ಭಾರತದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ: ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆ

Update: 2018-10-11 04:36 GMT

ಹೊಸದಿಲ್ಲಿ, ಅ. 11: ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದ ಆಶ್ವಾಸನೆಯೊಂದಿಗೆ ಅಧಿಕಾರದ ಗದ್ದುಗೆ ಹಿಡಿದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆಯೇ? ಹೌದು ಎನ್ನುತ್ತದೆ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆ ನಡೆಸಿದ ಇತ್ತೀಚಿನ ಸಮೀಕ್ಷೆ.

ಆನ್‌ಲೈನ್ ಪ್ಲಾಟ್‌ಫಾರಂ ಲೋಕಲ್ ಸರ್ಕಲ್ ಸಹಭಾಗಿತ್ವದಲ್ಲಿ ನಡೆಸಿದ ಈ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಭ್ರಷ್ಟಾಚಾರ ಗಣನೀಯವಾಗಿ ಹೆಚ್ಚಿದೆ. ಕಳೆದ ಒಂದು ವರ್ಷದಲ್ಲಿ ಲಂಚ ನೀಡಿದ್ದಾಗಿ ಶೇಕಡ 56ರಷ್ಟು ಮಂದಿ ಸಮೀಕ್ಷೆಯಲ್ಲಿ ಬಹಿರಂಗಪಡಿಸಿದ್ದಾರೆ. ಕಳೆದ ವರ್ಷದ ಸಮೀಕ್ಷೆಯಲ್ಲಿ ಶೇಕಡ 45ರಷ್ಟು ಮಂದಿ ಮಾತ್ರ ಲಂಚ ನೀಡಿದ್ದಾಗಿ ಒಪ್ಪಿಕೊಂಡಿದ್ದರು.

ಲಂಚ ವಿರೋಧಿ ಸಹಾಯವಾಣಿಯ ಲಭ್ಯತೆ ಬಗ್ಗೆ ಕೇಳಿದ ಮತ್ತೊಂದು ಪ್ರಶ್ನೆಗೆ, ಶೇಕಡ 91ರಷ್ಟು ಮಂದಿ, ತಮ್ಮ ರಾಜ್ಯಗಳಲ್ಲಿ ಅಂಥ ವ್ಯವಸ್ಥೆಯೇ ಇಲ್ಲ ಅಥವಾ ಇಂಥ ಸಹಾಯವಾಣಿ ಇರುವ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ನಾಗರಿಕರನ್ನು ಸೇರಿಸಿಕೊಳ್ಳುವ ಇಚ್ಛಾಶಕ್ತಿ ಸರ್ಕಾರಗಳಿಗೆ ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಇಂದಿಗೂ ನಗದು ರೂಪದಲ್ಲೇ ಲಂಚ ನೀಡುತ್ತಿರುವುದನ್ನು ಕೂಡಾ ಸಮೀಕ್ಷೆ ಬಹಿರಂಗಪಡಿಸಿದೆ. ಶೇಕಡ 39ರಷ್ಟು ಮಂದಿ ನಗದು ರೂಪದಲ್ಲಿ ಲಂಚ ನೀಡಿದ್ದಾಗಿ ಹೇಳಿದ್ದರೆ, ಶೇಕಡ 25ರಷ್ಟು ಮಂದಿ ಏಜೆಂಟರ ಮೂಲಕ ಹಾಗೂ ಶೇಕಡ 1ರಷ್ಟು ಮಂದಿ ವಸ್ತುರೂಪದಲ್ಲಿ ಲಂಚ ನೀಡಿದ್ದಾಗಿ ಬಹಿರಂಗಪಡಿಸಿದ್ದಾರೆ.

ಸಮೀಕ್ಷೆಯ ಪ್ರಕಾರ ಅತಿಹೆಚ್ಚು ಲಂಚಾವತಾರದ ಇಲಾಖೆಗಳೆಂದರೆ ಆಸ್ತಿ ನೋಂದಣಿ, ಪೊಲೀಸ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು. ಈ ಮೂರು ಇಲಾಖೆಗಳಲ್ಲಿ ಕ್ರಮವಾಗಿ ಶೇಕಡ 45, ಶೇಕಡ 25 ಮತ್ತು ಶೇಕಡ 18ರಷ್ಟು ಲಂಚ ಸ್ವೀಕರಿಸಲಾಗುತ್ತಿದೆ.

ಶೇಕಡ 14 ರಷ್ಟು ಮಂದಿ ಮಾತ್ರ ಲಂಚ ನೀಡದೇ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇಕಡ 29ರಷ್ಟು ಮಂದಿ ಒಂದು ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಲಂಚ ನೀಡಿದ್ದರೆ, ಶೇಕಡ 27ರಷ್ಟು ಮಂದಿ ಹಲವು ಬಾರಿ ಲಂಚ ನೀಡಿದ್ದಾರೆ. ಸರ್ಕಾರಗಳು ಭ್ರಷ್ಟಾಚಾರ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಶೇಕಡ 48ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಾಯ್ದೆಗಳಿಗೆ ಹೊಸದಾಗಿ ಮಾಡಿರುವ ತಿದ್ದುಪಡಿಗಳು ಕೂಡಾ ಯಾವುದೇ ಧನಾತ್ಮಕ ಪರಿಣಾಮ ಬೀರಿಲ್ಲ ಎನ್ನುವುದು ಶೇಕಡ 41ರಷ್ಟು ಮಂದಿಯ ಅಭಿಮತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News