ಮೋದಿ, ವಿಷ್ಣುವಿನ 11ನೇ ಅವತಾರ ಎಂದ ಬಿಜೆಪಿ ವಕ್ತಾರ

Update: 2018-10-13 05:31 GMT

ಮುಂಬೈ, ಅ. 13: ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷ್ಣುವಿನ 11ನೇ ಅವತಾರ ಎಂದು ಮಹಾರಾಷ್ಟ್ರ ಬಿಜೆಪಿ ವಕ್ತಾರ ಅವಧೂತ್ ವಾಘ್ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ವಿರೋಧ ಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಇದು ದೇವರಿಗೆ ಮಾಡಿದ ಅವಮಾನ ಎಂದು ಟೀಕಿಸಿದೆ.

"ಗೌರವಾನ್ವಿತ ನರೇಂದ್ರ ಮೋದಿಯವರು ವಿಷ್ಣುವಿನ 11ನೇ ಅವತಾರ" ಎಂದು ಅವಧೂತ್ ಟ್ವೀಟ್ ಮಾಡಿದ್ದರು. ಬಳಿಕ ಮರಾಠಿ ಚಾನಲ್ ಜತೆ ಮಾತನಾಡಿದ ಅವರು, "ದೇವರಂಥ ಮೋದಿಯನ್ನು ಪಡೆಯಲು ದೇಶ ಪುಣ್ಯ ಮಾಡಿರಬೇಕು" ಎಂದು ಹೇಳಿದರು.

ಈ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ವಕ್ತಾರ ಅತುಲ್ ಲೋಂಡೆ, "ಇದು ದೇವರಿಗೆ ಮಾಡಿದ ಅವಮಾನ" ಎಂದು ಹೇಳಿದ್ದಾರೆ. ವಾಘ್ ಕಳೆದು ಕೊಂಡಿರುವ ರಾಜಕೀಯ ನೆಲೆಯನ್ನು ಮರಳಿ ಪಡೆಯುವ ಪ್ರಯತ್ನ ಇದು. ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಇದು ಬಿಜೆಪಿಯ ಕೀಳುಮಟ್ಟದ ಸಂಸ್ಕೃತಿಯ ಪ್ರತಿಬಿಂಬ ಎಂದು ಅವರು ಟೀಕಿಸಿದ್ದಾರೆ. ಎನ್‌ಸಿಪಿ ಶಾಸಕ ಜಿತೇಂದ್ರ ಅಹ್ವಾದ್ ಕೂಡಾ ಈ ಹೇಳಿಕೆಯನ್ನು ಖಂಡಿಸಿದ್ದಾರೆ.

"ವಾಘ್ ಅವರು ವೀರಮಾತೆ ಜೀಜಾಬಾಯಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪದವೀಧರ. ಅವರು ಇಂಥ ಹೇಳಿಕೆ ನೀಡುತ್ತಾರೆ ಎಂದಾದರೆ, ಅವರ ಪದವಿ ಪ್ರಮಾಣಪತ್ರದ ನೈಜತೆ ಬಗ್ಗೆಯೇ ಅನುಮಾನ ಬರುತ್ತದೆ" ಎಂದು ಜಿತೇಂದ್ರ ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News