ಯೂತ್ ಒಲಿಂಪಿಕ್ಸ್: ಲಕ್ಷ್ಯ ಸೇನ್ ಪೈನಲ್‌ಗೆ

Update: 2018-10-12 18:53 GMT

ಬ್ಯುನಸ್ ಐರಿಸ್, ಅ.12: ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಲಕ್ಷ ಸೇನ್ ಯೂತ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿದ್ದಾರೆ.

 ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೇನ್ ಅವರು ಜಪಾನ್‌ನ ಕೊಡಾಯ್ ನಾರಾವೊಕಾ ವಿರುದ್ಧ 14-21, 21-15, 24-22 ಅಂತರದಲ್ಲಿ ಜಯ ಗಳಿಸಿ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದರು. 36 ನಿಮಿಷಗಳಲ್ಲಿ ಸೆಮಿಫೈನಲ್ ಪಂದ್ಯ ಮುಕ್ತಾಯಗೊಂಡಿತು.

ಫೈನಲ್‌ನಲ್ಲಿ ಸೇನ್ ಅವರು ಚೀನಾದ ಲಿ ಶಿಫೆಂಗ್‌ರನ್ನು ಎದುರಿಸಲಿದ್ದಾರೆ. ಸೇನ್ ಫೈನಲ್‌ನಲ್ಲಿ ಚಿನ್ನ ಜಯಿಸಿದರೆ ಯೂತ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.

2010ರಲ್ಲಿ ಸಿಂಗಾಪುರದಲ್ಲಿ ನಡೆದ ಮೊದಲ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರಣಯ್ ಕುಮಾರ್ ಬೆಳ್ಳಿ ಗೆದ್ದುಕೊಂಡಿದ್ದರು.

ಮನು ಭಾಕರ್‌ಗೆ ಬೆಳ್ಳಿ

ಭಾರತ ಶೂಟರ್ ಮನು ಭಾಕರ್ ಮತ್ತು ತಜಕಿಸ್ತಾನದ ಬೆಹ್‌ಝಾನ್ ಫಯಾಝುಲ್ಲಾವ್ ಯೂತ್ ಒಲಿಂಪಿಕ್ಸ್‌ನ 10 ಮೀಟರ್ ಏರ್ ಪಿಸ್ತೂಲ್ ಮಿಕ್ಸೆಡ್ ಇಂಟರ್‌ನ್ಯಾಶನಲ್ ಸ್ಪರ್ಧೆಯಲ್ಲಿ ಶುಕ್ರವಾರ ಬೆಳ್ಳಿ ಜಯಿಸಿದರು. ಜರ್ಮನಿಯ ವಾನೆಸ್ಸಾ ಸೀಗೆರ್ ಮತ್ತು ಬಲ್ಗೇರಿಯಾದ ಕಿರಿಲ್ ಕಿರೊವ್ ವಿರುದ್ಧ 3-10 ಅಂತರದಲ್ಲಿ ಸೋತು ಬೆಳ್ಳಿ ಪಡೆದರು.

ಮಹಿಳಾ ಹಾಕಿಯಲ್ಲಿ ಭಾರತ ಕ್ವಾರ್ಟರ್ ಪೈನಲ್‌ಗೆ

ಯೂತ್ ಒಲಿಂಪಿಕ್ಸ್‌ನ ಹಾಕಿಯಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 5-2 ಅಂತರದಲ್ಲಿ ಜಯ ಗಳಿಸಿದ ಭಾರತದ ವನಿತಾ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

  ಇದರೊಂದಿಗೆ ಭಾರತ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕನೇ ಜಯ ಗಳಿಸಿದೆ. ಒಟ್ಟು 12 ಪಾಯಿಂಟ್ಸ್ ದಾಖಲಿಸಿ ಬಿ’ ಗ್ರೂಪ್‌ನಲ್ಲಿ ಎರಡನೇ ಸ್ಥಾನದೊಂದಿಗೆ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದೆ. ಭಾರತದ ಪರ ಮುಮ್ತಝ್ ಖಾನ್(2ನೇ, 17ನೇ ನಿಮಿಷ), ರೀಟಾ (10ನೇ ನಿ), ಲಾಲ್ರೆಸ್ಮಿಯಾಮಿ(12ನೇ ನಿ.) ಮತ್ತು ಇಶಿಕಾ ಚೌಧರಿ (13ನೇ ನಿ.) ಗೋಲು ಬಾರಿಸಿ ಭಾರತದ ಗೆಲುವಿಗೆ ನೆರವಾದರು.

ದಕ್ಷಿಣ ಆಫ್ರಿಕದ ಕೈಲಾ ಡಿ ವಾಲ್ (10ನೇ ನಿ) ಮತ್ತು ಏಂಜೆಲಾ ವೆಲ್‌ಹ್ಯಾಮ್(19ನೇ ನಿ) ಗೋಲು ಜಮೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News