‘ವರ್ಚುವಲ್ ಟಚ್’ ಬಗ್ಗೆ ಅಪ್ರಾಪ್ತ ವಯಸ್ಕರಲ್ಲಿ ಅರಿವು ಮೂಡಿಸಬೇಕಾಗಿದೆ : ದಿಲ್ಲಿ ಹೈಕೋರ್ಟ್

Update: 2024-05-07 15:59 GMT

ದಿಲ್ಲಿ ಹೈಕೋರ್ಟ್ | PC : PTI  

ಹೊಸದಿಲ್ಲಿ: ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ‘‘ಗುಡ್ ಟಚ್ (ಸದ್ಭಾವನೆಯುಳ್ಳ ಸ್ಪರ್ಶ) ಹಾಗೂ ‘‘ಬ್ಯಾಡ್ ಟಚ್ (ಕೆಟ್ಟ ಭಾವನೆಯುಳ್ಳ ಸ್ಪರ್ಶ) ಬಗ್ಗೆ ತಿಳಿಹೇಳಿದರಷ್ಟೇ ಸಾಕಾಗುವುದಿಲ್ಲ.ಈಗಿನ ವರ್ಚುವಲ್ (ಅಭೌತಿಕ) ಜಗತ್ತಿನಲ್ಲಿ ವರ್ಚುವಲ್ ಸ್ಪರ್ಶ ( ಇಂಟರ್ನೆಟ್,ಮೊಬೈಲ್ ಫೋನ್, ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಲ್ಪಡುವುದು)ದಂತಹ ನೂತನ ಗ್ರಹಿಕೆಗಳು ಹಾಗೂ ಅದರ ಸಂಭಾವ್ಯ ಅಪಾಯಗಳ ಬಗ್ಗೆ ಅವರಿಗೆ ಬೋಧಿಸಬೇಕಾದ ಅಗತ್ಯವಿದೆ ಎಂದು ದಿಲ್ಲಿ ಹೈಕೋರ್ಟ್ ತಿಳಿಸಿದೆ.

ಸಮರ್ಪಕವಾದ ಆನ್ ಲೈನ್ ನಡವಳಿಕೆಯ ಬಗ್ಗೆ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದು, ಬೇಟೆಗಾರಿಕೆ ಮನಸ್ಥಿತಿಯ ಲಕ್ಷಣಗಳನ್ನು ಗುರುತಿಸುವುದು ಹಾಗೂ ಅನ್ ಲೈನ್ನಲ್ಲಿ ಖಾಸಗಿತನ ಹಾಗೂ ಸಂಯಮವನ್ನು ಕಾಯ್ದುಕೊಳ್ಳುವ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಬೇಕೆಂದು ನ್ಯಾಯಾಲಯ ಹೇಳಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಹಾಗೂ ಆಕೆಯನ್ನು ಬಲವಂತವಾಗಿ ವೇಶ್ಯಾವೃತ್ತಿಗೆ ತಳ್ಳಲು ತನ್ನ ಪುತ್ರನಿಗೆ ನೆರವಾದ ಆರೋಪ ಎದುರಿಸುತ್ತಿರುವ ಕಮಲೇಶ್ ದೇವಿ ಸಲ್ಲಿಸಿದ ಜಾಮೀನು ಮನವಿಯನ್ನು ತಿರಸ್ಕರಿಸಿದ ಸಂದರ್ಭದಲ್ಲಿ ದಿಲ್ಲಿ ಹೈಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ರಾಜೀವ್ ಎಂಬಾತ ಸಾಮಾಜಿಕ ಜಾಲತಾಣದ ಮೂಲಕ 16 ವರ್ಷದ ಬಾಲಕಿಯ ಜೊತೆ ಸ್ನೇಹವನ್ನು ಬೆಳೆಸಿ, ತನ್ನನ್ನು ಭೇಟಿಯಾಗುವಂತೆ ಪುಸಲಾಯಿಸಿದ್ದ. ತನ್ನನ್ನು ಭೇಟಿಯಾಗಲು ಆಗಮಿಸಿದಾಗ ಆಕೆಯನ್ನು ಅಪಹರಿಸಿ ಮಧ್ಯಪ್ರದೇಶಕ್ಕೆ ಸಾಗಾಟ ಮಾಡಿದ್ದ. ಅಲ್ಲಿ ಆಕೆಯನ್ನು ಹಲವಾರು ದಿನ ಬಂಧನದಲ್ಲಿರಿಸಿದ್ದ. ರಾಜೀವ್ ಹಾಗೂ ಇತರರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು.

