ಝ್ವರೆವ್‌ಗೆ ಆಘಾತ ನೀಡಿದ ಜೊಕೊವಿಕ್ ಪೈನಲ್‌ಗೆ

Update: 2018-10-13 19:15 GMT

ಶಾಂಘೈ, ಅ.13: ಜರ್ಮನಿಯ ಅಲೆಕ್ಸಾಂಡರ್ ಝ್ವರೆವ್‌ರನ್ನು 6-2, 6-1 ಸೆಟ್‌ಗಳ ಅಂತರದಿಂದ ಮಣಿಸಿದ ನೊವಕ್ ಜೊಕೊವಿಕ್ ಇಲ್ಲಿ ನಡೆದ ಶಾಂಘೈ ಮಾಸ್ಟರ್ಸ್ ಅಂತಿಮ ಸುತ್ತಿಗೆ ತಲುಪಿದ್ದಾರೆ. ಈ ಗೆಲವಿನ ಮೂಲಕ ಜೊಕೊವಿಕ್, ರೋಜರ್ ಫೆಡರರ್‌ನ ಅಗ್ರ ಶ್ರೇಯಾಂಕಕ್ಕೆ ಅಪಾಯ ತಂದೊಡ್ಡಿದ್ದಾರೆ. ನಿರಂತರ 16 ಎಟಿಪಿ ಪಂದ್ಯಗಳನ್ನು ಜಯಿಸಿರುವ ಸರ್ಬಿಯದ 31ರ ಹರೆಯದ ಜೊಕೊವಿಕ್‌ರನ್ನು ಟೆನಿಸ್‌ನ ಉದಯೋನ್ಮುಖ ತಾರೆ ಜರ್ಮನಿಯ ಅಲೆಕ್ಸಾಂಡರ್ ಝ್ವರೆವ್ ಕಳೆದ ವರ್ಷ ರೋಮ್ ಮಾಸ್ಟರ್ಸ್ ಫೈನಲ್‌ನಲ್ಲಿ ಸೋಲಿಸಿದ್ದರು. ಆದರೆ ಈ ಬಾರಿ ಆರಂಭದಲ್ಲೇ ಎಡವಿದ ಝ್ವರೆವ್ ತನ್ನ ಮೊದಲ ಸರ್ವಿಸ್ ಗೇಮನ್ನು ಡಬಲ್ ಫಾಲ್ಟ್‌ನಿಂದ ಆರಂಭಿಸಿದರು. ಆದರೆ ಮತ್ತೊಂದೆಡೆ ಗೆಲ್ಲಬೇಕೆಂಬ ಹಠಕ್ಕೆ ಬಿದ್ದವರಂತೆ ಕಂಡುಬಂದ ಜೊಕೊವಿಕ್ ತನ್ನ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದರು. ಅದ್ಭುತ ಪ್ರತಿಭೆಯನ್ನು ಹೊಂದಿದ್ದರೂ ಈವರೆಗೆ ಒಂದೂ ಗ್ರಾಂಡ್ ಸ್ಲಾಮ್ ಜಯಿಸಲಾಗದ ಝ್ವರೆವ್ ಒಂದು ಹಂತದಲ್ಲಿ ಹತಾಶರಾಗಿ ತನ್ನ ರ್ಯಾಕೆಟನ್ನು ನೆಲಕ್ಕೆಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪದೇಪದೆ ತನ್ನ ಕೋಪವನ್ನು ವ್ಯಕ್ತಪಡಿಸುತ್ತಿದ್ದ ಜರ್ಮನಿಯ ಆಟಗಾರನಿಗೆ ರೆಫ್ರಿ ಎಚ್ಚರಿಕೆಯನ್ನೂ ನೀಡಬೇಕಾಗಿ ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News