ವಸಂತ್ ಕುಂಜ್ ನಲ್ಲಿ ತ್ರಿವಳಿ ಕೊಲೆ ಪ್ರಕರಣ: 19 ವರ್ಷದ ಪುತ್ರನೇ ಹೆತ್ತವರು, ಸೋದರಿಯನ್ನು ಹತ್ಯೆ ಮಾಡಿದ್ದ !

Update: 2018-10-11 05:52 GMT
ಮಿಥಿಲೇಶ್ - ಸಿಯಾ

ಹೊಸದಿಲ್ಲಿ, ಅ. 11: ರಾಜಧಾನಿಯ ವಸಂತ್ ಕುಂಜ್ ಪ್ರದೇಶದ ಮನೆಯೊಂದರಲ್ಲಿ ವಾಸವಾಗಿದ್ದ ದಂಪತಿ ಮತ್ತವರ ಹದಿಹರೆಯದ ಪುತ್ರಿಯ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಕುಟುಂಬದ ನಾಲ್ಕನೇ ಸದಸ್ಯ, ದಂಪತಿಯ 19 ವರ್ಷದ ಪುತ್ರನನ್ನು ಬಂಧಿಸಿದ್ದಾರೆ.

ಮನೆಗೆ ದರೋಡೆಕೋರರು ನುಗ್ಗಿ ಹೆತ್ತವರನ್ನು ಹಾಗೂ ತಂಗಿಯನ್ನು ಕೊಚ್ಚಿ ಕೊಂದಿದ್ದಾರೆಂದು ಕಥೆ ಕಟ್ಟಿದ್ದ 19 ವರ್ಷದ ಸೂರಜ್ ವರ್ಮಾನ ಕೈಬೆರಳಿಗೆ ಮಾತ್ರ ಗಾಯವಾಗಿದ್ದನ್ನು ಕಂಡು ಸಂಶಯಗೊಂಡ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ನಿಜ ಬಾಯ್ಬಿಟ್ಟಿದ್ದ.

ಕಲಿಯುವುದರಲ್ಲಿ ಹಿಂದುಳಿದಿರುವುದಕ್ಕಾಗಿ, ಆಗಾಗ ಕಾಲೇಜು ತಪ್ಪಿಸುತ್ತಿರುವುದಕ್ಕಾಗಿ ಹಾಗೂ ಇತ್ತೀಚೆಗೆ ಗಾಳಿಪಟ ಹಾರಿಸುತ್ತಾ ಸಮಯ ವ್ಯರ್ಥಗೊಳಿಸುತ್ತಿರುವುದಕ್ಕೆ ಹೆತ್ತವರಿಂದ ತೀವ್ರ ತರಾಟೆಗೆ ಗುರಿಯಾಗಿದ್ದ ಸೂರಜ್ ಇದರಿಂದ ಬೇಸತ್ತು  ಹಾಗೂ ಆ.15ರಂದು ಗಾಳಿಪಟ ಹಾರಿಸಿದ್ದಕ್ಕಾಗಿ ತಂದೆ ಮಿಥಿಲೇಶ್ ವರ್ಮ ತನಗೆ ಹೊಡೆದಿದ್ದಕ್ಕಾಗಿ ಅವರಿಗೆ ಪಾಠ ಕಲಿಸಲು ಈ ರೀತಿ ಮಾಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಗೆಳೆಯರೊಂದಿಗೆ ಹೊರ ಹೋಗಿದ್ದ ಸೂರಜ್ ವಾಪಸ್ ಬರುವಾಗ ಚೂರಿ ಮತ್ತು ಒಂದು ಜತೆ ಕತ್ತರಿ ಖರೀದಿಸಿದ್ದ. ಆ ದಿನ ಮಧ್ಯ ರಾತ್ರಿ ತನಕ ಹೆತ್ತವರೊಂದಿಗೆ ಫೋಟೋ ಆಲ್ಬಂ ನೋಡುತ್ತಾ ಸಮಯ ಕಳೆದಿದ್ದ. ಮುಂಜಾವು 3 ಗಂಟೆಗೆ ಎದ್ದು ನೇರವಾಗಿ ಹೆತ್ತವರ ಕೊಠಡಿಗೆ ನುಗ್ಗಿ ಮಲಗಿದ್ದ ತಂದೆ  ಮಿಥಿಲೇಶ್ (44) ಅವರ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಹಲವಾರು ಬಾರಿ ಇರಿದಿದ್ದ. ಆಗ ಎಚ್ಚರಗೊಂಡ ತಾಯಿ ಸಿಯಾ (38) ಬೊಬ್ಬಿಟ್ಟಾಗ ಆಕೆಗೂ ಇರಿದಿದ್ದ. ನಂತರ ತನ್ನ 15 ವರ್ಷದ ಸೋದರಿಯ ಕೊಠಡಿಗೆ ತೆರಳಿದ ಆತ ಆಕೆಯ ಕತ್ತು ಸೀಳಿದ್ದ. ಆಗ ತೀವ್ರ ಗಾಯಗೊಂಡಿದ್ದ ಸಿಯಾ ಪುತ್ರಿಯನ್ನು ರಕ್ಷಿಸಲು ಯತ್ನಿಸಿದರೂ ಮತ್ತೆ ತಾಯಿಗೆ ಸತತವಾಗಿ ಇರಿದು ಕೊಂದಿದ್ದ. ನಂತರ ಇಡೀ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿ ಚೂರಿಯನ್ನು ತೊಳೆದು ಅದರಲ್ಲಿದ್ದ ಬೆರಳಚ್ಚು ಅಳಿಸಿ ಹಾಕಿದ್ದ. ಸುಮಾರು ಎರಡು ಗಂಟೆ ಕಾದು ನಂತರ ಮನೆಗೆ ಕಳ್ಳರು ನುಗ್ಗಿದ್ದಾರೆಂದು ಬೊಬ್ಬೆ ಹಾಕಿ ನೆರೆಹೊರೆಯವರನ್ನು ಎಚ್ಚರಿಸಿದ್ದ.

