ಅಕ್ಬರ್ ವಿರುದ್ಧ ಆರೋಪಕ್ಕೆ ಈಗಲೂ ಬದ್ಧ: ಐವರು ಮಹಿಳಾ ಪತ್ರಕರ್ತೆಯರ ಸ್ಪಷ್ಟನೆ

Update: 2018-10-15 07:35 GMT

ಹೊಸದಿಲ್ಲಿ, ಅ.15: ತನ್ನ ಮೇಲಿನ ಲೈಂಗಿಕ ಕಿರುಕುಳ ಆರೋಪವನ್ನು ನಿರಾಕರಿಸಿದ್ದ ಕೇಂದ್ರ ಸಚಿವ ಹಾಗೂ ಮಾಜಿ ಸಂಪಾದಕ ಎಂಜೆ ಅಕ್ಬರ್ ಇದೊಂದು ರಾಜಕೀಯ ಪ್ರೇರಿತವಾಗಿದ್ದು, ಆರೋಪ ಹೊರಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವೆ ಎಂದು ಸೋಮವಾರ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಐವರು ಮಹಿಳಾ ಪತ್ರಕರ್ತೆಯರು, ತಾವು ಮಾಡಿದ್ದ ಆರೋಪಗಳಿಗೆ ಬದ್ಧವಾಗಿದ್ದೇವೆ. ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ಸವಾಲೆಸೆದಿದ್ದಾರೆ.

ಎಂಜೆ ಅಕ್ಬರ್ ಅವರ ಪ್ರತಿಕ್ರಿಯೆ ನಿರಾಸೆ ತಂದಿತು. ಆದರೆ, ಅಚ್ಚರಿ ಎನಿಸಲಿಲ್ಲ ಎಂದು ಇಬ್ಬರು ಪತ್ರಕತೆರ್ಯರು ಹೇಳಿದ್ದಾರೆ.

‘‘ನಾನು ಎರಡು ಘಟನೆಯ ಮೂಲಕ ಅಕ್ಬರ್ ಮೇಲೆ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಈಗಲೂ ಬದ್ಧನಾಗಿದ್ದೇನೆ. ಅಕ್ಬರ್ ಪ್ರತಿಕ್ರಿಯೆ ನೋಡಿ ನನಗೆ ಬೇಸರವಾಯಿತು. ಆದರೆ, ನಿರಾಸೆಯಾಗಲಿಲ್ಲ. ಇದೊಂದು ದೀರ್ಘ ಹೋರಾಟವಾಗಿದ್ದು, ಹಲವು ಪ್ರಕರಣಗಳಲ್ಲಿ ಕಾನೂನು ಹೋರಾಟವೇ ಮುಂದಿನ ನಡೆಯಾಗಿದೆ’’ ಎಂದು ‘ಏಶ್ಯನ್ ಏಜ್’ ಪತ್ರಿಕೆಯ ಸ್ಥಾನೀಯ ಸಂಪಾದಕಿ ಸುಪರ್ಣಾ ಶರ್ಮಾ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಇಂತಹ ಆರೋಪ ಕೇಳಿಬಂದಿದೆ. ಇದೊಂದು ರಾಜಕೀಯ ಪ್ರೇರಿತ ಆರೋಪ ಎಂಬ ಅಕ್ಬರ್ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯೂಯಾರ್ಕ್ ಮೂಲದ ಪತ್ರಕರ್ತೆ,‘‘ನಾನು ಭಾರತದ ಪ್ರಜೆಯಲ್ಲ. ಮತ ಹಾಕುವ ಹಕ್ಕು ನನಗಿಲ್ಲ. ನನ್ನಲ್ಲಿ ಯಾವುದೇ ರಾಜಕೀಯ ಕಾರ್ಯಸೂಚಿಯಿಲ್ಲ. ಲೈಂಗಿಕ ದೌರ್ಜನ್ಯ ಘಟನೆಯ ಬಗ್ಗೆ ನನ್ನ ತಂದೆ ಅಕ್ಬರ್‌ಗೆ ಇ-ಮೇಲ್ ಮಾಡಿ ತಿಳಿಸಿದ್ದರು. ಅದಕ್ಕೆ ಅವರು ಉತ್ತರ ನೀಡಿದ್ದರು. ಆ ಸಾಕ್ಷಿ ನನ್ನ ಬಳಿ ಇದೆ. ಅಕ್ಬರ್ ಹೇಳಿಕೆ ಬೇಸರ ತಂದಿದೆ. ಆದರೆ, ಅಚ್ಚರಿ ಎನಿಸಲಿಲ್ಲ. ನನ್ನ ಆರೋಪಕ್ಕೆ ಈಗಲೂ ಬದ್ಧನಾಗಿದ್ದೇನೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News