಪದೇಪದೇ ಹೇಳಿಕೊಳ್ಳಬೇಕಾಯಿತು. ಅಮೆರಿಕದಲ್ಲಿ ಮನಶಾಸ್ತ್ರದ ಪ್ರೊಫೆಸರ್ ಆಗಿರುವ ಕ್ರಿಸ್ಟೀನ್ ಬ್ಲಾಸಿ ಫೋರ್ಡ್ ಅವರು 1982ರಲ್ಲಿ ತಾನು ಹದಿಹರೆಯದವರಾಗಿದ್ದಾಗ ಅಮೆರಿಕದ ಸುಪ್ರೀಂ ಕೋರ್ಟಿಗೆ ಇದೀಗ ನ್ಯಾಯಾಧೀಶರಾಗಿ ನಾಮನಿರ್ದೇಶಿತರಾಗಿರುವ ಬ್ರೆಟ್ ಎಂ. ಕ್ಯಾವನಾವ್ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದ್ದರೆಂದು ಆಪಾದಿಸಿದ್ದಾರೆ. ನಂತರ ಮುಂಬೈನಲ್ಲಿ ನಟಿ ತನುಶ್ರೀ ದತ್ತಾ ಅವರು 2008ರಲ್ಲಿ ನಟ ನಾನಾ ಪಾಟೇಕರ್ ಅವರು ತನಗೆ ಕಿರುಕುಳ ಕೊಟ್ಟ ಬಗ್ಗೆ ಮತ್ತು ಅದರ ಪರಿಣಾಮವಾಗಿ ತಾನು ಚಿತ್ರರಂಗದಿಂದಲೇ ಹೊರಹಾಕಲ್ಪಟ್ಟಿದ್ದರ ಬಗ್ಗೆ ಒಂದು ಟೆಲಿವಿಷನ್ ಚಾನೆಲ್‌ಗೆ ಹೇಳಿಕೊಂಡಿದ್ದಾರೆ.

ಈ ಸಂತ್ರಸ್ತ ಮಹಿಳೆಯರ ಹೇಳಿಕೆಗಳು ತುಂಬಾ ಮಹತ್ವಪೂರ್ಣವಾಗಿವೆ. ಮತ್ತದರ ಮಹತ್ವವು ಆ ನಿರ್ದಿಷ್ಟ ಕಿರುಕುಳಕೋರರು ಕೊಟ್ಟ ಹಿಂಸೆಯಾಚೆಗೂ ಹರಡಿಕೊಂಡಿದೆ. ಇದು ಇತ್ತೀಚೆಗೆ ಪ್ರಾರಂಭವಾಗಿರುವ ‘ಮೀ ಟೂ’ (ನಾನು ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದೆ) ಚಳವಳಿಯಲ್ಲಿ ಹಲವಾರು ಮಹಿಳೆಯರು ತೋಡಿಕೊಂಡಿರುವ ಅನುಭವಗಳ ವಿನ್ಯಾಸದಂತೆಯೇ ಇದೆ. ಈ ವಿನ್ಯಾಸದಲ್ಲಿರುವ ಅನುದಿನದ ಕೆಲಸದ ಚೌಕಟ್ಟುಗಳು ಮತ್ತು ಸ್ನೇಹ ಬಾಂಧವ್ಯಗಳು ಲೈಂಗಿಕ ಕಿರುಕುಳ ನೀಡಿದವರನ್ನು ರಕ್ಷಿಸುವುದು ಮಾತ್ರವಲ್ಲದೆ ಅವರನ್ನು ಇನ್ನಷ್ಟು ಸಶಕ್ತರನ್ನಾಗಿಸಿ ಲೈಂಗಿಕ ಕಿರುಕುಳವನ್ನು ಸರ್ವೇ ಸಹಜಗೊಳಿಸಿಬಿಡುತ್ತದೆ. ಲೈಂಗಿಕ ಕಿರುಕುಳವು ಒಂದು ಗಂಭೀರವಾದ ಅಪರಾಧವೆಂದೇ ಪರಿಗಣಿಸಲ್ಪಟ್ಟಿದ್ದರೂ ಅದೊಂದು ಅಪರೂಪಕ್ಕೊಮ್ಮೆ ಸಂಭವಿಸುವ ಘಟನೆಯೇನಾಗಿಲ್ಲ. ಅದು ನಮ್ಮ ಸಮಾಜದಲ್ಲಿ ಪುರುಷರಿಗಿರುವ ಅನುದಿನದ ಅಧಿಕಾರ ಮತ್ತು ಶಿಕ್ಷಾರಾಹಿತ್ಯದ ಪರಿಸ್ಥಿತಿಗಳ ಪ್ರತಿಫಲನವಾಗಿದೆ. ಕುಡಿತದ ಉನ್ಮಾದದಲ್ಲಿರುವ ಒಬ್ಬ ಹದಿಹರೆಯದ ಯುವಕನಿಗೂ ಹಾಗೂ ರಾಜಕೀಯ ಬೆಂಬಲವುಳ್ಳ ಒಬ್ಬ ನಟನಿಗೂ ಒಂದೇ ರೀತಿಯಲ್ಲಿ ಶಿಕ್ಷಾ ವಿನಾಯತಿ ಸಿಗುವುದು ಆಘಾತಕಾರಿಯಾಗಿದೆ.

ಮೂವತ್ತಾರು ವರ್ಷದ ಹಿಂದೆ ಹಾಗೂ ಹತ್ತು ವರ್ಷದ ಹಿಂದೆ ನಡೆದ ಈ ಎರಡೂ ಘಟನೆಗಳನ್ನು ಈಗಲಾದರೂ ಸಮಾಜವು ಕೇಳಿಸಿಕೊಳ್ಳುತ್ತದೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡು ಆ ಸಂತ್ರಸ್ತರು ಸಮಾಜದೊಂದಿಗೆ ತಮ್ಮ ನೋವುತುಂಬಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದೇ ರೀತಿ ಅಮೆರಿಕದ ಚಿತ್ರ ನಿರ್ಮಾಪಕ ಹಾರ್ವೆ ವೆಯ್ನಾಸ್ಟೇನ್ ಅವರು ತಮಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದರೆಂದು 80 ಮಹಿಳೆಯರು 2017ರ ಅಕ್ಟೋಬರ್‌ನಲ್ಲಿ ಆರೋಪ ಹೊರಿಸಿದ್ದರೂ ಏನು ಬದಲಾಯಿತು? ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ಮೀ ಟೂ’ ಹ್ಯಾಷ್ಟ್ಯಾಗ್ ಆಂದೋಲನದ ಮೂಲಕ ಜಗತ್ತಿನಾದ್ಯಂತ ಸಾವಿರಾರು ಮಹಿಳೆಯರು ತಮಗಾದ ಲೈಂಗಿಕ ಕಿರುಕುಳವನ್ನು ಜಗತ್ತಿನೆದುರು ಬಿಚ್ಚಿಟ್ಟರೂ ಸಮಾಜದಲ್ಲಿ ಏನು ಬದಲಾವಣೆ ಬಂದಿದೆ?