ಆದರೆ ಪೊಲೀಸರು ಆತನ ಕಳ್ಳರ ಕಥೆಯನ್ನು ನಂಬಲು ಸಿದ್ಧರಿರಲಿಲ್ಲ, ಮನೆಯಲ್ಲಿನ ಯಾವುದೇ ಬೆಲೆಬಾಳುವ ವಸ್ತುವೂ ಕಳ್ಳತನವಾಗಿರಲಿಲ್ಲ. ಮೂವರನ್ನು ಕೊಚ್ಚಿ ಕೊಂದಿದ್ದ ಕಳ್ಳರು ಸೂರಜ್‍ನಿಗೆ ಅಪಾಯ ಏಕೆ ಉಂಟು ಮಾಡಿರಲಿಲ್ಲ ಎಂಬ ಪ್ರಶ್ನೆಯೂ ಇತ್ತು. ಫೊರೆನ್ಸಿಕ್ ತಜ್ಞರು ಪರಿಶೀಲಿಸಿದಾಗ ಸೂರಜ್ ಶೌಚಾಲಯದಲ್ಲಿ ರಕ್ತದ ಕಲೆಗಳನ್ನು ಒರೆಸಿದ್ದು ಹಾಗೂ ಚೂರಿಯನ್ನು ತೊಳೆದಿದ್ದು ತಿಳಿದು ಬಂದಿತ್ತು.

ಕೆಲ ವರ್ಷಗಳ ಹಿಂದೆ ತನ್ನ ಅಪಹರಣದ ಕಟ್ಟು ಕಥೆಯನ್ನು ಸೃಷ್ಟಿಸಿ ಸೂರಜ್ ಸಿಕ್ಕಿ ಬಿದ್ದಿದ್ದ. ಹನ್ನೆರಡನೇ ತರಗತಿಯಲ್ಲಿ ಫೇಲ್ ಆಗಿದ್ದ ಆತನನ್ನು ತಂದೆ ಗುರ್ಗಾಂವ್‍ನ ಖಾಸಗಿ ಸಂಸ್ಥೆಗೆ ಸೇರಿಸಿ ಆತ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಮಾಡಿ ತನ್ನ ಗುತ್ತಿಗೆದಾರ ವೃತ್ತಿಗೆ ನೆರವಾಗಬಹುದೆಂದು ಅಂದುಕೊಂಡಿದ್ದರು. ಆದರೆ ತಂದೆ ತಮ್ಮ ಹೊಸ ಮನೆಯ ನಿರ್ಮಾಣ ಉಸ್ತುವಾರಿ ನೋಡಿಕೊಳ್ಳಲು ತನಗೆ ಹೇಳಿದ್ದರಿಂದ ಫೇಲ್ ಆಗಿದ್ದೆ ಎಂದು ಸೂರಜ್ ತಿಳಿದುಕೊಂಡಿದ್ದ.

ತನ್ನ ಬಗ್ಗೆ ತಂಗಿ ಹೆತ್ತವರಿಗೆ ಹಲವು ಬಾರಿ ದೂರಿದ್ದಳೆಂದು ಆಕೆಯ ಮೇಲೂ ಸೂರಜ್ ಸಿಟ್ಟು ಹೊಂದಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News