ಡಿಎಂಕೆ ಜತೆ ಮೈತ್ರಿ ಮುರಿದರೆ ಕಾಂಗ್ರೆಸ್ ಜತೆ ಕೈಜೋಡಿಸುತ್ತೇನೆ: ಕಮಲ ಹಾಸನ್

Update: 2018-10-13 09:26 GMT

ಚೆನ್ನೈ, ಅ. 13: ಕಾಂಗ್ರೆಸ್ ಪಕ್ಷ ಡಿಎಂಕೆ ಜತೆಗಿನ ತನ್ನ ಮೈತ್ರಿಯನ್ನು ಮುರಿದಿದ್ದೇ ಆದಲ್ಲಿ ತಮ್ಮ 'ಮಕ್ಕಳ್ ನೀಧಿ ಮೈಯ್ಯಮ್' ಪಕ್ಷ  ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಜತೆ ಕೈಜೋಡಿಸಲು ಸಿದ್ಧವಿದೆ ಎಂದು ನಟ ಹಾಗೂ ರಾಜಕಾರಣಿ ಕಮಲ ಹಾಸನ್ ಹೇಳಿದ್ದಾರೆ.

ಫೆಬ್ರವರಿಯಲ್ಲಿ ತಮ್ಮ ಹೊಸ ಪಕ್ಷ ಸ್ಥಾಪಿಸಿದ್ದ ಕಮಲ್ ಹಾಸನ್ ರಾಜ್ಯ ಹಾಗೂ ಕೇಂದ್ರ ಸರಕಾರದ ಕಟು ಟೀಕಾಕಾರರಾಗಿ ಗುರುತಿಸಲ್ಪಟ್ಟಿದ್ದಾರೆ. ತಂತಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ''ಡಿಎಂಕೆ-ಕಾಂಗ್ರೆಸ್ ಮೈತ್ರಿ ಮುರಿದರೆ, ನಾನು ಕಾಂಗ್ರೆಸ್ ಜತೆ 2019ರ ಚುನಾವಣೆಗೆ ಕೈ ಜೋಡಿಸಲು ಸಿದ್ಧ, ನಮ್ಮ ಮೈತ್ರಿಯಿಂದ ತಮಿಳುನಾಡಿನ ಜನರಿಗೆ ಲಾಭವಿದೆಯೆಂಬುದನ್ನು ಕಾಂಗ್ರೆಸ್ ಜತೆ ಮಾತನಾಡಿ ಖಚಿತ ಪಡಿಸಲು ಇಚ್ಛಿಸುತ್ತೇನೆ'' ಎಂದು ಹೇಳಿದ್ದಾರೆ.

ಜೂನ್ ತಿಂಗಳಲ್ಲಿ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ತಮಿಳುನಾಡು ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಿದ್ದ ಕಮಲ್ ನಂತರ ಸುದ್ದಿಗಾರರ ಜತೆ ಮಾತನಾಡುತ್ತಾ ''ನಾವು ರಾಜಕೀಯದ ಬಗ್ಗೆ ಚರ್ಚಿಸಿದೆವು, ಆದರೆ ನೀವು ಎಣಿಸಿದ ರೀತಿಯಲ್ಲಲ್ಲ'' ಎಂದಿದ್ದರು.

ಆದರೆ ಡಿಎಂಕೆ ವಿರುದ್ಧ ಕಮಲ್ ಬಹಿರಂಗವಾಗಿ ಮಾತನಾಡಿದ್ದು ಇದೇ ಮೊದಲು. ''ನಮ್ಮ ಪಕ್ಷ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು. ಕಳಂಕಿತ ಯಾವುದೇ ಪಕ್ಷದ ಜತೆ ನಾನು ಕೈಜೋಡಿಸುವುದಿಲ್ಲ. ಡಿಎಂಕೆ ಹಾಗೂ ಎಐಎಡಿಎಂಕೆ ಎರಡೂ ಭ್ರಷ್ಟ ಪಕ್ಷಗಳಾಗಿವೆ. ಈ ಎರಡೂ ಪಕ್ಷಗಳನ್ನು ತಮಿಳು ನಾಡಿನಲ್ಲಿ ಸೋಲಿಸಲು ನಾವು ಶ್ರಮ ಪಡುತ್ತೇವೆ'' ಎಂದಿದ್ದಾರೆ.

ತಾವು ನಟನೆ ನಿಲ್ಲಿಸಿ ತಮಿಳುನಾಡಿನ ಜನರ ಕಲ್ಯಾಣಕ್ಕಾಗಿ ಶ್ರಮಿಸುವುದಾಗಿ ಈ ಹಿಂದೆ ಹೇಳಿದ್ದ ಕಮಲ್, ಶುಕ್ರವಾರದ ಸಂದರ್ಶನದಲ್ಲಿ ತಮ್ಮ 1992ರ ಹಿಟ್ ಚಿತ್ರ 'ತೇವರ್ ಮಗನ್' ಇದರ ಎರಡನೇ ಭಾಗದಲ್ಲಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News