ಸಾಮಾಜಿ ಅಧಿಕಾರ ರಚನೆಗಳಿಗೆ ಸಂಬಂಧಪಟ್ಟಂತೆ ಏನೂ ಬದಲಾಗಿಲ್ಲ. ಅಮೆರಿಕದಲ್ಲೂ ಆಗಿಲ್ಲ. ಭಾರತದಲ್ಲಂತೂ ಖಂಡಿತಾ ಏನೂ ಬದಲಾಗಿಲ್ಲ. ಆದರೆ ತಮ್ಮ ಅದುಮಿಟ್ಟ ಭಾವನೆಗಳನ್ನು ಹೀಗೆ ಹೊರಹಾಕುವ ಮೂಲಕ ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಹಲವಾರು ಮಹಿಳೆಯೊರಳಗಿನ ಆತ್ಮಸ್ಥೈರ್ಯ ಹೆಚ್ಚಿದೆ. ಆ ಮೂಲಕ ಅವರು ತಮ್ಮ ಜೀವನವನ್ನು ಮತ್ತು ಜೀವನದ ನಿರ್ಧಾರಗಳನ್ನು ಪ್ರಭಾವಿಸಿದ ಆ ಲೈಂಗಿಕ ಕಿರುಕುಳದ ಅನುಭವಗಳನ್ನು ಪುನರಾವಲೋಕನ ಮಾಡಲು ಸಾಧ್ಯವಾಗಿದೆ. ಹಲವು ಮಹಿಳೆಯರಿಗಂತೂ ಆ ಕಿರುಕುಳದ ಅನುಭವಗಳು ಹೇಗೆ ತಮ್ಮ ಅರಿವಿಗೂ ಬಾರದಂತೆ ತಮ್ಮ ಜೀವನವನ್ನು ಆವರಿಸಿಕೊಂಡುಬಿಟ್ಟಿದೆ ಎಂಬುದು ಗೊತ್ತಾಗಿದೆ. ಕಿರುಕುಳದ ಅನುಭವಗಳನ್ನು ಹಂಚಿಕೊಂಡ ಮಹಿಳೆಯರೆಲ್ಲರ ಕಥನಗಳಲ್ಲಿನ ಅಪಾರ ಸಾಮ್ಯತೆಯು ವರ್ಷಾನುವರ್ಷಗಳಿಂದ ಮಹಿಳೆಯರು ಬಾಯಿಬಿಚ್ಚದೆ ಅದುಮಿಟ್ಟುಕೊಂಡು ಬಂದ ನೋವುಗಳಿಗೆ ಮಾನ್ಯತೆಯನ್ನು ಒದಗಿಸಿದೆ.

 ಲೈಂಗಿಕ ಕಿರುಕುಳವು ಎಂತಹ ಅಪರಾಧವೆಂದರೆ ಅದು ಅಪರಾಧವನ್ನು ಎಸಗಿದವರಿಗಿಂತ ಅಪರಾಧಕ್ಕೆ ಬಲಿಯಾದವರನ್ನು ದೂಷಿಸಲೆಂದೇ ಹೆಚ್ಚಾಗಿ ಬಳಕೆಯಾಗುತ್ತದೆ. ಲೈಂಗಿಕ ಕಿರುಕುಳದ ಬಗೆಗಿನ ಜ್ಞಾನವನ್ನು ಪುರುಷಜ್ಞಾನವೇ ತೀರ್ಮಾನ ಮಾಡುತ್ತಿರುವಾಗ ಲೈಂಗಿಕ ಕಿರುಕುಳದ ಬಗೆಗೆ ನೀಡಲಾಗುವ ‘ಪುರಾವೆ’ಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು? ತಮ್ಮ ಮೇಲಾದ ಲೈಂಗಿಕ ಕಿರುಕುಳವನ್ನು ಹೇಗಾದರೂ ಮರೆತು ಮುನ್ನಡೆಯಲು ಮಹಿಳೆಯರು ಜೀವಮಾನವಿಡೀ ಪ್ರಯತ್ನಿಸುತ್ತಿರುವಾಗ ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಸಾಕ್ಷಿಯೆಂಬುದಕ್ಕೆ ಅರ್ಥವೇನು? ತಾನು ಮಾಡಿದ ಲೈಂಗಿಕ ದಾಳಿಯ ಸಾಕ್ಷಿಯನ್ನು ತನ್ನ ಬಲಿಪಶುವನ್ನು ಮತ್ತಷ್ಟು ಮೌನಕ್ಕೆ ತಳ್ಳಲು ಬಳಸಿಕೊಳ್ಳುತ್ತಿರುವಾಗ ಪುರಾವೆಯೆಂದರೇನು?

