ಪಾಕ್- ಪಂಜಾಬಿ ಸಂಸ್ಕೃತಿಯಲ್ಲಿ ಸಾಮ್ಯತೆ ಇದೆ ಎಂದ ಸಿಧು

Update: 2018-10-14 08:37 GMT

ಚಂಡೀಗಢ, ಅ.14: ಪಂಜಾಬಿ ಸಂಸ್ಕೃತಿ ಮತ್ತು ಪಾಕ್ ಸಂಸ್ಕೃತಿ ನಡುವೆ ಸಾಮ್ಯತೆ ಇದೆ ಎಂದು ಹೇಳುವ ಮೂಲಕ ಪಂಜಾಬ್ ಸಚಿವ ಹಾಗೂ ಮಾಜಿ ಕ್ರಿಕೆಟಿಗ ನವಜ್ಯೋತ್ ಸಿಂಗ್ ಸಿಧು ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

ಕಸೌಲಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಎರಡೂ ಸ್ಥಳಗಳ ಸಂಸ್ಕೃತಿ ಒಂದೇ ಆಗಿದೆ ಎಂದು ವಿಶ್ಲೇಷಿಸಿದರು.

"ನಾನು ತಮಿಳುನಾಡಿಗೆ ಹೋದಾಗ ಅಲ್ಲಿನ ಭಾಷೆ ಅರ್ಥವಾಗುವುದಿಲ್ಲ. ಒಂದೆರಡು ಶಬ್ದಗಳು ಮಾತ್ರ ಅರ್ಥವಾಗುತ್ತವೆ. ಅಲ್ಲಿನ ಸಂಸ್ಕೃತಿಯೇ ಸಂಪೂರ್ಣ ಭಿನ್ನ. ಆದರೆ ನಾನು ಪಾಕಿಸ್ತಾನಕ್ಕೆ ಹೋದರೆ, ಅವರು ಪಂಜಾಬಿ ಹಾಗೂ ಇಂಗ್ಲಿಷ್ ಮಾತನಾಡುತ್ತಾರೆ. ಅವರ ಜತೆ ನಾನು ಹೆಚ್ಚು ಸಂಬಂಧ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ಸಿಧು ವಿವರಿಸಿದರು.

ಸಿಧು ಹೇಳಿಕೆಯನ್ನು ಟೀಕಿಸಿರುವ ಶಿರೋಮಣಿ ಅಕಾಲಿದಳ ವಕ್ತಾರ ದಲ್ಜೀತ್ ಸಿಂಗ್ ಚೀಮಾ, "ಸಂಪುಟ ಸಚಿವರಾಗಿದ್ದು ಸಿಧು ತಮ್ಮ ಶಬ್ದಗಳ ಬಗ್ಗೆ ಎಚ್ಚರ ವಹಿಸಬೇಕು" ಎಂದು ಹೇಳಿದ್ದಾರೆ. "ಇತರರನ್ನು ಹೊಗಳುವುದು ತಪ್ಪಲ್ಲ. ಆದರೆ ದೇಶವನ್ನು ಹೀಗಳೆಯಬಾರದು" ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಈ ಬಗ್ಗೆ ಅನಗತ್ಯ ವಿವಾದ ಹುಟ್ಟುಹಾಕಲಾಗಿದೆ. ಆಕ್ಷೇಪಾರ್ಹವಾದ್ದನ್ನು ನಾನೇನೂ ಹೇಳಿಲ್ಲ ಎಂದು ಸಿಧು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News