ರಫೇಲ್ ಒಪ್ಪಂದ: ಮೋದಿ ವಿರುದ್ಧ ಶತ್ರುಘ್ನ ಸಿನ್ಹಾ ವಾಗ್ದಾಳಿ

Update: 2018-10-12 03:44 GMT

ಲಕ್ನೋ, ಅ.12: "ರಫೇಲ್ ಹಗರಣದ ಬಗ್ಗೆ ಜನ ಸರ್ಕಾರದಿಂದ ಉತ್ತರ ಬಯಸಿದ್ದಾರೆ. ಈ ಒಪ್ಪಂದದ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ಕಡೆಗಣಿಸುವುದರಿಂದ ಸಮಸ್ಯೆ ಪರಿಹಾರವಾಗದು" ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಈ ಒಪ್ಪಂದದ ಬಗ್ಗೆ ವಿರೋಧ ಪಕ್ಷಗಳು, ಕೇಂದ್ರದ ಮೇಲೆ ಆರೋಪಗಳ ಸುರಿಮಳೆ ಮಾಡಿರುವ ಬೆನ್ನಲ್ಲೇ ಆಡಳಿತ ಪಕ್ಷದ ಸಂಸದರೇ ಸರ್ಕಾರವನ್ನು ಟೀಕಿಸಿರುವುದು ಬಿಜೆಪಿಗೆ ತೀವ್ರ ಮುಜುಗರ ತಂದಿದೆ.

ಲೋಕಮಾನ್ಯ ಜನಪ್ರಕಾಶ್ ನಾರಾಯಣ್ ಅವರ ಜನ್ಮದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಪೂರ್ಣ ಕ್ರಾಂತಿಗೆ ಕರೆ ನೀಡಿದರು. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಸಂಸ್ಥೆಯನ್ನು ಮೂಲೆಗುಂಪು ಮಾಡಿ, ಡಸ್ಸಾಲ್ಟ್ ಏವಿಯೇಶನ್ ಯುದ್ಧ ವಿಮಾನ ಉತ್ಪಾದನೆಗಾಗಿ ಖಾಸಗಿ ವಲಯದ ಕಂಪನಿ ಜತೆ ಕೈಜೋಡಿಸಲು ಅನುಕೂಲ ಮಾಡಿಕೊಟ್ಟಿರುವುದೇಕೆ ಎಂದು ಸಿನ್ಹಾ ಪ್ರಶ್ನಿಸಿದರು.

"ರಫೇಲ್ ಒಪ್ಪಂದದ ಬಗ್ಗೆ ಸಾರ್ವಜನಿಕರು ಉತ್ತರ ಬಯಸಿದ್ದಾರೆ. ನೀವು ಈಗ ಮಾತನಾಡಲೇಬೇಕು. ಕೇವಲ ಅದನ್ನು ಕಡೆಣಿಸಿದರೆ ಆಗದು. ಎಂಐಜಿ ಮತ್ತು ಸುಖೋಯ್ ಯುದ್ಧ ವಿಮಾನಗಳ ಉತ್ಪಾದನೆಯಲ್ಲಿ ಅನುಭವ ಹೊಂದಿದ್ದ ಎಚ್‌ಎಎಲ್ ಸಂಸ್ಥೆಯನ್ನು ಕಡೆಗಣಿಸಿ, ಕೇವಲ 10 ದಿನ ಹಳೆಯ, ಶೂನ್ಯ ಅನುಭವ ಮತ್ತು ಶೂನ್ಯ ಬ್ಯಾಲೆನ್ಸ್ ಹೊಂದಿದ್ದ ಕಂಪನಿಗೆ ಕೆಲಸ ವಹಿಸಿರುವುದೇಕೆ ಎಂಬ ಬಗ್ಗೆ ಸ್ಪಷ್ಟನೆ ನೀಡಿ" ಎಂದು ಆಗ್ರಹಿಸಿದರು.

"ಅಧಿಕಾರ ಇರುವುದು ಜನ ಸೇವೆ ಮಾಡಲು; ಅದರ ಪ್ರತಿಫಲವನ್ನು ಪಡೆಯುವ ಸಲುವಾಗಿ ಅಲ್ಲ" ಎಂದು ಚುಚ್ಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News