 ಇಂತಹ ಪ್ರಕರಣಗಳಲ್ಲಿ ಹಲವಾರು ಜನರ ಮನಸ್ಸಿನಲ್ಲಿ ಸುಳಿಯುವ ಪ್ರಶ್ನೆ ನಂಬಿಕೆಗೆ ಸಂಬಂಧಪಟ್ಟಿದೆ ಎಂದು ಕಾಣುತ್ತದೆ: ‘‘ಈ ಮಹಿಳೆಯರನ್ನು ಹೇಗೆ ನಂಬುವುದು?ಈ ಮಹಿಳೆಯರು ನಿಜವನ್ನೇ ನುಡಿಯುತ್ತಿದ್ದಾರೆ ಎಂದು ಹೇಗೆ ಗೊತ್ತಾಗಬೇಕು? 36 ವರ್ಷಗಳ ಹಿಂದೆ ನಡೆಯಿತೆಂದು ಹೇಳಲಾದ ಅತ್ಯಾಚಾರ ಪ್ರಕರಣಕ್ಕೆ ಏನು ಸಾಕ್ಷಿಯಿದೆ?’’ ನ್ಯಾಯ ಸಂಬಂಧಿ ತರ್ಕ ಸರಣಿಯಲ್ಲಿ ನಂಬಿಕೆ ಎಂಬುದು ಅಷ್ಟೊಂದು ಪರಕೀಯ ಸಂಗತಿಯೇನಲ್ಲ. ಆದರೆ ವ್ಯತ್ಯಾಸವೇನೆಂದರೆ ಮಹಿಳಾ ಲೋಕದಲ್ಲಿ ನಂಬಿಕೆಗೆ ಸಂಬಂಧಪಟ್ಟ ಸಂಗತಿಗಳು ಮಾತ್ರ ಪಿತೃಸ್ವಾಮ್ಯ ತಿಳಿವಳಿಕೆಯ ಪರೀಕ್ಷೆಗಳಿಗೆ ಗುರಿಯಾಗುತ್ತವೆ.

ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟ ಸಂಗತಿಗಳು ಆಕ್ರಮಣಕಾರರು ಹೊಂದಿರುವ ಅಧಿಕಾರ ಮತ್ತು ಶಿಕ್ಷಾರಾಹಿತ್ಯ ಸ್ಥಿತಿಗಳ ಪ್ರತಿಫಲನವಾಗಿರುವುದರಿಂದ ಅದು ಕಾನೂನು ವ್ಯವಸ್ಥೆಗೂ ವಿಸ್ತರಿಸಿಕೊಳ್ಳುತ್ತದೆ. ಏಕೆಂದರೆ ನ್ಯಾಯಿಕ ವ್ಯವಸ್ಥೆಯಲ್ಲೂ ಮೇಲ್ಜಾತಿ ಪುರುಷರ ಪ್ರಾತಿನಿಧ್ಯ ಅತ್ಯಧಿಕವಾಗಿದೆ. ಇಂತಹ ಪ್ರಕರಣಗಳಲ್ಲಿ ನೀಡಲಾಗಿರುವ ನ್ಯಾಯಾದೇಶ ಗಳು ಮಹಿಳೆಯ ಸಮ್ಮತಿಯ ಅಂಶವನ್ನು ಸದಾ ಕಡೆಗಣಿಸು ತ್ತಾ ಬಂದಿವೆ ಹಾಗೂ ಆಕೆಯು ಆಡಿದ ಮಾತುಗಳು ಆಕೆಯ ದೇಹದ ಮೇಲಾಗಿರುವ ಗಾಯಗಳಿಗೆ ವಿರುದ್ಧ ವಾದ ಸಾಕ್ಷ್ಯಗಳಾಗುತ್ತವೆ. ಆಕೆಯ ದೇಹದ ಮೇಲೆ ಗಾಯಗಳಿಲ್ಲದಿರು ವುದನ್ನು ನ್ಯಾಯಾಧೀಶರು ಹೇಗೆ ಅರ್ಥೈಸುತ್ತಾರೆಂಬುದು ಸಂತ್ರಸ್ತ ಮಹಿಳೆಯ ನಡತೆ ಮತ್ತು ಲೈಂಗಿಕ ಇತಿಹಾಸದ ಬಗ್ಗೆ ಅವರ ತಿಳುವಳಿಕೆ ಏನೆಂಬುದರ ಮೇಲೂ ಮತ್ತು ಲೈಂಗಿಕ ಕಿರುಕುಳಕ್ಕೆ ಬಲಿಯಾದ ಸಂತ್ರಸ್ತೆಯಾಗಿ ಆಕೆಯ ವರ್ತನೆ ನಂಬಲರ್ಹವಾಗಿತ್ತೇ ಎಂಬುದನ್ನು ಆಧರಿಸಿರುತ್ತದೆ.

