ಆತ್ಮಹತ್ಯೆಗೆ ಶರಣಾದ ಶಂಕರ್ ಐಎಎಸ್ ಅಕಾಡಮಿ ಸ್ಥಾಪಕ

Update: 2018-10-12 10:01 GMT

ಚೆನ್ನೈ, ಅ.12: ಚೆನ್ನೈನ ಖ್ಯಾತ ಶಂಕರ್ ಐಎಎಸ್ ಅಕಾಡಮಿಯ ಸ್ಥಾಪಕ ಮತ್ತು ಸಿಇಒ ಆಗಿದ್ದ ಶಂಕರ್ ದೇವರಾಜನ್ ಅವರು ಮೈಲಾಪುರದಲ್ಲಿನ ತಮ್ಮ ಮನೆಯಲ್ಲಿ ಶುಕ್ರವಾರ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಯಕ್ತಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ.

ನಲ್ವತ್ತೈದು ವರ್ಷದ ಪ್ರೊ.ಶಂಕರ್ ಮಹದೇವನ್ ನೇಣಿಗೆ ಶರಣಾಗಿರುವುದನ್ನು ನೋಡಿದ ಕುಟುಂಬ ಸದಸ್ಯರು ಅವರನ್ನು ಕೂಡಲೇ ಮೈಲಾಪುರದ ಸೈಂಟ್ ಇಸಬೆಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು. ಇದೀಗ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರೋಯ ಪೆಟ್ಟಾಹ್ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಅವರು ಸ್ಥಾಪಿಸಿದ ಅಕಾಡಮಿ 2004ರಿಂದ 900ಕ್ಕೂ ಅಧಿಕ ಐಎಎಸ್ ಅಧಿಕಾರಿಗಳನ್ನು ತಯಾರಿಸಿದ ಖ್ಯಾತಿಯನ್ನು ಹೊಂದಿದೆ.
ತಮಿಳುನಾಡಿನಲ್ಲಿ ಇಂತಹ ಐಎಎಸ್ ತರಬೇತಿ ಅಕಾಡಮಿಯನ್ನು ಪ್ರಥಮ ಬಾರಿಗೆ ಸ್ಥಾಪಿಸಿದ ಖ್ಯಾತಿ ಅವರಿಗೆ ಸಂದಿತ್ತು. ಅವರು ಈ ಅಕಾಡಮಿ ಸ್ಥಾಪಿಸಿದ ದಿನಗಳಲ್ಲಿ ಹೆಚ್ಚಿನ ಕೋಚಿಂಗ್ ಸಂಸ್ಥೆಗಳು ದಿಲ್ಲಿ ಮತ್ತು ಕೊಲ್ಕತ್ತಾದಲ್ಲಿ ಮಾತ್ರ ಇದ್ದವು.

ಅವರ ಆತ್ಮಹತ್ಯೆ ಜನರಲ್ಲಿ ಆಘಾತ ಸೃಷ್ಟಿಸಿದೆ. ಕೃಷ್ಣಗಿರಿ ಜಿಲ್ಲೆಯ ಕೃಷಿ ಕುಟುಂಬದಿಂದ ಬಂದವರಾಗಿದ್ದ ಪ್ರೊ.ಶಂಕರ್ ಅವರ ತಂದೆ ಅವರು ಚಿಕ್ಕವರಿರುವಾಗಲೇ ಮೃತಪಟ್ಟಿದ್ದರು. ಶಂಕರ್ ಕೃಷಿಯಲ್ಲಿ ಶಿಕ್ಷಣ ಪಡೆದಿದ್ದರು. ಮುಂದೆ ಅವರು ಕೇಂದ್ರ ಲೋಕ ಸೇವಾ ಆಯೋಗ ಪರೀಕ್ಷೆಗೆ ಹಾಜರಾಗ ಬಯಸಿದ್ದರೂ ವಯೋಮಿತಿ ಅವರಿಗೆ ಅಡ್ಡಿಯಾಗಿತ್ತು. ನಂತರ ಐಎಎಸ್ ಆಕಾಂಕ್ಷಿಗಳಿಗೆ ಅವರು ಈ ಅಕಾಡಮಿ ಸ್ಥಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News