ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೇಂದ್ರ ಸಚಿವ ಅಕ್ಬರ್

Update: 2018-10-15 14:41 GMT

ಹೊಸದಿಲ್ಲಿ, ಅ.15: ತನ್ನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ವಿದೇಶ ಪ್ರವಾಸದಿಂದ ರವಿವಾರ ಹಿಂದಿರುಗಿದ್ದ ವಿದೇಶ ವ್ಯವಹಾರ ಇಲಾಖೆಯ ಸಹಾಯಕ ಸಚಿವ ಅಕ್ಬರ್, ತನ್ನ ವಿರುದ್ಧದ ಆರೋಪ ಸುಳ್ಳು, ತಿರುಚಿರುವಂತದ್ದು ಹಾಗೂ ಖೇದಕರ ಎಂದಿದ್ದರು. ಸೋಮವಾರ ವಕೀಲರ ಮೂಲಕ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಕ್ಬರ್, ಪ್ರಿಯಾ ರಮಣಿ ಒಂದು ವರ್ಷದ ಹಿಂದೆ ಮ್ಯಾಗಝಿನ್ ಲೇಖನವೊಂದರಲ್ಲಿ ಈ ಅಭಿಯಾನವನ್ನು ಆರಂಭಿಸಿದ್ದರು. ಆದರೆ ನನ್ನ ಹೆಸರನ್ನು ಅವರು ಉಲ್ಲೇಖಿಸಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಅಕ್ಬರ್ ಏನನ್ನೂ ಮಾಡಿಲ್ಲ. ಆದ್ದರಿಂದ ಹೆಸರು ಉಲ್ಲೇಖಿಸಿಲ್ಲ ಎಂದಿದ್ದರು. ನಾನು ಏನನ್ನೂ ಮಾಡಿಲ್ಲ ಎಂದಾದಲ್ಲಿ ಇಲ್ಲಿರುವ ಆರೋಪವೇನು ಎಂದು ಪ್ರಶ್ನಿಸಿದ್ದಾರೆ.

 ಆ ವ್ಯಕ್ತಿ(ಅಕ್ಬರ್) ನನ್ನ ಮೈಮೇಲೆ ಕೈಹಾಕಿಲ್ಲ ಎಂದು ಶುತಪಾ ಪೌಲ್ ಹೇಳಿರುವುದನ್ನು ಗಮನಿಸಬೇಕು. ಅಕ್ಬರ್ ಈಜುಕೊಳದೊಳಗೆ ಪಾರ್ಟಿ ಆಯೋಜಿಸಿದ್ದರು ಎಂದು ಇನ್ನೊಬ್ಬ ಮಹಿಳೆ ಅಂಜು ಭಾರತಿ ಎಂಬಾಕೆ ಆರೋಪಿಸಿದ್ದಾರೆ. ಆದರೆ ತನಗೆ ಈಜಲು ಬರುವುದಿಲ್ಲ ಎಂದು ಅಕ್ಬರ್ ಹೇಳಿದ್ದಾರೆ.

ತನ್ನ ವಿರುದ್ಧ ಆರೋಪಿಸಿರುವ ಘಟನೆ ನಡೆದ ಬಳಿಕವೂ ರಮಣಿ ಹಾಗೂ ಫಝಲಾ ವಹಾಬ್ ತನ್ನ ಕಚೇರಿಯಲ್ಲೇ ಕೆಲಸ ಮುಂದುವರಿಸಿದ್ದರು. ಅವರು ಆರೋಪಿಸಿರುವಂತಹ ಘಟನೆ ನಡೆದಿದ್ದರೆ ಅವರು ತನ್ನೊಂದಿಗೆ ಕೆಲಸ ಮುಂದುವರಿಸುತ್ತಿದ್ದರೇ ಎಂದು ಅಕ್ಬರ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News