ಈ ಬಾರಿಯ ಸ್ತ್ರೀವಾದಿ ಅಲೆಯು ಸಮಾಜಕ್ಕೆ ನೀಡಿರುವ ಒಂದು ದೀರ್ಘಾವಧಿ ಬೆಲೆಬಾಳುವ ಕೊಡುಗೆಯನ್ನು ನೀಡಿದೆ. ಜ್ಞಾನವೆಂಬುದು ಕೂಡಾ ಪುರುಷಪರ ತಿಳುವಳಿಕೆಯಿಂದಲೇ ನಿರ್ವಚನಗೊಂಡಿದ್ದು ಪಿತೃಸ್ವಾಮ್ಯ ಪದ್ಧತಿಯು ಹೇರಿರುವ ಕಲ್ಪನೆಯಾಗಿದೆ ಎಂಬ ಪ್ರತಿಪಾದನೆಯನ್ನು ಈ ಅಲೆಯು ಜನಪ್ರಿಯಗೊಳಿಸಿದೆ. ತಮ್ಮ ಜ್ಞಾನದ ಅನುಭವಗಳ ತಿರಸ್ಕಾರದ ಬಗ್ಗೆ ಹೇಳಿಕೊಳ್ಳಲು ಮಹಿಳೆಯರಿಗೆ ಈಗ ಒಂದು ಭಾಷೆ ದಕ್ಕಿದೆ. ಮಹಿಳೆಯರು ಏನೂ ಅರ್ಥವಾಗದ ಗುಗ್ಗುಗಳು ಎಂಬ ಅರ್ಥಕೊಡುವ (ಮ್ಯಾನ್ಸ್‌ಪ್ಲೇನಿಂಗ್), ಮಹಿಳೆಯರಿಗೆ ತಮ್ಮ ಬಗ್ಗೆ ತಮಗೇ ವಿಶ್ವಾಸವಿಲ್ಲವಾಗುವಂತೆ ಮಾಡುವ (ಗ್ಯಾಸ್‌ಲೈಟಿಂಗ್), ಪುರುಷರ ವಿಶೇಷಾಧಿಕಾರವನ್ನು (ಎನ್‌ಟೈಟಲ್‌ಮೆಂಟ್) ಸೂಚಿಸುವ ಪದಗಳು ಜನರ ಗಮನವನ್ನು ಮಹಿಳೆಯರ ಕಸಿವಿಸಿಗೊಳ್ಳುವ ಅನುಭವಗಳಿಗೆ ಮಾತ್ರ ಸೀಮಿತಗೊಳಿಸದೆ ಅದಕ್ಕೆ ಕಾರಣವಾಗಿರುವ ಪುರುಷ ಪ್ರಧಾನ ಮೌಲ್ಯ ಸಂಹಿತೆಯತ್ತ ಸೆಳೆಯುತ್ತದೆ. ಪರಸ್ಪರ ಅನುಭವಗಳ ಹಂಚಿಕೆಯ ಮೂಲಕ ಮಹಿಳೆಯರು ಜೀವಂತ ಅನುಭವದ ಜ್ಞಾನವೊಂದನ್ನು ಸೃಷ್ಟಿಸುತ್ತಿದ್ದಾರೆ.