ಹಣಕ್ಕಾಗಿ ಆ ಬಾಲಕಿಯನ್ನು ಬಲವಂತವಾಗಿ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನೊಂದಿಗೆ ವಿವಾಹವಾಗುವಂತೆ ಬೆದರಿಕೆಯೊಡ್ಡಲಾಗಿತ್ತು ಎಂದು ಪ್ರಾಸಿಕ್ಯೂಶನ್ ಆಪಾದಿಸಿತ್ತು. ತನ್ನನ್ನು ಬಂಧನದಲ್ಲಿರಿಸಿದ್ದ ಜಾಗಕ್ಕೆ ಬೇರೆ ಬೇರೆ ಪುರುಷರನ್ನು ಕರೆತಂದು ತನ್ನನ್ನು ಬಲವಂತವಾಗಿ ವೇಶ್ಯಾವೃತ್ತಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಹದಿಹರೆಯ ಬಾಲಕಿ ದೂರಿನಲ್ಲಿ ತಿಳಿಸಿದ್ದರು.

ವಾಸ್ತವ ಜಗತ್ತಿನಲ್ಲಿ ಜಾಗರೂಕತೆಯಿಂದಿರುವಂತೆ ಮಕ್ಕಳಿಗೆ ಬೋಧಿಸಲಾಗುತ್ತಿರುವ ರೀತಿಯಲ್ಲಿಯೇ, ಆನ್ ಲೈನ್ ಸಂಪರ್ಕಗಳ ವಿಶ್ವಸನೀಯತೆಯ ಮೌಲ್ಯಮಾಪನ ಮಾಡುವ ಹಾಗೂ ಅವರ ಖಾಸಗಿ ದತ್ತಾಂಶವನ್ನು ಸಂರಕ್ಷಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಬಗ್ಗೆ ಅವರಿಗೆ ಶಿಕ್ಷಣವನ್ನು ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಇದಕ್ಕಿಂತಲೂ ಹೆಚ್ಚಾಗಿ ಮಕ್ಕಳಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಪೋಷಿಸುವಲ್ಲಿ ಹಾಗೂ ಆನ್ ಲೈನ್ನಲ್ಲಿ ಅಪ್ರಾಪ್ತ ವಯಸ್ಕ ಮಕ್ಕಳ ಜವಾಬ್ದಾರಿಯುತ ಆನ್ ಲೈನ್ ನಡವಳಿಕೆಯನ್ನು ಉತ್ತೇಜಿಸಲು ಪಾಲಕರು, ಪೋಷಕರು ಹಾಗೂ ಶಿಕ್ಷಕರು ನಿರ್ಣಾಯಕ ಪಾತ್ರವನ್ನು ವಹಿಸಬೇಕು. ಪ್ರಜ್ಞಾವಂತ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಆನ್ ಲೈನ್ ಬೆದರಿಕೆಗಳಿಂದ ರಕ್ಷಿಸಿಕೊಳ್ಳಲು ಮಕ್ಕಳನ್ನು ವಯಸ್ಕರು ಸಬಲೀಕರಣಗೊಳಿಸಬಹುದೆಂದು ದಿಲ್ಲಿ ಹೈಕೋರ್ಟ್ ತಿಳಿಸಿದೆ.

ಮಕ್ಕಳಲ್ಲಿ ಆನ್ ಲೈನ್ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಶಾಲೆಗಳು, ಕಾಲೇಜುಗಳು, ದಿಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ದಿಲ್ಲಿ ನ್ಯಾಯಾಂಗ ಅಕಾಡಮಿಗಳನಂತಹ ಪಾಲುದಾರಿಕೆಯ ಕಾರ್ಯಕ್ರಮಗಳು, ಕಮ್ಮಟಗಳು ಹಾಗೂ ಸಮಾವೇಶಗಳನ್ನು ನಡೆಸಬೇಕೆಂದು ನ್ಯಾಯಾಲಯವು ಆದೇಶದಲ್ಲಿ ಸಲಹೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News