ಅವರ ಅಧಿಕಾರ ಹೀನ ಪರಿಸ್ಥಿತಿಯು ಅವರಿಗೆ, ಇತರರಿಗೆ ದಕ್ಕಲು ಸಾಧ್ಯವಿರದ, ಸಾಮಾಜಿಕ ವಾಸ್ತವವನ್ನು ಇನ್ನಷ್ಟು ವಿಶಾಲವಾಗಿ ಅರ್ಥಮಾಡಿಕೊಳ್ಳಬಲ್ಲ ವಿಶೇಷ ಜ್ಞಾನ ಪರಿಕರದ ಸೌಲಭ್ಯವನ್ನು ಒದಗಿಸಿದೆ. ಭಾರತದ ಸಂದರ್ಭದಲ್ಲಿ ಪಂಡಿತ ವಲಯದಲ್ಲಿ ಲೈಂಗಿಕ ಕಿರುಕುಳ ಕೊಡುತ್ತಿರುವವರ ಪಟ್ಟಿಯನ್ನು ‘ಮೀ ಟೂ’ ಚಳವಳಿ ಹೊರತಂದಿದೆ. ಇದೀಗ ಕೊನೆಯಿಲ್ಲದೆ ಹೆಚ್ಚುತ್ತಿರುವ ತುರ್ತುಕರೆಗಳು ಮತ್ತು ಆಗ್ರಹಗಳಿಂದಾಗಿ ಒಬ್ಬ ಸಂತ್ರಸ್ತ ಮಹಿಳೆಯು ಎಷ್ಟರ ಮಟ್ಟಿಗೆ ಕಾನೂನು ಪ್ರಕ್ರಿಯೆಗೆ ಒಳಪಡಬೇಕೆಂಬ ಬಗ್ಗೆ ಸ್ತ್ರೀವಾದಿಗಳು ಒಂದು ನಿಲುವು ತೆಗೆದುಕೊಳ್ಳುವುದನ್ನು ಕಡ್ಡಾಯ ಮಾಡುತ್ತಿದೆ. ಏಕೆಂದರೆ ಕಾನೂನು ಪ್ರಕ್ರಿಯೆಯು ನ್ಯಾಯವನ್ನು ಒದಗಿಸುವ ಭರವಸೆಯನ್ನು ಒದಗಿಸಿದರು ಕೂಡಾ ಅದೂ ಸಹ ಪಿತೃಸ್ವಾಮ್ಯ ಅಧಿಕಾರಭಾವಗಳಿಂದ ಹೊರತೇನಾಗಿಲ್ಲ. ಇಲ್ಲಿ ನಾನಾ ಪಾಟೇಕರ್ ದತ್ತಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಅಲ್ಲಿ ಫೋರ್ಡ್ ಅವರು ತಮ್ಮ ಹೇಳಿಕೆಯನ್ನು ನೀಡಿದ ನಂತರವೂ ಕವನಾವ್ ಅವರು ಅಮೆರಿಕದ ಸುಪ್ರೀಂ ಕೋರ್ಟಿಗೆ ನಾಮ ನಿರ್ದೇಶನಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ. ಹಾಗೆಯೇ ಇನ್ನೂ ಹಲವಾರು ಆರೋಪಿಗಳು ಕೂದಲೂ ಕೊಂಕದಂತೆ ಮಾಮೂಲು ಜೀವನಕ್ಕೆ ಮರಳುತ್ತಿರುವ ಸಂದರ್ಭದಲ್ಲಿ ತಮಗಾದ ಅನ್ಯಾಯಗಳನ್ನು ಬಹಿರಂಗವಾಗಿ ಹೊರಹಾಕಿದ ಈ ಚಳವಳಿಯ ಪರಿಣಾಮವನ್ನು ಹೇಗೆ ಅಳೆಯುವುದು? ಅದೇನೇ ಇದ್ದರೂ ಮಹಿಳೆಯರು ತಮಗಾದ ಅನ್ಯಾಯಗಳನ್ನು ಬಹಿರಂಗವಾಗಿ ಹೊರಹಾಕುವುದನ್ನು ಮುಂದುವರಿಸುತ್ತಿದ್ದಾರೆ ಮತ್ತು ತನ್ಮೂಲಕ ತಮ್ಮ ಅಂತಃಶಕ್ತಿ ಹಾಗೂ ತಿಳುವಳಿಕೆಯ ಮೇಲೆ ತಮ್ಮ ಹಕ್ಕನ್ನು ಪುನರ್‌ಸ್ಥಾಪಿಸುತ್ತಿದ್ದಾರೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News